![](https://sambramaprabha.com/wp-content/uploads/2023/08/download-11.jpg)
ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣ: ಶೀಘ್ರದಲ್ಲೇ ಎನ್‌ಐಎ ವಿಚಾರಣೆ ನಡೆಸಲು ಸಿದ್ಧತೆ
Arrest of five suspected terrorists in Bengaluru: NIA set to conduct inquiry soon
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು : ನಗರದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಐವರು ಶಂಕಿತ ಉಗ್ರರನ್ನು ಶೀಘ್ರದಲ್ಲೇ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.
ಸಿಸಿಬಿ ವಿಚಾರಣೆ ಮುಗಿದಿರುವ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಶಂಕಿತರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗಾಗಲೇ ಪ್ರಕರಣದ ಬಗ್ಗೆ ಸಿಸಿಬಿಯಿಂದ ಪ್ರಾಥಮಿಕ ಮಾಹಿತಿ ಪಡೆದಿದೆ. ಶಂಕಿತರ ಬಳಿ ಪತ್ತೆಯಾದ ಗ್ರೆನೇಡ್, ನಾಡ ಪಿಸ್ತೂಲ್ಗಳ ಬಗ್ಗೆ ನಿಗಾ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಶಂಕಿತ ಉಗ್ರರ ಒಳಸಂಚು ಮತ್ತು ಷಡ್ಯಂತ್ರದ ಕುರಿತು ವಿಚಾರಣೆ ನಡೆಸಲಿದೆ. ವಿದೇಶದಿಂದ ಫಂಡಿಂಗ್ ಮತ್ತು ಗ್ರೆನೇಡ್ ಭಾರತಕ್ಕೆ ಸರಬರಾಜು ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಐಎ, ಸದ್ಯದಲ್ಲಿಯೇ ಐವರನ್ನು ವಶಕ್ಕೆ ಪಡೆಯಲಿದ್ದು, ಜೊತೆಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಜುನೇದ್ ಅಹಮದ್ ಕರೆ ತರುವ ಬಗ್ಗೆ ಕಾನೂನು ಪ್ರಕ್ರಿಯೆ ಕೈಗೊಳ್ಳಲಿದೆ.
ಜುನೇದ್ ಪತ್ತೆಗೆ ಈಗಾಗಲೇ ಸಿಸಿಬಿ ಲುಕ್ ಔಟ್ ನೋಟಿಸ್ ಹೊರಡಿಸಿದೆ. ಜುನೇದ್‌ನನ್ನು ಎನ್‌ಐಎ ಮತ್ತು ಸಿಬಿಐ ಇಂಟರ್‌ಪೋಲ್ ಮೂಲಕ ವಶಕ್ಕೆ ಪಡೆಯಲು ತಯಾರಿ ನಡೆಸಿದೆ. ಹಾಗೆಯೇ, ಎನ್‌ಐಎ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್ ಮೇಲೆ ಶಂಕಿತರನ್ನು ವಶಕ್ಕೆ ಪಡೆಯಲಿದ್ದಾರೆ.
ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ ಜು. 1 ರಂದು ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಶಂಕಿತರಾದ ಸುಹೇಲ್ ಅಹಮದ್, ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಮತ್ತು ಮಹಮ್ಮದ್ ಉಮರ್‌ನನ್ನು ಬಂಧಿಸಿದ್ದರು. ಬಳಿಕ, ಪೊಲೀಸ್ ಕಸ್ಟಡಿಗೆ ಪಡೆದು 15 ದಿನಗಳ ಕಾಲ ತೀವ್ರ ವಿಚಾರಣೆ ನಡೆಸಿ ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನು ಶಂಕಿತ ಉಗ್ರರ ಬಂಧನದ ಕುರಿತು ಮಾಹಿತಿ ನೀಡಿದ್ದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, “ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ 5 ಮಂದಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಬಂಧಿತರಿಂದ 7 ನಾಡ ಪಿಸ್ತೂಲ್, 45 ಜೀವಂತ ಗುಂಡುಗಳು, ವಾಕಿಟಾಕಿ ಸೇರಿದಂತೆ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯಲ್ಲಿ ಐವರೂ ಸಹ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದ್ದರು.