ಜೆಟಿಒ ಆಯ್ಕೆ ಪಟ್ಟಿ ರೀಡೂ: ಕೆಪಿಎಸ್ಸಿಗೆ ಹೈಕೋರ್ಟ್ ಆದೇಶ
JTO selection list redo: High Court order to KPSC
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ ಅಡಿಯಲ್ಲಿರುವ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಖಾಲಿ ಇರುವ 1,520 ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಒ) ಹುದ್ದೆಗೆ 2019ರಲ್ಲಿ ಪ್ರಕಟಿಸಿದ್ದ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ಆದೇಶದನ್ವಯ ಪರಿಷ್ಕರಿಸಲು ಕೆಪಿಎಸ್ಸಿ ನಿರ್ಧರಿಸಿದೆ.
ಇದರಿಂದಾಗಿ ಈಗಾಗಲೇ ಪ್ರಕಟಿಸಿದ್ದ ಆಯ್ಕೆ ಪಟ್ಟಿಯನ್ವಯ ನೇಮಕಗೊಂಡು, ಕರ್ತವ್ಯ ನಿರ್ವಹಿಸುತ್ತಿರುವ 399 ಜೆಟಿಒಗಳ ಪೈಕಿ ಕೆಲವರು ಹುದ್ದೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕೆಲವರು ಆಯ್ಕೆಯಾಗಿರುವ ವೃತ್ತಿ (ಟ್ರೇಡ್) ಬದಲಾಗುವ ಸಾಧ್ಯತೆಯಿದೆ.
ಐಟಿಐಗಳಲ್ಲಿ 23 ವಿವಿಧ ವೃಂದಗಳಲ್ಲಿ ಖಾಲಿ ಇರುವ ಜೆಟಿಒಗಳ ನೇಮಕಾತಿಗೆ 2018 ಫೆ. 19ರಂದು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಿದ್ದ 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ 2018 ಡಿ. 27ರಿಂದ 2019 ಜ. 3ರವರೆಗೆ ಪರೀಕ್ಷೆ ನಡೆದಿತ್ತು. ದಾಖಲೆಗಳ ಪರಿಶೀಲನೆ ಬಳಿಕ ವಿವಿಧ ವೃತ್ತಿಗಳಲ್ಲಿ 1,367 ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗೆ ಆಯ್ಕೆಯಾಗಿದ್ದರು. ಒಬ್ಬರಿಗೆ ಒಂದು ಹುದ್ದೆ ಎಂದು ಪರಿಗಣಿಸಿದಾಗ ಒಟ್ಟು 945 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 399 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿತ್ತು. ಇನ್ನೂ 546 ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ಈ ಮಧ್ಯೆ, ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದರೂ ಹುದ್ದೆಗೆ ಆಯ್ಕೆಯಾಗದ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿವೆ ಎಂದು ಪ್ರಮಾಣೀಕರಿಸಿದ್ದರೂ ಸೇವಾನುಭವ ಪ್ರಮಾಣಪತ್ರದಲ್ಲಿ ‘ನಿರ್ದಿಷ್ಟ ಕಾರ್ಯಕ್ಷೇತ್ರದ ಕಾರ್ಯಾನುಭವದಲ್ಲಿ ಸ್ಪಷ್ಟತೆ ಇಲ್ಲ’ ಎಂದು ಕಾರಣ ನೀಡಿ ಅರ್ಹರಾಗಿದ್ದ ಹಲವು ಅಭ್ಯರ್ಥಿಗಳನ್ನು ಕೆಪಿಎಸ್ಸಿ ತಿರಸ್ಕರಿಸಿತ್ತು.
‘ಅತೀ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳ ಸೇವಾನುಭವ ಪ್ರಮಾಣಪತ್ರ ಸರಿ ಇಲ್ಲವೆಂಬ ಕಾರಣಕ್ಕೆ ಅಂತಿಮ ಆಯ್ಕೆ ಪಟ್ಟಿಯಿಂದ ಹಲವು ಅಭ್ಯರ್ಥಿಗಳನ್ನು ತಿರಸ್ಕರಿಸಲಾಗಿತ್ತು. ಇದೀಗ, ಸೇವಾನುಭವ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಉದ್ಯೋಗದಾತರಿಂದ (ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ) ಸ್ಪಷ್ಟೀಕರಣ ಪಡೆದು ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಪಟ್ಟಿ ಪರಿಷ್ಕರಿಸಬೇಕಿದೆ’ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
ಸುರಳ್ಕರ್ ವಿಕಾಸ್ ಕಿಶೋರ್ ಕಾರ್ಯದರ್ಶಿ ಕೆಪಿಎಸ್ಸಿ ಇಡೀ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಬೇಕಿದೆ. ಕೋರ್ಟ್ ಆದೇಶದಂತೆ ಆ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದೇವೆ
ಪ್ರಕರಣದ ವಿಚಾರಣೆ ವೇಳೆ, ‘ಐಟಿಐಗಳಲ್ಲಿ 1,900ಕ್ಕೂ ಹೆಚ್ಚು ಜೆಟಿಒ ಹುದ್ದೆ ಖಾಲಿ ಇದ್ದರೂ, 2018ರಿಂದಲೂ ಈ ಅಧಿಕಾರಿಗಳ ನೇಮಕಾತಿ ಅಂತಿಮಗೊಳಿಸಿಲ್ಲ. ನೇಮಕಾತಿಗೆ ಸಂಬಂಧಿಸಿದಂತೆ ಕೆಎಟಿ ಬೇರೆ ಬೇರೆ ಆದೇಶಗಳನ್ನು ನೀಡಿರುವ ಕಾರಣ ಇಡೀ ಆಯ್ಕೆಯನ್ನು ರೀಡೂ ಮಾಡುವಂತೆ ಕೆಪಿಎಸ್ಸಿಗೆ ಅನುಮತಿಸಬಹುದು’ ಎಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ಗೆ ಮನವಿ ಮಾಡಿದ್ದರು. ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಸಲ್ಲಿಸಿದ್ದ ದಾಖಲೆಗಳನ್ನು ಪರಿಗಣಿಸಿ, ಅಗತ್ಯವಿದ್ದರೆ ಉದ್ಯೋಗದಾತರಿಂದ ಸ್ಪಷ್ಟೀಕರಣ ಪಡೆದು ಕಾನೂನುಬದ್ಧವಾಗಿ ಆಯ್ಕೆ ಮಾಡಲು ಕೆಪಿಎಸ್ಸಿಗೆ ಸ್ವಾತಂತ್ರ್ಯ ನೀಡಬಹುದು’ ಎಂದಿದ್ದರು. ಕೆಪಿಎಸ್ಸಿ ಪರ ವಕೀಲರು ಅದಕ್ಕೆ ಸಹಮತಿ ಸೂಚಿಸಿದ್ದರು. ಹೊಸ ಆಯ್ಕೆ ಪಟ್ಟಿಯನ್ನು ಕೋರ್ಟ್ಗೆ ಕೆಪಿಎಸ್ಸಿ ಸಲ್ಲಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಾದ ಆಲಿಸಿದ್ದ ಹೈಕೋರ್ಟ್ ಪೀಠ, ಹೊಸ ಪಟ್ಟಿಯನ್ನು ಸಿದ್ಧಪಡಿಸಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಆದೇಶ ನೀಡಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಆಯುಕ್ತರಾದ ಕೆ. ಜ್ಯೋತಿ, ‘ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಅರ್ಹತೆ ಇದ್ದರೂ ಸೇವಾನುಭವ ಪ್ರಮಾಣಪತ್ರ ಸರಿ ಇಲ್ಲವೆಂಬ ಕಾರಣಕ್ಕೆ ಆಯ್ಕೆಯಾಗದವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಮೆರಿಟ್ ಪರಿಗಣಿಸದೆ, ಸೇವಾನುಭವದ ಪ್ರಮಾಣಪತ್ರದ ಆಧಾರದಲ್ಲಿ ಆಯ್ಕೆ ಪಟ್ಟಿ ಮಾಡಿರುವುದು ಸರಿಯಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ, ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಭ್ಯರ್ಥಿಗಳು ಆಯಾ ವಿಷಯದಲ್ಲಿ ಸಲ್ಲಿಸಿರುವ ಸೇವಾನುಭವ ಪ್ರಮಾಣಪತ್ರವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಇದಕ್ಕಾಗಿ ಇಲಾಖೆಯಿಂದ ಜೆಟಿಒ ಆಗಿ ಪ್ರಾಂಶುಪಾಲರಾಗಿರುವವರ ಸಮಿತಿ ರಚಿಸಿ, ಅಂತಿಮ ಆಯ್ಕೆ ಪಟ್ಟಿ ಮಾಡಲು ಕೆಪಿಎಸ್ಸಿಗೆ ನೆರವು ನೀಡುತ್ತೇವೆ’ ಎಂದರು.
ಸಾವಿರಕ್ಕೂ ಹೆಚ್ಚು ‘ಅರ್ಹರು’ ತಿರಸ್ಕೃತ!
ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದ ಏಳು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸೇವಾನುಭವ ಪ್ರಮಾಣಪತ್ರದಲ್ಲಿ ‘ನಿರ್ದಿಷ್ಟ ಕಾರ್ಯಕ್ಷೇತ್ರದ ಕಾರ್ಯಾನುಭವದಲ್ಲಿ ಸ್ಪಷ್ಟತೆ ಇಲ್ಲ’ ಎಂದು ಕಾರಣ ನೀಡಿ ಕೆಪಿಎಸ್ಸಿ ತಿರಸ್ಕರಿಸಿತ್ತು. ಹುದ್ದೆಗೆ ತಿರಸ್ಕೃತಗೊಂಡ ಅಭ್ಯರ್ಥಿಗಳಿಗಿಂತಲೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳು ಆಯ್ಕೆಗೊಂಡಿರುವುದು ಗೊಂದಲಕ್ಕೆ ಕಾರಣವಾಗಿತ್ತು. 400 ಅಂಕಗಳ ಪರೀಕ್ಷೆಯಲ್ಲಿ ಕೇವಲ 60 80 ಅಂಕ ಗಳಿಸಿದವರೂ ನೇಮಕಗೊಂಡವರಲ್ಲಿ ಇದ್ದಾರೆ ಎಂದು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಮೂಲಗಳು ತಿಳಿಸಿವೆ.
ನೇಮಕಾತಿ ಪ್ರಕ್ರಿಯೆ- ಮುಂದೆ ಹೇಗೆ?
* ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳ ಆಧಾರದಲ್ಲಿ ಕೆಪಿಎಸ್ಸಿ ಮತ್ತು ರಾಜ್ಯ ಸರ್ಕಾರ ಆಯ್ಕೆ ಪಟ್ಟಿ ರೀಡೂ ಮಾಡಬೇಕು
* ಅಭ್ಯರ್ಥಿ ಯಾವ ವೃತ್ತಿಯಲ್ಲಿ ತರಬೇತಿ ಪಡೆದಿದ್ದಾರೆಂದು ಉದ್ಯೋಗದಾತರಿಂದ ಸ್ಪಷ್ಟೀಕರಣ ಪಡೆಯಲು ಅಥವಾ ಸೇವಾನುಭವ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ನೆರವು ಪಡೆಯಲು ಕೆಪಿಎಸ್ಸಿ ಸ್ವತಂತ್ರ.
* ಎರಡು ತಿಂಗಳ ಒಳಗೆ ಈ ಪ್ರಕ್ರಿಯೆ ಮುಗಿಸಿ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ಗೆ ಕೆಪಿಎಸ್ಸಿ ವರದಿ ಸಲ್ಲಿಸಬೇಕು. ಕೆಪಿಎಸ್ಸಿ ಸಿದ್ಧಪಡಿಸಿದ ಮೆರಿಟ್ ಪಟ್ಟಿಯನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕು
* ಒಂದಕ್ಕಿಂತ ಹೆಚ್ಚು ವೃತ್ತಿಗೆ ಆಯ್ಕೆಯಾದ ಅಭ್ಯರ್ಥಿಗೆ ಅವರಿಷ್ಟದ ವೃತ್ತಿ ಆಯ್ಕೆಗೆ ಕೆಪಿಎಸ್ಸಿ ಅನುಮತಿ ನೀಡಬೇಕು
ಕೆ. ಜ್ಯೋತಿ, ಆಯುಕ್ತರು, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಕೆಪಿಎಸ್ಸಿ ಮತ್ತು ನಾವು ಜಂಟಿಯಾಗಿ ಹೊಸ ಆಯ್ಕೆಯ ಪಟ್ಟಿ ಸಿದ್ಧಪಡಿಸಬೇಕಿದೆ. ಅಭ್ಯರ್ಥಿಗಳ ಸೇವಾನುಭವ ಪ್ರಮಾಣಪತ್ರ ಪರಿಶೀಲನೆಗೆ ಸಮಿತಿ ರಚಿಸುತ್ತೇವೆ