ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಮುಂಬೈ: ಮುಂಬೈನಲ್ಲಿ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣವನ್ನು ಕರ್ನಾಟಕದ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಭಾನುವಾರ ವೀಕ್ಷಿಸಿದರು.
ಜಮೀರ್ ಅಹ್ಮದ್ ಖಾನ್ ಅವರು ಇಂದು ಮುಂಬೈನ ಅಂಧೇರಿ ಪೂರ್ವದ ಸಾಯಿಬಾಬಾ ನಗರದ ಟೀಚರ್ಸ್ ಕಾಲೋನಿಯಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯವನ್ನು ವೀಕ್ಷಿಸಿ ಮಾಹಿತಿ ಪಡೆದರು.
ಮುಂಬೈ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ವತಿಯಿಂದ ಸ್ಲಂ ನಿವಾಸಿಗಳ ಸಹಕಾರ ಸಂಘವನ್ನು ಸ್ಥಾಪಿಸಿ, ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ವಸತಿ ಸಮುಚ್ಚಯವನ್ನು ನಿರ್ಮಿಸಲಾಗುತ್ತಿದೆ.
ಒಟ್ಟು ಪ್ರದೇಶದ ಶೇ 50 ರಷ್ಟು ಜಾಗ ಗುತ್ತಿಗೆ ಸಂಸ್ಥೆಗೆ ನೀಡಲಾಗುತ್ತದೆ. ಒಂದೊಮ್ಮೆ ಯೋಜನೆಯಡಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲದ ವ್ಯವಸ್ಥೆ ಬೇಕಾದರೂ ಗುತ್ತಿಗೆ ಸಂಸ್ಥೆಯೇ ಬ್ಯಾಂಕ್ ಮುಖ್ಯಸ್ಥರ ಜತೆ ಸಂಪರ್ಕ ಸಾಧಿಸಿ ವ್ಯವಸ್ಥೆ ಮಾಡಿಸುತ್ತದೆ. ಅಷ್ಟೇ ಅಲ್ಲದೆ, ಕೊಳೆಗೇರಿ ಪ್ರದೇಶದಲ್ಲಿ ವಸತಿ ಸಂಕೀರ್ಣ ನಿರ್ಮಾಣ ಮಾಡುವವರೆಗೆ ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ಅಥವಾ ಬೇರೆ ಕಡೆ ವಾಸಿಸಲು ಮನೆ ಬಾಡಿಗೆ ಸಹ ಸಂಸ್ಥೆ ಪಾವತಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕದ ಕೊಳೆಗೇರಿ ಅಭಿವೃದ್ಧಿ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗಳಲ್ಲಿ ಇದೇ ಮಾದರಿಯನ್ನು ಅನುಷ್ಠಾನಗೊಳಿಸಬಹುದೇ ಎಂಬ ಬಗ್ಗೆ ಅಧ್ಯಯನ ನಡೆಸಿ ಸಾಧಕ-ಬಾಧಕಗಳನ್ನು ಪರಿಶೀಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.