ರಾಜ್ಯರಾಷ್ಟ್ರೀಯ

ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿದ ಸರ್ಕಾರ

The government yielded to the pressure of Congress MLAs

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ದಾವಣಗೆರೆ: ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರ ಒತ್ತಡ ಕೊನೆಗೂ ಫಲಿಸಿದ್ದು, ಕಾಂಗ್ರೆಸ್ ಶಾಸಕರ ಆಗ್ರಹಕ್ಕೆ ಮಣಿದಿರುವ ರಾಜ್ಯ ಸರ್ಕಾರ ದಾವಣಗೆರೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಇತ್ತೀಚೆಗೆ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಅವರು ಎಸ್ಪಿ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ, ಏಕೆಂದರೆ ಅವರು ಬಡವರ ಸಣ್ಣಪುಟ್ಟ ನಿರ್ಮಾಣ ಕೆಲಸಗಳಿಗೆ ಮರಳು ಎತ್ತಲೂ ಬಿಡುತ್ತಿಲ್ಲ. ಇದರಿಂದ ಬಡಜನರಿಗೆ ಶೌಚಾಲಯ ನಿರ್ಮಾಣ ಮಾಡಲು ಸಹ ಮರಳು ಸಿಗದೆ ಪರದಾಡುತ್ತಿದ್ದಾರೆ. ಆದ್ದರಿಂದ ಈಗಿನ ಎಸ್ಪಿ ಅರುಣ್ ಅವರನ್ನು ವರ್ಗಾವಣೆ ಮಾಡಬೇಕೆಂದು ತುಂಬಿದ ಸಭೆಯಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಒತ್ತಾಯಿಸಿದ್ದರು.

ಶಾಸಕರ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಂತನಗೌಡ್ರು ಮಾತ್ರವಲ್ಲ ಎಲ್ಲಾ ಶಾಸಕರು ಎಸ್ಪಿ ಟ್ರಾನ್ಸಫರ್ ಮಾಡಿ ಅಂತ ಒತ್ತಾಯಿಸುತ್ತಿದ್ದಾರೆ. ಆದರೆ, ಎಸ್ಪಿ ಒಳ್ಳೆಯವರಿದ್ದು, ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿ ಇರಬೇಕು ಎಂದು ಹೇಳಿದ್ದರು. ಆದರೆ ಈಗ ಏಕಾಏಕಿ ಎಸ್ಪಿಯನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಅತೃಪ್ತ ಶಾಸಕರ ಮನವೊಲಿಕೆ ಮಾಡಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಎಸ್ಪಿ ಡಾ.ಅರುಣ್ ಅವರು ಜಿಲ್ಲೆಗೆ ಬರುವ ಮೊದಲು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿದ ನಂತರ ದಾವಣಗೆರೆ ಜಿಲ್ಲೆಯ ಎಸ್ಪಿಯಾಗಿ ಅರುಣ್ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ಏಪ್ರಿಲ್ ತಿಂಗಳಿನಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರನ್ನು ಸರ್ಕಾರ ಕೇವಲ 5 ತಿಂಗಳಿಗೆ ವರ್ಗಾವಣೆ ಮಾಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಈಗ ಡಾ.ಕೆ.ಅರುಣ್ ಅವರನ್ನು ಕಲಬುರ್ಗಿ ಜಿಲ್ಲೆಯ ಪೋಲೀಸ್ ತರಬೇತಿ ಕೇಂದ್ರದ ಮುಖ್ಯಸ್ಥರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು, ದಾವಣಗೆರೆ ಜಿಲ್ಲೆಗೆ ಇನ್ನೂ ಯಾರನ್ನೂ ನಿಯೋಜಿಸಿಲ್ಲ.

ಇದನ್ನೂ ಓದಿ...

Back to top button
>