ರಾಜ್ಯ

ಚಾಮುಂಡಿ ಬೆಟ್ಟದಲ್ಲಿ ಕೇಂದ್ರದ ‘ಪ್ರಸಾದ್ ಯೋಜನೆ’ಗೆ ಒಪ್ಪಿಗೆ; ಧಾರ್ಮಿಕ ಕ್ಷೇತ್ರದಲ್ಲಾಗುವ ಅಭಿವೃದ್ಧಿಗಳೇನು?

Agreed to Centre's 'Prasad Yojana' in Chamundi Hills; What are the developments in the religious field?

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಮೈಸೂರು : ಪ್ರವಾಸೋದ್ಯಮ ಇಲಾಖೆಯಿಂದ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಪ್ರಸಾದ್ ಯೋಜನೆ ಜಾರಿಗೆ ತಂದಿದೆ.

ಈ ಯೋಜನೆಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವಾಸಸ್ಥಾನ ಚಾಮುಂಡಿ ಬೆಟ್ಟ ಆಯ್ಕೆಯಾಗಿತ್ತು. ಬೆಟ್ಟವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅಂದಾಜು 45.75 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಆಡಳಿತಾತ್ಮಕವಾಗಿ ಕೇಂದ್ರ ಅನುಮೋದನೆ ನೀಡಿದೆ.

ಈ ಹಿಂದೆ ಕೇಂದ್ರದ ಮಹತ್ವದ ಯೋಜನೆ ಪ್ರಸಾದ್‌ಗೆ ಚಾಮುಂಡಿ ಬೆಟ್ಟವನ್ನು ಆಯ್ಕೆ ಮಾಡಿರುವುದಾಗಿ ಸರ್ಕಾರ ಘೋಷಿಸಿತ್ತು. ಇದೀಗ ಯೋಜನೆ ಜಾರಿಗೆ ಬಂದಿದೆ. ಬೇಕಿರುವ ಅನುದಾನದ ಬಿಡುಗಡೆಗೂ ಕ್ರಮ ವಹಿಸಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಅಭಿವೃದ್ಧಿಗಳೇನು?: ಪ್ರಸಾದ್ ಯೋಜನೆಗೆಚಾಮುಂಡಿ ಬೆಟ್ಟ ಸಹ ಆಯ್ಕೆ ಆಗಿರುವುದರಿಂದ ಬೆಟ್ಟದಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಪ್ರಮುಖವಾಗಿ ಚಾಮುಂಡಿ ತಾಯಿಯ ಸನ್ನಿಧಿ, ಮಹಿಷಾಸುರ ಪ್ರತಿಮೆ ಸುತ್ತಲಿನ ಪ್ರಾಂಗಣ, ದೇವಿಪಾದ, ವೀಕ್ಷಣಾ ಪ್ರದೇಶಗಳಲ್ಲಿನ ಸುತ್ತಲಿನ ಅಭಿವೃದ್ಧಿಗೆ ಪ್ರತ್ಯೇಕ ಕಾಮಗಾರಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಭಕ್ತರು ಸರದಿ ಸಾಲಿನಲ್ಲಿ ನಿಲ್ಲುವ ಪ್ರದೇಶ, ದೇಗುಲದ ಮುಂಭಾಗದ ಸಭಾಂಗಣ ಮತ್ತು ಶೌಚಾಲಯಗಳಿಗೆ ಹೊಸರೂಪ ದೊರೆಯಲಿದೆ. ಭಕ್ತರ ಅನುಕೂಲಕ್ಕಾಗಿ ಚಪ್ಪಲಿ ಸ್ಟಾಂಡ್ ಮತ್ತು ಕ್ಲಾಕ್ ರೂಮ್ ಕೂಡಾ ಈ ಯೋಜನೆಯಡಿ ನಿರ್ಮಾಣ ಆಗಲಿದೆ.

ಎಷ್ಟೆಷ್ಟು ಹಣ? : ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಯಾವ ಕಾಮಗಾರಿಗಳಿಗೆ ಎಷ್ಟು ಹಣ ಮಿಸಲಿಡಬೇಕೆಂದು ಅಂದಾಜಿಸಿ ತಿಳಿಸಿದೆ. ಮಹಿಷಾಸುರ ಪ್ರತಿಮೆ ಬಳಿ ಪೊಲೀಸ್ ಬೂತ್, ಮಾಹಿತಿ ಕೇಂದ್ರ, ಕಂಟ್ರೋಲ್ ರೂಂ, ಭಕ್ತರಿಗಾಗಿ ಆಸನ ವ್ಯವಸ್ಥೆ ಮಾಡಲು ಸುಮಾರು 2.33 ಕೋಟಿ ಅನುದಾನ ಸಿಗಲಿದೆ. ಕುಡಿಯುವ ನೀರಿನ ಘಟಕ, ಕಾರಂಜಿ, ಕಲ್ಲಿನ ಮಾದರಿಯ ಪ್ರವೇಶ ದ್ವಾರ, ನಾಮಫಲಕಗಳು ಬರಲಿವೆ. ಇದಕ್ಕಾಗಿ 5.17 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ದೇವಿಕೆರೆ ಪ್ರದೇಶದಲ್ಲಿ 1.51 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಲಿನ ಮಂಟಪ, ಪ್ರವೇಶ ದ್ವಾರ, ಉದ್ಯಾನ ಅಭಿವೃದ್ಧಿ, ಮೆಟ್ಟಿಲುಗಳ ನವೀಕರಣ ಮತ್ತು ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.

ನಂದಿ ಪ್ರತಿಮೆ ಬಳಿ ಸರದಿ ಸಾಲಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆಸನಗಳ ವ್ಯವಸ್ಥೆಯನ್ನು 4.34 ಕೋಟಿ ರೂಪಾಯಿಗಳಲ್ಲಿ ಮಾಡಲು ಅಂದಾಜಿಸಲಾಗಿದೆ. ನಂತರ ಪಾದದ ಬಳಿಯ ಮೆಟ್ಟಿಲುಗಳ ಬದಿಯ ಕಂಬಿಗಳ ಅಳವಡಿಕೆ, ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ 3.12 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಜೊತೆಗೆ ಬೆಟ್ಟದ ಮೇಲಿನ ವೀಕ್ಷಣಾ ಸ್ಥಳದಲ್ಲಿ ಮಂಟಪ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಅಲ್ಲಿ ಟಿಕೇಟ್ ಕೌಂಟರ್, ಕುಡಿಯುವ ನೀರಿನ ವ್ಯವಸ್ಥೆ, ಕಂಬಿಗಳ ವ್ಯವಸ್ಥೆ ಮುಂತಾದ ವ್ಯವಸ್ಥೆಗೆ 1.34 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಇದರ ಜೊತೆಗೆ, ಚಾಮುಂಡಿ ಬೆಟ್ಟದಲ್ಲಿ ಸುಸಜ್ಜಿತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಸಹ ಯೋಜನೆ ರೂಪಿಸಿದೆ. ತಲಾ 56,488 ರೂಪಾಯಿ ವೆಚ್ಚದಲ್ಲಿ ಸುಮಾರು 152 ಕ್ಯಾಮರಾಗಳ ಅಳವಡಿಕೆಗೆ ಉದ್ದೇಶಿಸಲಾಗಿದೆ. ಸಾರ್ವಜನಿಕ ಅನೌನ್ಸ್‌ಮೆಂಟ್ ವ್ಯವಸ್ಥೆ ಬರಲಿದೆ ಎಂದು ಯೋಜನೆಯಲ್ಲಿ ತಿಳಿಸಲಾಗಿದೆ.

ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಹೇಳುವುದೇನು? : ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಸಾದ್ ಯೋಜನೆಯಡಿ 45.70 ಕೋಟಿ ಹಣ ಬಿಡುಗಡೆ ಮಾಡಿದ್ದು, ಇದರಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಬಹುದು. ಆದರೆ ನೈಸರ್ಗಿಕವಾಗಿರುವ ಬೆಟ್ಟದಲ್ಲಿ ಕಾಮಗಾರಿಗಳ ಹೆಸರಿನಲ್ಲಿ ಕಾಂಕ್ರಿಟ್ ಪ್ರದೇಶವಾಗಿ ಮಾಡಬಾರದು. ನೈಸರ್ಗಿಕ ಪರಿಸರವನ್ನು ಉಳಿಸಿಕೊಂಡು ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡಿ ಎಂಬುದು ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ಆಗ್ರಹವಾಗಿದೆ.

ಇದನ್ನೂ ಓದಿ...

Back to top button
>