
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 11 ಮಂದಿ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದು ಬಿಬಿಎಂಪಿಯಲ್ಲಿ ನಡೆದ ದೊಡ್ಡಮಟ್ಟದ ಹಗರಣವೆಂದು ಹೇಳಲಾಗುತ್ತಿದೆ.
ಅಮಾನತಾದ ಅಧಿಕಾರಿಗಳು ಯಾರು?: ಎಇಇ ಜಿ.ಎಂ.ಚಂದ್ರನಾಥ (ನಿವೃತ್ತಿ), ಟಿವಿಸಿಸಿ ಕೋಶ ಸಹಾಯಕ ಅಭಿಯಂತರ ಸತೀಶ್ ಕುಮಾರ್, ಆರ್.ಆರ್. ನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಬಸವರಾಜ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ದರಾಮಯ್ಯ, ಸಹಾಯಕ ಅಭಿಯಂತರ ಎಸ್.ಜಿ.ಉಮೇಶ್, ಟಿವಿಸಿಸಿ ವಿಭಾಗದ ಮುಖ್ಯ ಎಂಜಿನಿಯರ್ ದೊಡ್ಡಯ್ಯ, ರಾಜರಾಜೇಶ್ವರಿ ನಗರ ವಲಯದ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್, ವಲಯದ ಸಹಾಯಕ ಎಂಜಿನಿಯರ್ ಶಿಲ್ಪಾ, ರಾಜರಾಜೇಶ್ವರಿ ನಗರ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾರತಿ, ಲಗ್ಗೆರೆ ವಲಯದ ಡೆಪ್ಯುಟಿ ಮ್ಯಾನೇಜರ್ ಅನಿತಾ ಹಾಗೂ ಗೂಳಿಗೌಡ ಅಮಾನತುಗೊಂಡ ಅಧಿಕಾರಿಗಳು.
ಸಂಸದ ಡಿ.ಕೆ. ಸುರೇಶ್ ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತಕ್ಕೆ 118 ಕೋಟಿ ರೂ. ಸರ್ಕಾರಿ ಹಣ ವಿವಿಧ ಕಾಮಗಾರಿ ಹೆಸರಿನಲ್ಲಿ ನಷ್ಟವಾಗಿದ್ದು ಬೆಳಕಿಗೆ ಬಂದಿತ್ತು.
ಡೀಮ್ಡ್ ಅರಣ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ ಡಿಸಿಎಫ್ ಕೆ. ಹರೀಶ್ ಅಮಾನತು
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು: ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಬಳಿಯ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಕೆ. ಹರೀಶ್ ಅವರನ್ನು ಇತ್ತೀಚೆಗೆ ಸೇವೆಯಿಂದ ಅಮಾನತು ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿತ್ತು.
ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಸಮೀಪದ ದಡಿಘಟ್ಟ ಗ್ರಾಮದ ಸರ್ವೆ ನಂಬರ್ 24 ರಲ್ಲಿನ ಅರಣ್ಯ ಪ್ರದೇಶದ ಒಟ್ಟು 21 ಎಕರೆ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಉಪ ಸಂರಕ್ಷಣಾಧಿಕಾರಿ ಹರೀಶ್ ಅವರು ನಿರಾಕ್ಷೇಪಣಾ ಪತ್ರ ನೀಡಿದ್ದರು. ಇದು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅರಣ್ಯ ಇಲಾಖೆ, ಉಪ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ನೀಡಿತ್ತು.
ಈ ಪ್ರಕರಣದ ಬಗ್ಗೆ ಅರಣ್ಯ ಮತ್ತು ಜೀವ ಪರಿಸರ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅವರು ಹಿರಿಯ ಅಧಿಕಾರಿಗಳಿಂದ ವರದಿ ಪಡೆದು ಹಾಸನದ ಉಪ ಸಂರಕ್ಷಣಾಧಿಕಾರಿ ಹರೀಶ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಸಚಿವರ ನಿರ್ದೇಶನದಂತೆ ಅರಣ್ಯ ಪಡೆಯ ಮುಖ್ಯಸ್ಥ ರಾಜೀವ್ ರಂಜನ್ ಅವರು ಮೇ ತಿಂಗಳ ಅಂತ್ಯದಲ್ಲಿ ಅರಣ್ಯಾಧಿಕಾರಿ ಹರೀಶ್ ಅವರ ಪಾತ್ರ ಕುರಿತು ವರದಿ ಸಲ್ಲಿಸಿದ್ದರು.