ರಾಜಕೀಯರಾಜ್ಯ

ಜೂ. 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನ : ಎಲ್ಲಾ ಜಾತಿ, ಧರ್ಮಕ್ಕೆ ಸಲ್ಲುವ ರಾಜ್ಯಮಟ್ಟದ ಕಾರ್ಯಕ್ರಮ ಎಂದ ಡಿಸಿಎಂ ಡಿ ಕೆ ಶಿವಕುಮಾರ್

Jr. Decision to celebrate Nadaprabhu Kempegowda Jayanti on 27th: DCM DK Shivakumar said that it is a state-level event for all castes and religions.

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು : ಜೂನ್ 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ ನಡೆಯಿತು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಜೂನ್ 27 ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಸ್ಥಳೀಯ ಶಾಸಕರಿಗೆ ನೀಡಲಾಗಿದೆ. ಬೆಂಗಳೂರಿನ ಐದು ಭಾಗದಿಂದ ಜ್ಯೋತಿ ತರಲಾಗುವುದು. ಕೆಂಪೇಗೌಡ ಜಯಂತಿ ಕೇವಲ ಒಂದು ಸಮುದಾಯ, ಜಾತಿ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ. ಎಲ್ಲಾ ಜಾತಿ ಹಾಗೂ ಧರ್ಮಕ್ಕೆ ಸಲ್ಲುವ ರಾಜ್ಯಮಟ್ಟದ ಕಾರ್ಯಕ್ರಮ. ನಮ್ಮ ಸರ್ಕಾರದ ಅವಧಿಯಲ್ಲಿ ಜೂನ್ 27ರಂದು ಪ್ರತಿ ತಾಲೂಕಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಬೇಕು ಎಂದು ಆದೇಶ ಮಾಡಿದ್ದೆವು. ಅದೇ ರೀತಿ ಸರ್ಕಾರದ ವತಿಯಿಂದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಸಂಘ ಸಂಸ್ಥೆಗಳು ಭಾಗವಹಿಸುವಂತೆ ಮನವಿ ಮಾಡಿದ್ದೇವೆ ಎಂದರು.

ಬಿಬಿಎಂಪಿಯ ಎಲ್ಲಾ ವಾರ್ಡ್ ಗಳಲ್ಲೂ ಕಾರ್ಯಕ್ರಮ ನಡೆಯುತ್ತಿತ್ತು. ಬಿಬಿಎಂಪಿ ಚುನಾವಣೆ ನಡೆಯದ ಹಿನ್ನೆಲೆ ಒಂದೆಡೆಯಾದರೆ, ಮತ್ತೊಂದೆಡೆ ವಾರ್ಡ್ ರಚನೆ ಕುರಿತ ಗೊಂದಲ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಜೂನ್ 28ರಿಂದ ಜುಲೈ 8ನೇ ತಾರೀಕಿನವರೆಗೆ 28 ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಡಿಕೆಶಿ ತಿಳಿಸಿದರು.

ಹಿಂದಿನ ಸರ್ಕಾರ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಹಾಸನದಲ್ಲಿ ಮಾಡುವ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಅದನ್ನು ನಾವು ನಿಲ್ಲಿಸುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಲ್ಲಿ ಜೂನ್ 27ರ ಬೆಳಗ್ಗೆ 9 ಗಂಟೆಗೆ ಕೆಂಪೇಗೌಡರ 4 ಗೋಪುರಗಳಿಂದ ಹಾಗೂ ಮಾಗಡಿಯಿಂದ ಮೂರ್ನಾಲ್ಕು ಶಾಸಕರ ಸಮ್ಮುಖದಲ್ಲಿ ಜ್ಯೋತಿ ಉದ್ಘಾಟನೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಐವರು ಸಚಿವರು ತೆರಳಲಿದ್ದಾರೆ. ಅಂದು 12 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿ ಕಾರ್ಯಕ್ರಮ ಜರುಗಲಿದ್ದು, ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಿದೆ.

ಎಲ್ಲಾ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆಂಪೇಗೌಡ ಪ್ರಾಧಿಕಾರ ವತಿಯಿಂದ ನಡೆಸಲಾಗುವುದು. ಇನ್ನು, ಪಾಲಿಕೆ ವತಿಯಿಂದ ಜುಲೈ 9 ರಂದು 198 ವಾರ್ಡ್ ಗಳಲ್ಲಿ ಬೆಂಗಳೂರಿಗೆ ಸೇವೆ ಮಾಡಿದವರನ್ನು ಗುರುತಿಸಿ ಅವರಿಗೆ ಕೆಂಪೇಗೌಡ ಬೆಂಗಳೂರು ನಗರ ಪ್ರಶಸ್ತಿ ನೀಡಲಾಗುವುದು ಎಂದು ಶಿವಕುಮಾರ್​ ಮಾಹಿತಿ ನೀಡಿದರು. ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಅನೇಕ ಸಂಘ ಸಂಸ್ಥೆಯವರು ಸಭೆಯಲ್ಲಿ ಭಾಗವಹಿಸಿದ್ದರು.

ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಈ ಕೆಳಕಂಡಂತೆ ಇದೆ.

1. ಸಂಸ್ಕೃತಿ ಇಲಾಖೆ ಕಡೆಯಿಂದ ಜೂನ್ 27 ರಂದು ರಾಜ್ಯದ ಎಲ್ಲ ತಾಲೂಕಿನಲ್ಲೂ ರಾಜ್ಯ ಮಟ್ಟದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಕಡ್ಡಾಯ ಆಚರಣೆಗೆ ಸೂಚನೆ.
2. ಮಾಗಡಿ ಯಲಹಂಕ, ಕೆಂಪಾಂಬುದಿ ಕೆರೆ, ಲಾಲ್ ಬಾಗ್ ಸೇರಿದಂತೆ ನಗರದ 5 ಕಡೆಗಳಿಂದ ಜ್ಯೋತಿ ಹಿಡಿದು ವಿಧಾನಸೌಧಕ್ಕೆ ಜಾತ್ರಾ ಮೆರವಣಿಗೆ.
3. ಜೂ.27 ರಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿರುವ ಮೆರವಣಿಗೆ ಸಚಿವರಿಂದ ಉದ್ಘಾಟನೆ.
4. 12 ಗಂಟೆಗೆ ವಿಧಾನಸೌಧದ ಎದುರಿರುವ ಕೆಂಪೇಗೌಡ ಪ್ರತಿಮೆಯ ಬಳಿ ಮೆರವಣಿಗೆ ಆಗಮನ.
5. ಮಧ್ಯಾಹ್ನ 12 ಗಂಟೆಯ ನಂತರ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ.
6. ಮೂರು ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವ, ಬಿಎಲ್ ಶಂಕರ್ ನೇತೃತ್ವದಲ್ಲಿ ಸಾಧಕರ ಆಯ್ಕೆ.
7. ಬೆಂಗಳೂರು ನಗರದಲ್ಲಿ ಜೂ. 28 ರಿಂದ ಜುಲೈ 5 ರ ವರೆಗೆ ಶಾಸಕರ ಅನುಕೂಲಕ್ಕೆ ತಕ್ಕಂತೆ ಎಲ್ಲ ಬೆಂಗಳೂರಿನ ಎಲ್ಲ ಕ್ಷೇತ್ರದಲ್ಲೂ ಕಾರ್ಯಕ್ರಮ ಕಡ್ಡಾಯ ಆಚರಿಸಬೇಕು.
8. ಜುಲೈ 9ನೇ ತಾರೀಖು ಬಿವಿಎಂಪಿ ವತಿಯಿಂದ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
9. ಬಿಬಿಎಂಪಿ ವಾರ್ಡ್ ಮಟ್ಟದ ಪ್ರಶಸ್ತಿಗೆ 198 ಜನ ಸಾಧಕರನ್ನು ಆಯ್ಕೆ ಮಾಡಲಾಗುವುದು. ಸಾಧಕರ ಆಯ್ಕೆಗೆ ಕಮಿಟಿ ರಚನೆ ಮಾಡಲಾಗುವುದು.
10. ಎಲ್ಲ ಜಾತಿ ಧರ್ಮಗಳ ಸಾಧಕರಿಗೂ ಪ್ರಶಸ್ತಿ ನೀಡುವ ಉದ್ದೇಶ.
11. ಕ್ರೀಡೆ ಸಾಹಿತಿ ಸಮಾಜಸೇವೆ ಮಾನದಂಡದ ಅಡಿಯಲ್ಲಿ ಸಾಧಕರ ಆಯ್ಕೆ.
12. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಸನದಲ್ಲೂ ಪ್ರತ್ಯೇಕ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಹಾಗೆ ಮುಂದುವರೆಯಲಿದೆ.

ಇದನ್ನೂ ಓದಿ...

Back to top button
>