ರಾಜಕೀಯರಾಜ್ಯ

ಪಕ್ಷ ವಿರೋಧಿಗಳನ್ನು ಹೊರಹಾಕಿ: ಬೊಮ್ಮಾಯಿಗೆ ಜಾರಕಿಹೊಳಿ ಮನವಿ

Expel party opponents: Jarakiholi appeals to Bommai

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಳಗಾವಿ, ಜೂನ್ 25: ಬಿಜೆಪಿಯಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವರನ್ನು ಹೊರಗಡೆ ಹಾಕುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಈ ಒತ್ತಾಯ ಮಾಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ಶಾಸಕರು ಸೇರಿದಂತೆ ಎಲ್ಲರೂ ಧೈರ್ಯ ಕಳೆದುಕೊಂಡಿದ್ದರು. ಕಾಂಗ್ರೆಸ್ ಬಿಜೆಪಿಗಿಂತ ಕೇವಲ 12 ಲಕ್ಷ ಮತಗಳನ್ನು ಹೆಚ್ಚಾಗಿ ಪಡೆದು ಸರ್ಕಾರ ರಚನೆ ಮಾಡಿದೆ. ನಮ್ಮ ಜೊತೆ ಪ್ರಧಾನಿ ನರೇಂದ್ರ ಮೋದಿಯವರಂತಹ ನಾಯಕರಿದ್ದು, ಲೋಕಸಭಾ ಚುನಾವಣೆಯಲ್ಲಿ ಈ ಮತಗಳನ್ನು ಬಿಜೆಪಿ ಕಡೆ ತಿರುಗಿಸಿಕೊಳ್ಳಬಹುದು ಎಂದು ಹೇಳಿದರು.

ಕೆಲವು ನಾಯಕರು ಬಿಜೆಪಿಯಲ್ಲಿದ್ದುಕೊಂಡು ಬಲಿಷ್ಠರಾಗಿ ನಂತರ ಸ್ವಪಕ್ಷದವರ ಸೋಲಿಗೆ ಕಾರಣವಾಗಿದ್ದಾರೆ. ರಾಮದುರ್ಗ, ಕಿತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮವರೇ ನಮ್ಮ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದಾರೆ. ಟಿಕೆಟ್ ಅಂತಿಮವಾದ ಬಳಿಕ ಕೆಲ ನಾಯಕರು ವಿರೋಧಿಗಳಂತೆ ಕೆಲಸ ಮಾಡಿದರು. ಇದು ಕಾರ್ಯಕರ್ತರಿಗೆ ನೋವು ತಂದಿದೆ. ಒಂದು ಸೀಟ್‌ ಕೂಡ ಗೆಲ್ಲಿಸದ ನಾಯಕರನ್ನು ಕೋರ್ ಕಮಿಟಿಯಲ್ಲಿ ಇಟ್ಟುಕೊಳ್ಳಬೇಡಿ, ಪಕ್ಷ ವಿರೋಧಿಗಳನ್ನು ಹೊರಗಿಟ್ಟು ಲೋಕಸಭಾ ಚುನಾವಣೆಯನ್ನು ಎದುರಿಸೋಣ ಎಂದು ಕರೆ ನೀಡಿದರು. ಹೊಂದಾಣಿಕೆ ರಾಜಕೀಯ ವಿವಾದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ಒಳ ಜಗಳ ಆರಂಭವಾಗಿದೆ. ತಮ್ಮದೇ ಪಕ್ಷದ ಕೆಲವು ಮುಖಂಡರ ವಿರುದ್ಧ ಹಲವು ನಾಯಕರು ಸಿಡಿದೆದ್ದಿದ್ದಾರೆ.

ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ, ಸಿ.ಟಿ. ರವಿ ಆರೋಪ ಮಾಡಿದ್ದರು. ಸಿದ್ದರಾಮಯ್ಯ ಜೊತೆ ಹಲವು ಮುಖಂಡರು ಒಳಒಪ್ಪಂದ ಮಾಡಿಕೊಂಡಿದ್ದಕ್ಕೆ ಚುನಾವಣೆಯಲ್ಲಿ ಸೋಲಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕೆಲವು ನಾಯಕರು ಮೌನವಾಗಿದ್ದಾರೆ ಎಂದು ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಯಾವ ಪ್ರತಿಕ್ರಿಯೆ ನೀಡಿಲ್ಲವಾದರೂ, ಬಿಜೆಪಿಯಲ್ಲಿ ಈ ಬಗ್ಗೆ ಒಳಗೊಳಗೆ ಅಸಮಾಧಾನ ಇರುವುದಂತೂ ನಿಜ ಎನ್ನಲಾಗಿದೆ.

ಯಡಿಯೂರಪ್ಪ ಅಸಮಾಧಾನ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಎಸ್‌ವೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಮೋಸ ಮಾಡಿದವರನ್ನು ಹೊರ ಹಾಕಬೇಕು ಎಂದು ಮುನಿರಾಜು ಹೇಳುತ್ತಿದ್ದಂತೆ ಕಾರ್ಯಕರ್ತರು ಕೋಪಗೊಂಡಿದ್ದು, ನೀವು ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದರೆ ನಡೆಯುತ್ತದಾ ಎಂದು ಪ್ರಶ್ನೆ ಮಾಡಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಯಡಿಯೂರಪ್ಪ ಕಾರ್ಯಕರ್ತರಿಗೆ ಸುಮ್ಮನೆ ಇರುವಂತೆ ಗದರಿದ್ದಾರೆ. ನಿಮ್ಮ ಅನಿಸಿಕೆ ಏನೆ ಇದ್ದರೂ ವೇದಿಕೆ ಬಂದು ಹೇಳಿ, ನಾನು ಇಲ್ಲೇ ಇರುತ್ತೇನೆ, ಮನವಿ ಮಾಡುತ್ತೇನೆ ಈಗ ಸುಮ್ಮನಿರಿ ಎಂದು ಹೇಳಿದರ ಬಳಿಕ ಕಾರ್ಯಕರ್ತರು ಸುಮ್ಮನಾಗಿದ್ದಾರೆ.

ಇದನ್ನೂ ಓದಿ...

Back to top button
>