ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆಯಲ್ಲಿ ಯಾವುದೇ ಗೊಂದಲ ಆಗಬಾರದು. ಎಲ್ಲ ಅರ್ಹ ಮಹಿಳೆಯರಿಗೂ ಯೋಜನೆಯ ಲಾಭ ಸಿಗಲಿ ಎಂಬ ಕಾರಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ತುಸು ವಿಳಂಬವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಯೋಜನೆ ಜಾರಿಯಲ್ಲಿ ಸಮಸ್ಯೆ ಆಗುತ್ತಿಲ್ಲ. ಈ ಯೋಜನೆ ಎಲ್ಲ ಅರ್ಹರಿಗೂ ಸಿಗಬೇಕು ಎಂಬುದು ನಮ್ಮ ಉದ್ದೇಶ. ಯೋಜನೆಯ ಅರ್ಜಿಗಳು ಆನ್‌ಲೈನ್‌ನಲ್ಲಿ ಶೀಘ್ರದಲ್ಲಿ ಸಿಗಲಿವೆ. ಅರ್ಜಿ ಭರ್ತಿಗಾಗಿ ಪ್ರತ್ಯೇಕ ಸಾಫ್ಟ್ ವೇರ್ ಮತ್ತು ಆಯಪ್ ಸಿದ್ಧಪಡಿಸಲಾಗುತ್ತಿದೆ. ಫಲಾ ನುಭವಿಗಳಿಗೆ ನೆರವಾಗಲು ಪ್ರತಿ ಬೂತ್‌ನಲ್ಲಿ 3-4 ಜನರನ್ನು ನೇಮಿಸುತ್ತಿದ್ದೇವೆ. 1.13 ಕೋಟಿ ಕುಟುಂ ಬಗಳು ಇದರ ಲಾಭ ಪಡೆಯಲಿವೆ ಎಂದರು.
ಹೊಸ ಸಾಫ್ಟ್‌ವೇರ್ ಅನಾವರಣ ಮಾಡಿದಾಗ ಗೊಂದಲ ಆಗಬಾರದು ಎಂಬ ಒಂದೇ ಕಾರಣಕ್ಕೆ ಸಾಫ್ಟ್‌ವೇರ್ ಸಿದ್ಧಪಡಿಸುವ ಕಾರ್ಯವನ್ನು ಬಹಳ ಸೂಕ್ಷ್ಮವಾಗಿ ನಿರ್ವಹಿಸಲಾಗುತ್ತಿದೆ. ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ನುರಿತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. “ಗೃಹಜ್ಯೋತಿ’ಗೆ ರವಿವಾರದಿಂದಲೇ ಅರ್ಜಿ ಆಹ್ವಾನಿಸಿದ್ದೇವೆ ಎಂದರು.
ಅಕ್ಕಿಯಲ್ಲಿ ಕೇಂದ್ರ ರಾಜಕೀಯ
ಅಕ್ಕಿ ಹಂಚಿಕೆ ವಿಚಾರದಲ್ಲಿ ಕೇಂದ್ರ ರಾಜಕಾರಣ ಮಾಡುತ್ತಿದೆ. ಎಫ್‌ಸಿಐನವರು ಮೊದಲು ಅಕ್ಕಿ ಕೊಡುವುದಾಗಿ ಹೇಳಿ ಈಗ ಮಾತು ತಪ್ಪಿದ್ದಾರೆ. ಆದರೆ ಜನರು ಚಿಂತಿಸಬೇಕಾಗಿಲ್ಲ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.
ಮಹಿಳೆಯರು ನೆಮ್ಮದಿಯಿಂದ ಬದುಕಲಿ
ಮಹಿಳೆಯರು ಕೇವಲ ಮನೆ ಕೆಲಸ, ಮಕ್ಕಳನ್ನು ಹೆರಲು ಮಾತ್ರ ಸೀಮಿತ ವಾಗಬಾರದು. ಮಹಿಳೆಯರು ನೆಮ್ಮದಿಯಿಂದ ಜೀವನ ಮಾಡಬೇಕೆಂಬ ಉದ್ದೇಶ ಸಿದ್ದರಾಮಯ್ಯ ಸರಕಾರದ್ದಾಗಿದೆ ಎಂದು ಲಕ್ಷ್ಮೀ ಹೇಳಿದರು.