ರಾಜಕೀಯರಾಜ್ಯ

ದೆಹಲಿ ಮೊಹಲ್ಲಾ ಕ್ಲಿನಿಕ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ

Health Minister Dinesh Gundurao visits Delhi Mohalla Clinic

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ನವದೆಹಲಿ: ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದು ದೆಹಲಿಯ ಪಂಚಶೀಲ್ ಪಾರ್ಕ್ ಶಹಪುರ್ ಜಾಟ್‌ನಲ್ಲಿರುವ ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿದರು. ಮೊಹಲ್ಲಾ ಕ್ಲಿನಿಕ್​ಗೆ ತೆರಳಿ ವೈದ್ಯರೊಂದಿಗೆ ಸಮಾಲೋಚಿಸಿ ಆರೋಗ್ಯ ಕೇಂದ್ರದ ವಿಶೇಷತೆಗಳನ್ನು ತಿಳಿದುಕೊಂಡರು. ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಜೊತೆಗಿದ್ದರು.

 

ಮೊಹಲ್ಲಾ ಕ್ಲಿನಿಕ್ ಅನ್ನು ಶ್ಲಾಘಿಸಿದ ದಿನೇಶ್ ಗುಂಡೂರಾವ್, ”ಇಂದು ನಾನು ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್ ನೋಡಲು ಬಂದಿದ್ದೇನೆ. ಆರೋಗ್ಯ ಕೇಂದ್ರಗಳ ಬಗ್ಗೆ ಮೊದಲೇ ಕೇಳಿದ್ದೆ. ಆದರೆ, ಇಲ್ಲಿಗೆ ಬಂದ ನಂತರ ಆಮ್ ಆದ್ಮಿ ಮೊಹಲ್ಲಾ ಚಿಕಿತ್ಸಾಲಯ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೋಡಿ ಅರ್ಥ ಮಾಡಿಕೊಂಡಿದ್ದೇನೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸದು ಮಾಡುವುದನ್ನು ಕಲಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೇರೆ ರಾಜ್ಯಗಳಿಂದ ಹೊಸದನ್ನು ಕಲಿತುಕೊಳ್ಳಲು ಬಂದಿದ್ದೇನೆ” ಎಂದು ತಿಳಿಸಿದ್ದಾರೆ.

 

”ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರನ್ನು ಕರ್ನಾಟಕಕ್ಕೆ ಬಂದು ಆರೋಗ್ಯ ಸೇವೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಆಹ್ವಾನ ನೀಡಿದ್ದೇನೆ. ಅಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ನಾವು ಪರಸ್ಪರ ರಾಜ್ಯಗಳಿಗೆ ಭೇಟಿ ನೀಡಬೇಕು. ಅಂತಹ ಭೇಟಿಗಳಿಂದ ಏನನ್ನಾದರೂ ಕಲಿಯಲು ಸಾಧ್ಯವಾಗುತ್ತದೆ” ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸೌರಭ್ ಭಾರದ್ವಾಜ್ ಸಂತಸ: ”ದೆಹಲಿಯ ಮೊಹಲ್ಲಾ ಕ್ಲಿನಿಕ್ ನೋಡಲು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಂದಿರುವುದು ತುಂಬಾ ಖುಷಿ ತಂದಿದೆ. ನಮಗೂ ಕರ್ನಾಟಕಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ನಾವು ಕೂಡಾ ಕರ್ನಾಟಕಕ್ಕೆ ಹೋಗುತ್ತೇವೆ. ಕರ್ನಾಟಕದಲ್ಲೂ ಅನೇಕ ಉತ್ತಮ ಆಸ್ಪತ್ರೆಗಳಿದ್ದು, ಅವು ಉತ್ತಮವಾಗಿ ಕೆಲಸ ಮಾಡುತ್ತಿವೆ” ಎಂದು ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದರು. ಎಲ್ಲ ರಾಜ್ಯಗಳು ಪರಸ್ಪರ ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ನಾವು ಖಂಡಿತವಾಗಿಯೂ ಆರೋಗ್ಯ ಕ್ಷೇತ್ರದ ಮಾದರಿಯ ಬಗ್ಗೆ ಏನನ್ನಾದರೂ ಹೊಸದನ್ನು ಕಲಿಯುತ್ತೇವೆ ಎಂದಿದ್ದಾರೆ.

 ಏನಿದು ಮೊಹಲ್ಲಾ ಚಿಕಿತ್ಸಾಲಯ?: ರಾಜಧಾನಿ ದೆಹಲಿಯಲ್ಲಿ 500ಕ್ಕೂ ಹೆಚ್ಚು ಮೊಹಲ್ಲಾ ಚಿಕಿತ್ಸಾಲಯಗಳು ರೋಗಿಗಳಿಗೆ ಉಚಿತವಾಗಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡುತ್ತಿವೆ. ಮೊಹಲ್ಲಾ ಕ್ಲಿನಿಕ್​ನಲ್ಲಿ 212 ವಿವಿಧ ರೀತಿಯ ವೈದ್ಯಕೀಯ ಪರೀಕ್ಷೆಗಳು ಸೇರಿವೆ.

ಇದನ್ನೂ ಓದಿ...

Back to top button
>