ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅನಾವಶ್ಯಕವಾಗಿ ಆರೋಪಗಳನ್ನು ಮಾಡಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದಲೂ ಪ್ರತಿ ಬಾರಿಯೂ ದಾಖಲು ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಲೇ ಕಾಲಾಹರಣ ಮಾಡುತ್ತಿದ್ದಾರೆ. ಸರ್ಕಾರದ ಸಚಿವರ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡಬೇಡಿ ಎಂದು ಸರ್ಕಾರ ಸೇರಿದಂತೆ ಬೇರೆ ಯಾರಾದರೂ ಹೇಳಿದ್ದಾರೆಯೇ ಎಂದು ತಿರುಗೇಟು ನೀಡಿದರು.ಮಾಜಿ ಮುಖ್ಯಮಂತ್ರಿಗಳು ಏನೋ ಒಂದು ಆರೋಪ ಮಾಡಿ ದಾರಿ ತಪ್ಪಿಸಬಾರದು ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವೈಎಸ್‍ಟಿ ತೆರಿಗೆಯ ಬಗ್ಗೆ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಯತೀಂದ್ರ ಕಾಂಗ್ರೆಸ್‍ನ ಮಾಜಿ ಶಾಸಕರು, ಕಾಂಗ್ರೆಸ್ ನಾಯಕರು. ಅವರು ನಮ್ಮ ಜೊತೆ ಮಾತನಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕುಟುಂಬದವರ ಜೊತೆ, ಅಣ್ಣ-ತಮ್ಮಂದಿರ ಜೊತೆ ಚರ್ಚೆ ಮಾಡುತ್ತಿರಲಿಲ್ಲವೇ? ಅನಗತ್ಯವಾಗಿ ಸಣ್ಣ ವಿಚಾರಗಳನ್ನು ಚರ್ಚೆ ಮಾಡುವುದು ಸರಿಯಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರನ್ನು ಲುಲ್ಲುಕುಮಾರ್ ಎಂದು ಟೀಕೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ವ್ಯಾಪಾರಸ್ಥ ಉದ್ಯಮಿ. ಅವರ ಆಸ್ತಿ ಗಳಿಕೆಗೆ ಒಂದು ದಾರಿ ಇದೆ. ಕುಮಾರಸ್ವಾಮಿ ಅವರು ಮತ್ತು ಅವರ ಕುಟುಂಬದ ಆಸ್ತಿಯ ಬಗ್ಗೆಯೂ ಚರ್ಚೆಯಾಗಲಿ. ನಾವ್ಯಾರೂ ಮಾತನಾಡುವುದಿಲ್ಲ. ಖುದ್ದು ಕುಮಾರಸ್ವಾಮಿಯವರೇ ಕುಟುಂಬದ ಆಸ್ತಿ ವಿವರದ ಬಗ್ಗೆ ಬಹಿರಂಗಪಡಿಸಲಿ. ಯಾವ ಮೂಲದಿಂದ ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ಹೇಳಲಿ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯಾಗಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿಲ್ಲ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ, ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಕೇಂದ್ರದ ಮೇಲೆ ಒತ್ತಡ ಹೇರುವಂತ ಕೆಲಸ ಮಾಡಲಿ, ಜನಪರವಾದ ಚರ್ಚೆಗಳ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.