ರಾಜ್ಯ

40 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಮಂಡ್ಯದ ಮೈಶುಗರ್ ಕಾರ್ಖಾನೆ

Mysugar factory in Mandya has outstanding electricity bill of Rs 40 crore

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಮಂಡ್ಯ : ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆಯಾಗಿದ್ದು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತೀಚೆಗಷ್ಟೇ ಪುನರಾರಂಭಗೊಂಡ ಮಂಡ್ಯದ ಮೈಶುಗರ್ ಕಾರ್ಖಾನೆ ಕೋಟಿ ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾಗಿರುವ ಮೈಶುಗರ್ 2000ನೇ ಇಸವಿಯಿಂದಲೂ ಕರೆಂಟ್ ಬಿಲ್ ಕಟ್ಟದೇ 40 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ.

ಕಾರ್ಖಾನೆಯ ಪುನರಾರಂಭಕ್ಕೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ 50 ಕೋಟಿ ರೂ ಬಿಡುಗಡೆ ಮಾಡಿತ್ತು. ನಂತರ ಕಾರ್ಖಾನೆ ಪುನಾರಂಭವಾಗಿದೆ. ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್ ಕಬ್ಬು ನುರಿಯುವ ಗುರಿಯನ್ನು ಕಾರ್ಖಾನೆ ಹೊಂದಿದೆ. ಇದಕ್ಕೆ ವಿದ್ಯುತ್ ಪೂರೈಕೆಯ ಅವಶ್ಯಕತೆಯಿದೆ. ಆದರೆ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿರುವುದು ತೊಡಕಾಗಿದೆ.

ಮೈಶುಗರ್ ಕಾರ್ಖಾನೆಗೆ ವಿದ್ಯುತ್ ಪೂರೈಕೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮನವಿ ಮಾಡಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಪತ್ರ ಬರೆದಿದ್ದಾರೆ. ಮೈಶುಗರ್ ಹಲವು ವರ್ಷಗಳಿಂದ ನಷ್ಟಕ್ಕೆ ಸಿಲುಕಿದೆ. 40.86 ಕೋಟಿ ರೂ ಬಿಲ್ ಬಾಕಿ ಉಳಿಸಿಕೊಂಡಿದೆ. ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ನುರಿಯುವ ಅವಶ್ಯಕತೆ ಇದ್ದು ವಿದ್ಯುತ್ ಪೂರೈಕೆ ಮಾಡಿದರೆ, ಹಂತಹಂತವಾಗಿ ಬಾಕಿ ಮೊತ್ತ ಪಾವತಿಸಲಾಗುತ್ತದೆ. ಆದ್ದರಿಂದ ಚೆಸ್ಕಾಂ ನಿರ್ದೇಶಕರಿಗೆ ವಿದ್ಯುತ್ ಪೂರೈಸಲು ಆದೇಶಿಸುವಂತೆ ಪತ್ರದಲ್ಲಿ ಅವರು ಕೋರಿದ್ದಾರೆ.

ಮೈಶುಗರ್ ಕಾರ್ಖಾನೆಗೆ ವಿದ್ಯುತ್ ಪೂರೈಸಲು ಮನವಿ
ಜೂನ್​ 16ರಂದು ಮೈಶುಗರ್ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಸಾಂಕೇತಿಕವಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಚಾಲನೆ ನೀಡಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಕಾರ್ಖಾನೆ ಪ್ರತಿನಿತ್ಯ 3 ಸಾವಿರದಿಂದ 4 ಸಾವಿರ ಟನ್ ಕಬ್ಬು ಅರೆಯದಿದ್ದರೆ ಪುನಶ್ಚೇತನ ಮಾಡಲು ಸಾಧ್ಯವಿಲ್ಲ. ಹೆಚ್ಚು ಕಬ್ಬು ಅರೆಯುವುದಕ್ಕೆ ಅನುಗುಣವಾಗಿ ಕಾರ್ಖಾನೆಯನ್ನು ಸಜ್ಜುಗೊಳಿಸಲಾಗಿದೆ. ಈಗಾಗಲೇ ಅಂದಾಜು 5.03 ಲಕ್ಷ ಟನ್ ಕಬ್ಬು ಸರಬರಾಜಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಗೊಳ್ಳಲಿದೆ ಎಂದು ಹೇಳಿದ್ದರು.

ಮೈಶುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಸಾಗಿಸುವ ಮೂಲಕ ಕಬ್ಬು ಅರೆಯುವಿಕೆ ಕಾರ್ಯ ಸುಗಮವಾಗಿ ನಡೆಯಲು ಸಹಕರಿಸಬೇಕು. ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಸಾಗಿಸುವ ಬದಲು ಮೈಶುಗರ್​ ಕಾರ್ಖಾನೆಗೆ ತನ್ನಿ. ಖಾಸಗಿ ಕಾರ್ಖಾನೆಯವರು ನೀಡುವ ಬೆಲೆಯಷ್ಟೇ ನಾವೂ ನೀಡುವ ಪ್ರಯತ್ನ ಮಾಡುತ್ತೇವೆ. ಅತಿ ಹೆಚ್ಚು ಕಬ್ಬನ್ನು ಮೈಶುಗರ್ ಕಾರ್ಖಾನೆಗೆ ತೆಗೆದುಕೊಂಡು ಬನ್ನಿ ಎಂದು ರೈತರಲ್ಲಿ ಸಚಿವರು ಮನವಿ ಮಾಡಿದ್ದರು.

ಇದನ್ನೂ ಓದಿ...

Back to top button
>