ರಾಜಕೀಯರಾಜ್ಯ

ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ : ವಿಧಿಸುವ ಷರತ್ತುಗಳು ಏನು ಗೊತ್ತಾ?

Release of application form of Grilahakshmi Yojana: Do you know what are the conditions imposed?

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಕುರಿತಾದ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ, ಅರ್ಜಿ ನಮೂನೆ ಸಹ ಬಿಡುಗಡೆಯಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆ ಬಿಡುಗಡೆಯಾಗಿದೆ. ಫಲಾನುಭವಿಗಳು ಸೇವಾ ಸಿಂಧು ಕೇಂದ್ರ ಸಂಪರ್ಕಿಸಿ ಆ ಮೂಲಕ ಇಲ್ಲವೇ ನೇರವಾಗಿ ವೆಬ್​ಸೈಟ್​ನಲ್ಲಿ ಸೇವಾ ಸಿಂಧು ಪೋರ್ಟಲ್​ಗೆ ತೆರಳಿ ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ಸಲ್ಲಿಸಬಹುದಾಗಿದೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ ಯೋಜನೆ ನೀಡುವುದಾಗಿ ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ಗ್ಯಾರಂಟಿಯಾಗಿ ಘೋಷಿಸಿದ್ದರು. ಈ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಲಾಭ ಪಡೆದುಕೊಳ್ಳಲು ಸರ್ಕಾರವು ಹಲವು ಷರತ್ತುಗಳನ್ನು ವಿಧಿಸಿದೆ. ಈಗಾಗಲೇ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದೀಗ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ.

ಗೃಹಲಕ್ಷ್ಮಿ ಅರ್ಜಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದ್ದು, ‘ಗೃಹಲಕ್ಷ್ಮೀ’ ಅರ್ಜಿ ನಮೂನೆಯಲ್ಲಿ ಮೂವರ ಭಾವಚಿತ್ರ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರ ಅರ್ಜಿ ನಮೂನೆಯಲ್ಲಿದೆ.

ದಾಖಲೆ ಅಗತ್ಯ: ಗೃಹ ಲಕ್ಷ್ಮಿ ಅರ್ಜಿಯಲ್ಲಿ ಮನೆಯ ಯಜಮಾನಿ ಪತಿಯ ದಾಖಲೆಗಳನ್ನು ಬಯಸಲಾಗಿದೆ. ಪತಿಯ ಆಧಾರ್ ಕಾರ್ಡ್, ವೋಟರ್ ಐಡಿ ದಾಖಲೆ ಕೂಡ ಅರ್ಜಿ ಸಲ್ಲಿಕೆ ವೇಳೆ ಅಗತ್ಯವಾಗಿದೆ. ಮನೆಯ ಯಜಮಾನಿಗೆ ಆರ್ಥಿಕ ಬಲ ತುಂಬುವ ಈ ಮಹತ್ವದ ಯೋಜನೆ ಜಾರಿಗೆ ತರಲು ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತೀರ್ಮಾನಿಸಲಾಗಿತ್ತು. ಎರಡನೇ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಾಗಿತ್ತು. ಅಲ್ಲಿ ಅನುಮೋದನೆ ಪಡೆದ ಯೋಜನೆಯ ಅರ್ಜಿ ನಮೂನೆ ಇದೀಗ ಹೊರಬಿದ್ದಿದೆ.

ಅರ್ಜಿ ಸಲ್ಲಿಕೆ ವಿಧಾನ: ಈ ಯೋಜನೆಯ ಫಲಾನುಭವಿಗಳು ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ಇದೆ. ಆ ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15ರಂದು ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌ ಮೂಲಕವಾಗಲಿ ಅಥವಾ ಭೌತಿಕವಾಗಿಯಾಗಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆ ಷರತ್ತುಗಳು:

1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
2. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸಲಿದೆ.
3. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್‌ ಖಾತೆ ಮತ್ತು ಆಧಾರ್​ ಕಾರ್ಡ್​ಗಳನ್ನು ಜೋಡಣೆ ಮಾಡಬೇಕು.
4. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಸೌಲಭ್ಯ ಸಿಗುವುದಿಲ್ಲ.
5. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿಯು ಜಿಎಸ್‌ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ...

Back to top button
>