ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸದ್ಯದಲ್ಲೇ ಪರಿಶೀಲನೆ ಮಾಡುವುದಾಗಿ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆ ಗೌರಿಬಿದನೂರು ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಸ್ವಾಮಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇಡೀ ಯೋಜನೆಯ ಕಾಮಗಾರಿ ಪರಿಶೀಲನೆ ಮಾಡಿ ಮೊದಲು ನೀರು ತರಲು ಆದ್ಯತೆ ನೀಡಲಾಗುವುದು. ನಂತರ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಗೌರಿಬಿದನೂರು ಕ್ಷೇತ್ರಕ್ಕೆ ಸದ್ಯದಲ್ಲೇ ಭೇಟಿ ನೀಡಿ ಪರಿಶೀಲಿಸುವುದಾಗಿ ಡಿಸಿಎಂ ಭರವಸೆ ನೀಡಿದರು.
ಗೌರಿಬಿದನೂರು ಗುರುತ್ವ ಪೀಡರ್ ಕಾಲುವೆ ಕಾಮಗಾರಿ: ಎತ್ತಿನಹೊಳೆ ಯೋಜನೆಯಡಿ ಗೌರಿಬಿದನೂರು ತಾಲೂಕಿನಲ್ಲಿ 51.78 ಕಿ.ಮೀ ಪೈಪಲೈನ್ ಅಳವಡಿಸಲು ಮಂಜೂರಾಗಿದ್ದು, ಈ ಪೈಕಿ 48.25 ಕಿ.ಮೀ ಪೈಪ್ ಲೈನ್ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ. ಉಳಿದ 3.62 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ಗೌರಿಬಿದನೂರು ತಾಲೂಕಿನಲ್ಲಿ ಕುಡಿಯುವ ನಿರೀಗಾಗಿ 86 ಕೆರೆಗಳಿಗೆ ಶೇ.50ರಷ್ಟು ನೀರು ತುಂಬಿಸಲು ಯೋಜಿಸಲಾಗಿದೆ. ಗೌರಿಬಿದನೂರು ಗುರುತ್ವ ಪೀಡರ್ ಕಾಲುವೆ ಕಾಮಗಾರಿಯನ್ನು 863.48 ಕೋಟಿ ರೂ.ಗಳಿಗೆ ಗುತ್ತಿಗೆ ವಹಿಸಿದ್ದು, ಡಿಸೆಂಬರ್ ಹಂತಕ್ಕೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ರೇವಣ್ಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ : ಶಾಸಕ ಯಶವಂತರಾಯ ವಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ರೇವಣ್ಣ ಸಿದ್ದೇಶ್ವರ ಏತ ನೀರಾವರಿ ಮೂಲಕ ನೀರಿನ ಸೌಲಭ್ಯವನ್ನು ಕಲ್ಪಿಸಲು 2638 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದ 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಗೊಳಪಡಿಸುವ ಉದ್ದೇಶವಿದೆ ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿ ಸಣ್ಣ ನೀರಾವರಿ ಕಾಮಗಾರಿಗೆ ಹಣ ಬಿಡುಗಡೆ : ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯ 1171 ಕಾಮಗಾರಿಗಳಿಗೆ 230.73 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜು ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದರು.
784 ಕಾಮಗಾರಿಗಳು ಪೂರ್ಣ:ಕಳೆದ ಮೂರು ವರ್ಷಗಳಲ್ಲಿ 784 ಕಾಮಗಾರಿಗಳು ಪೂರ್ಣಗೊಂಡಿವೆ. 38.04 ಕೋಟಿ ರೂ. ವೆಚ್ಚವಾಗಿದೆ. 24 ಕಾಮಗಾರಿಗಳು ಪ್ರಗತಿಯಲ್ಲಿದ್ದು 9 ಕಾಮಗಾರಿಗಳು ತಾಂತ್ರಿಕ ಮಂಜೂರಾತಿ ಹಂತದಲ್ಲಿವೆ. ಮತ್ತೆ 9 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ ಎಂದರು. 346 ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕಿದೆ. ಇನ್ನು ಎರಡು ಕಾಮಗಾರಿಗಳನ್ನು ಪ್ರಾರಂಭಿಸಬೇಕಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.