ರಾಜಕೀಯರಾಜ್ಯ

ನಮ್ಮ ಕೆಲಸ ಯಾವತ್ತೂ ಉಳಿಯುತ್ತದೆ, ಟೀಕೆಗಳು ಸಾಯುತ್ತವೆ : ಡಿಸಿಎಂ ಡಿ ಕೆ ಶಿವಕುಮಾರ್​

Our work will live forever, criticism will die: DCM DK Shivakumar

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಕಾಂಗ್ರೆಸ್​ ಪಕ್ಷದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಇಂದು ಜಾರಿ ಮಾಡಿದೆ. ಈ ಬಗ್ಗೆ ವಿಪಕ್ಷಗಳು ಎಷ್ಟೇ ಟೀಕೆ ಮಾಡಿದರೂ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​​ ಹೇಳಿದ್ದಾರೆ.

ನಮ್ಮ ಕೆಲಸ ಯಾವತ್ತೂ ಉಳಿಯುತ್ತದೆ, ಟೀಕೆಗಳು ಸಾಯುತ್ತವೆ : ಡಿಸಿಎಂ ಡಿಕೆಶಿ
ಬೆಂಗಳೂರು : ಟೀಕೆಗಳು ಸಾಯುತ್ತವೆ, ನಮ್ಮ ಕೆಲಸ ಯಾವತ್ತೂ ಉಳಿಯುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ಶಕ್ತಿ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ಕೊಟ್ಟಂತಹ ಕರ್ನಾಟಕದ ಜನತೆಗೆ ನಾವೆಲ್ಲ ಸದಾ ಚಿರಋಣಿಯಾಗಿರುತ್ತೇವೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂತಹ, ಈ ದೇಶಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಂತಹ ಪಕ್ಷದ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟಿದ್ದಕ್ಕೆ, ನಮ್ಮ ನುಡಿ, ನಡೆ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಾವೇ ಬಲಿಷ್ಠರು, ಡಬಲ್ ಎಂಜಿನ್ ಸರ್ಕಾರ ಎಂದವರನ್ನು ಕಿತ್ತೆಸೆದು ಮತ್ತೆ ಆಶೀರ್ವಾದ ಮಾಡಿದ್ದೀರಿ, ಯಾವುದೇ ಕಾರಣಕ್ಕೂ ಮಾತು ತಪ್ಪದೇ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದರು.

ಬಸವಣ್ಣನವರು ಒಂದು ಮಾತು ಹೇಳುತ್ತಾರೆ, ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗವು ಮೆಚ್ಚಿ ಅಹುದುಹುದೆನಬೇಕು. ಬಸವಣ್ಣನವರ ನಾಡಿನಲ್ಲಿ ಬದುಕುತ್ತಿದ್ದೇವೆ. ಕಳೆದ 2013ರಲ್ಲಿ ಬಸವಣ್ಣನವರ ಜಯಂತಿಯಂದೆ ಹಸಿದವರಿಗೆ ಅನ್ನ ಘೋಷಣೆ ಮಾಡಿ ನುಡಿದಂತೆ ನಡೆದಿದ್ದೆವು ಎಂದು ತಿಳಿಸಿದರು.

ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶೇ.98ರಷ್ಟು ಪ್ರಣಾಳಿಕೆಯನ್ನು ಈಡೇರಿಸಿದ್ದೆವು. ಹೆಣ್ಣು ಕುಟುಂಬದ ಕಣ್ಣು, ಯಾವುದಾದರೂ ಊರಿಗೆ ಹೋದರೆ ಅಲ್ಲಿ ಊರ ದೇವತೆ ಹೆಣ್ಣು. ದೇವರನ್ನು ವೆಂಕಟೇಶ್ವರ ಅಂತ ಕರೆಯೋದಿಲ್ಲ, ಲಕ್ಷ್ಮೀ ವೆಂಕಟೇಶ್ವರ ಎನ್ನುತ್ತೇವೆ, ಪಾರ್ವತಿ ಪರಮೇಶ್ವರ ಎಂದು ಕರೆಯುತ್ತೇವೆ, ಹೆಣ್ಣೇ ಈ ದೇಶದ ಶಕ್ತಿ. ಯಾರಾದರೂ ಆಹ್ವಾನ ಪತ್ರಿಕೆ ನೀಡಿದರೆ ಕೇವಲ ಡಿ.ಕೆ. ಶಿವಕುಮಾರ್ ಅವರಿಗೆ ಎಂದು ನೀಡುವುದಿಲ್ಲ. ಶ್ರೀಮತಿ, ಶ್ರೀ. ಡಿ.ಕೆ. ಶಿವಕುಮಾರ್ ಎಂದು ಹೇಳುತ್ತಾರೆ. ಅಂದರೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮೊದಲ ಪ್ರಾಶಸ್ತ್ಯ ಎಂದು ತಿಳಿಸಿದರು.

ಹೆಣ್ಣು ಶಕ್ತಿಯ ಪ್ರತಿರೂಪ ಎಂದು ಈ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ದೀಪಂಜ್ಯೋತಿ ಪರಂಜ್ಯೋತಿ ಎಂದು ಹೇಳಿ ದೀಪವನ್ನು ಬೆಳಗಿಸುವುದರ ಮೂಲಕ ಈ ರಾಜ್ಯದ ಅಂಧಕಾರವನ್ನು ತೊಲಗಿಸುವ ಕೆಲಸಕ್ಕೆ ಮುನ್ನುಡಿ ಬರೆದಿದ್ದೇವೆ. ಪರಿಶುದ್ಧವಾದ ಆಡಳಿತ ನೀಡಲು ನಾವು ಸನ್ನದ್ದರಾಗಿದ್ದೇವೆ. ವಿರೋಧ ಪಕ್ಷಗಳು ನಾನಾ ರೀತಿಯಲ್ಲಿ ಟೀಕೆ ಮಾಡುತ್ತಿವೆ. ನಮಗೆ ಆ ಟೀಕೆಗಳಿಗೆಲ್ಲ ಉತ್ತರ ಕೊಡುವುದಕ್ಕೆ ಸಮಯವಿಲ್ಲ, ನಮ್ಮ ಕೈಲಿ ಆಗೋದು ಇಲ್ಲ. ಏಕೆಂದರೆ ಉತ್ತಮ ಆಡಳಿತದ ಭವಿಷ್ಯ ನಮ್ಮ ಮುಂದಿದೆ. ಉತ್ತರ ಕೊಡುತ್ತ ಹೋದರೆ ಕೆಲಸ ಮಾಡೋಕೆ ಸಮಯವೇ ಇರುವುದಿಲ್ಲ. ಅದಕ್ಕೆ ಈ ಒಂದು ಮಾತನ್ನು ವಿರೋಧ ಪಕ್ಷಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ‌ ಎಂದರು.

ಇದೇ ಯೋಜನೆಯನ್ನು ಮಧ್ಯಪ್ರದೇಶದಲ್ಲಿ ಬಿಜೆಪಿಯವರು ಕಾಪಿ ಮಾಡಿ ಮಹಿಳೆಯರಿಗೆ 2 ಸಾವಿರ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿ 2 ಸಾವಿರ ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಕೂಗಾಡುತ್ತಿದ್ದಾರೆ. ಡಬಲ್ ಎಂಜಿನ್ ಅಲ್ಲ ಡಬಲ್ ನಿಲುವಿನ ಪಕ್ಷ ಎಂದರೆ ಬಿಜೆಪಿ. ನಾವು ಅವರನ್ನು ಟೀಕೆ ಮಾಡಲ್ಲ, ಅವಹೇಳನ ಮಾಡಲ್ಲ. ಏಕೆಂದರೆ ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ತಿಳಿಸಿದರು.

ಡಿಕೆಶಿ ವಿಶೇಷ ಪೋಷಾಕು : ಡಿಸಿಎಂ ಡಿ.ಕೆ ಶಿವಕುಮಾರ್ ಇಂದು ವಿಶೇಷ ಪೋಷಾಕಿನ‌ ಮೂಲಕ ಬಂದು ಗಮನ ಸೆಳೆದರು. ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ನೀಡಿದ ಶಾಲು ಹಾಗೂ ಪೇಟವನ್ನು ಧರಿಸಿ ಆಗಮಿಸಿದರು.

 

ಇದನ್ನೂ ಓದಿ...

Back to top button
>