ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಸಂಚಾರ ಉಲ್ಲಂಘನೆ: ಕೆಎಸ್ ಆರ್ ಟಿಸಿಯಿಂದ ತನಿಖೆ
Traffic violations on Bengaluru-Mysore Access Controlled Highway: Investigation by KSRTC
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ತಪ್ಪು ದಿಕ್ಕಿನಲ್ಲಿ ಸಾಗುತ್ತಿರುವ ಮತ್ತು ಅಪಾಯಕಾರಿ ಯು-ಟರ್ನ್‌ಗಳನ್ನು ತೆಗೆದುಕೊಳ್ಳುವ ಹಲವಾರು ನಿದರ್ಶನಗಳು ವರದಿಯಾದ ನಂತರ, ನಿಗಮವು ಈ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಅಧಿಕೃತವಾಗಿ ಸಂಚಾರಕ್ಕೆ ಮುಕ್ತಗೊಳಿಸಿದರು, ನಂತರ ಟೋಲ್ ಸಂಗ್ರಹಣೆಯನ್ನು ಪ್ರಾರಂಭಿಸಲಾಯಿತು. ಟೋಲ್ ತಪ್ಪಿಸಲು ಕೆಎಸ್‌ಆರ್‌ಟಿಸಿ ಬಸ್‌ಗಳು ದಾರಿ ತಪ್ಪಿ ನಿಯಮ ಉಲ್ಲಂಘಿಸಿ ಹೋಗುತ್ತಿದ್ದು, ಈ ಬಗ್ಗೆ ನಿಗಮ ಸುತ್ತೋಲೆ ಹೊರಡಿಸಿದೆ. ಹೀಗಿದ್ದರೂ ಚಾಲಕರು ತಪ್ಪಾಗಿ ವಾಹನ ಚಲಾಯಿಸುತ್ತಲೇ ಇದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಹಲವಾರು ಉಲ್ಲಂಘನೆಗಳನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ, ಕೆಲವು ಕ್ಲಿಪ್‌ಗಳು ವೈರಲ್ ಆಗುತ್ತಿವೆ. ಅದರಂತೆ ಕೆಎಸ್‌ಆರ್‌ಟಿಸಿ ತನಿಖೆಗೆ ಆದೇಶಿಸಲಿದೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(New Indian express) ಪ್ರತಿನಿಧಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಅವರನ್ನು ಸಂಪರ್ಕಿಸಿದಾಗ, “ನಾವು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವೀಡಿಯೊಗಳನ್ನು ನೋಡಿದ್ದೇವೆ. ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚಾಲಕರಿಗೆ ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಸಂಚಾರ ದಂಡವನ್ನೂ ಪಾವತಿಸಿದ್ದೇವೆ. ಆದಾಗ್ಯೂ, ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಉಲ್ಲಂಘನೆ ಮುಂದುವರಿದಿದೆ ಎಂದಿದ್ದಾರೆ.
ಮಾರ್ಚ್‌ನಲ್ಲಿ, ಕೆಎಸ್‌ಆರ್‌ಟಿಸಿ ಬಸ್‌ನಿಂದ ರಾಂಗ್-ಲೇನ್ ಡ್ರೈವಿಂಗ್ ಹೆದ್ದಾರಿಯಲ್ಲಿ ಸಾವಿಗೆ ಕಾರಣವಾಯಿತು. ಇತ್ತೀಚಿನ ವೀಡಿಯೋ ಒಂದರಲ್ಲಿ, ಬಿಡದಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಅಜಾಗರೂಕತೆಯಿಂದ ಯು-ಟರ್ನ್ ತೆಗೆದುಕೊಳ್ಳುತ್ತಿರುವುದು ಕಂಡುಬಂದರೆ, ಮತ್ತೊಬ್ಬ ಚಾಲಕ ಕಣಿಮಿಂಕೆ ಟೋಲ್ ಪ್ಲಾಜಾ ಬಳಿಯ ತಪ್ಪು ಮಾರ್ಗದಲ್ಲಿ 2 ಕಿ.ಮೀ. ಬಸ್ಸನ್ನು ಸುಮಾರು ದೂರ ಓಡಿಸಿದ್ದಾನೆ.
ಚಾಲಕರು ಕಾನೂನು ಉಲ್ಲಂಘಿಸುತ್ತಿರುವ ಬಗ್ಗೆ ತಿಳಿದುಕೊಳ್ಳಲು ನಾವು ತನಿಖೆಗೆ ಆದೇಶಿಸುತ್ತೇವೆ. ಅವರು ಏಕಮುಖ ದಿಕ್ಕಿನಲ್ಲಿ ಬರಲು ಏನಾದರೂ ಕಾರಣವಿದೆಯೇ ಟೋಲ್ ಅಥವಾ ಸಮಯವನ್ನು ತಪ್ಪಿಸಲು ಹೀಗೆ ಮಾಡುತ್ತಿದ್ದಾರೆಯೇ ಎಂದು ತನಿಖೆಯಿಂದ ಗೊತ್ತಾಗಲಿದೆ. ಈ ರೀತಿಯ ಉಲ್ಲಂಘನೆಗಳು ಪುನರಾವರ್ತನೆಯಾಗದಂತೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕುಮಾರ್ ಹೇಳಿದರು.