ರಾಜಕೀಯರಾಜ್ಯ

ವಿದ್ಯುತ್​ ಪ್ರವಹಿಸಿ ಅಜ್ಜ, ಅಜ್ಜಿ, ಮೊಮ್ಮಗಳು ಸಾವು.. ​ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Grandfather, grandmother, granddaughter died due to electrocution.. Minister Lakshmi Hebbalkar condoled with the deceased family.

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಹೃದಯವಿದ್ರಾವಕ ನಗರದಲ್ಲಿ ಸಂಭವಿಸಿದೆ.

ಇಲ್ಲಿನ ಶಾಹುನಗರದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸದಸ್ಯರು ದುರ್ಮರಣ ಹಿನ್ನೆಲೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟದೆ. ಸ್ಥಳಕ್ಕೆ ಕಟ್ಟಡದ ಮಾಲೀಕ ಮತ್ತು ಇಂಜಿನಿಯರ್ ಬಂದ ಬಳಿಕ ಮೃತದೇಹಗಳನ್ನು ತೆರವು ಮಾಡುತ್ತೇವೆ ಎಂದು ಸಂಬಂಧಿಕರು ಪಟ್ಟು ಹಿಡಿದಿದ್ದಾರೆ.

ಬೋರವೆಲ್ ಸ್ವಿಚ್ ಆನ್​ ಮಾಡುವ ವೇಳೆ ಕರೆಂಟ್ ಶಾಕ್ ಹೊಡೆದು ಈ ಅವಘಡ ಸಂಭವಿಸಿರುವುದಾಗಿ ಪ್ರಾಥಮಿಕ‌ ಮಾಹಿತಿ ಲಭ್ಯವಾಗಿದೆ. ಮೃತರು ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದ ನಿವಾಸಿ ಈರಪ್ಪ ಗಂಗಪ್ಪ ರಾಥೋಡ (55), ಶಾಂತವ್ವ ಈರಪ್ಪ ರಾಥೋಡ (50) ಮತ್ತು ಅನ್ನಪೂರ್ಣ ಹೊನ್ನಪ್ಪ ರಾಥೋಡ (8) ಎಂದು ಗುರುತಿಸಲಾಗಿದೆ.

ಮೃತ ಈರಪ್ಪ ಹಾಗೂ ಶಾಂತವ್ವ
ನಿರ್ಮಾಣ ಹಂತದ ಮನೆಗೆ ವಾಚ್‌ಮನ್ ಆಗಿ ರಾಥೋಡ್ ದಂಪತಿ ಕೆಲಸ ಮಾಡುತ್ತಿದ್ದರು. ಮೊಮ್ಮಗಳಾದ ಅನ್ನಪೂರ್ಣಳನ್ನು ಶಿಕ್ಷಣಕ್ಕಾಗಿ ತಮ್ಮ ಬಳಿ ಈ ದಂಪತಿ ಇಟ್ಟುಕೊಂಡಿದ್ದರು. ಬೆಳಿಗ್ಗೆ ಎಂದಿನಂತೆ ಕಟ್ಟಡಕ್ಕೆ ನೀರು ಹೊಡೆಯಲು ಅಜ್ಜ ಈರಪ್ಪ ಮೊಮ್ಮಗಳು ಅನ್ನಪೂರ್ಣಾಗೆ ಮೋಟರ್ ಆನ್​ ಮಾಡಲು ಹೇಳಿದ್ದಾರೆ. ಆಗ ಅನ್ನಪೂರ್ಣ ಮೋಟರ್ ಆನ್​ ಮಾಡಲು ಹೋದಾಗ ಟೆಕ್ನಿಕಲ್​ ಸಮಸ್ಯೆ ಎದುರಾಗಿದೆ. ಬಳಿಕ ಹೊರಗೆ ಬಂದ ಬಾಲಕಿ ಮೋಟರ್ ವಾಯರ್ ಹಿಡಿದುಕೊಂಡು ತೆರಳಿದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಮೊಮ್ಮಗಳ ಸ್ಥಿತಿ ಅರಿತ ಅಜ್ಜಿ ಶಾಂತವ್ವ ಹೊರಗೆ ಓಡಿ ಬಂದು ಬಾಲಕಿಯನ್ನು ಹಿಡಿದಿದ್ದಾರೆ. ಆಗ ಅಜ್ಜಿಗೂ ವಿದ್ಯುತ್ ತಾಗಿದೆ, ಇಬ್ಬರು ಒದ್ದಾಡುತ್ತಿರುವುದು ಕಂಡು ಧಾವಿಸಿದ ಅಜ್ಜ ಈರಪ್ಪಗೂ ವಿದ್ಯುತ್ ತಾಗಿದೆ. ಕರೆಂಟ್​ ಶಾಕ್​​ನಿಂದಾಗಿ ಸ್ಥಳದಲ್ಲೇ ಮೂವರು ಕೊನೆಯುಸಿರೆಳೆದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೇ ಬೆಳಗಾವಿಯಲ್ಲಿ ನೆಲೆಸಿರುವ ಲಂಬಾಣಿ ಸಮುದಾಯದ ಬಹಳಷ್ಟು ಜನರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಕಟ್ಟಡದ ಮಾಲೀಕ, ಇಂಜಿನಿಯರ್ ಬರುವಂತೆ ಕುಟುಂಬಸ್ಥರ ಪಟ್ಟು ಹಿಡಿದಿದ್ದು, ಸ್ಥಳದಲ್ಲೇ ಪರಿಹಾರ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರ ಮನವೊಲಿಕೆಗೆ ಮಣಿಯದ ಕುಟುಂಬಸ್ಥರು ಮೃತದೇಹಗಳನ್ನು ತೆರವುಗೊಳಿಸದಂತೆ ಪಟ್ಟು ಹಿಡಿದಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವೆ: ಸ್ಥಳಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದೊಂದು ದೊಡ್ಡ ದುರ್ಘಟನೆ. ಕಷ್ಟಪಟ್ಟು ದುಡಿದು ತಿನ್ನುತ್ತಿದ್ದರು. ದೇವರು ಕೂಡ ಒಮ್ಮೊಮ್ಮೆ ಬಹಳ ಹೃದಯಹೀನ ಆಗಿಬಿಡ್ತಾನೆ. ಸಂಪೂರ್ಣವಾದ ಸಹಕಾರ ನಮ್ಮಿಂದ ಮತ್ತು ನಮ್ಮ ಸರ್ಕಾರಿಂದ ನೀಡುತ್ತೇವೆ ಎಂದರು.

ನನಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದಿದ್ದೇನೆ. ಖರ್ಚು ವೆಚ್ಚವನ್ನ ನಮ್ಮ ಫೌಂಡೇಷನ್ ವತಿಯಿಂದ ನೀಡುತ್ತೇವೆ. ಸರ್ಕಾರದಿಂದ ಈ ದುರ್ಘಟನೆಗೆ ಕುಟುಂಬಕ್ಕೆ ಪರಿಹಾರ ನಿಡುತ್ತೇವೆ. ಯಾರದೋ ನಿರ್ಲಕ್ಷ್ಯದಿಂದ ಈ ಘಟನೆ ಆಗಿದೆ. ಮಗ ಹಾಗೂ ಸೊಸೆ ನನಗೆ ಯಾವುದೇ ಬೇಡಿಕೆ ಇಟ್ಟಿಲ್ಲ. ಮುಖ್ಯಮಂತ್ರಿಗಳ ಜತೆಗೆ ಮಾತನಾಡಿ ಪರಿಹಾರ ಕೊಡಿಸುತ್ತೇವೆ. ಕೆಲವರು ಪರಿಹಾರ ಈಗಲೇ ಅನೌನ್ಸ್ ಮಾಡಿ ಅಂತಿದ್ದಾರೆ. ಮನೆಯಲ್ಲಿ ಘಟನೆ ಆಗಿರುವುದರಿಂದ ಘಟನೆ ತನಿಖೆ ಬಳಿಕ ಯಾರ ನಿರ್ಲಕ್ಷ್ಯ ಗೊತ್ತಾಗಲಿದೆ. ಮನೆ ಮಾಲೀಕರು ಸಹ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು?: ಘಟನೆಗೆ ಹೆಸ್ಕಾಂ, ಕಟ್ಟಡ ಗುತ್ತಿಗೆದಾರ ಮತ್ತು ಮಾಲೀಕನ ನಿರ್ಲಕ್ಷ್ಯವೇ ಕಾರಣ. ಮೂವರ ವಿರುದ್ಧವೂ ಕೇಸ್ ದಾಖಲಿಸುತ್ತೇವೆ. ಆ ಕುಟುಂಬಕ್ಕೆ ಪರಿಹಾರ ಯಾವ ರೀತಿ ದೊರಕಿಸಲು ಸಾಧ್ಯವೋ ಯೋಚಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಮಾಜಿ ಶಾಸಕ ಅನಿಲ ಬೆನಕೆ, ಡಿಸಿಪಿ ಪಿ.ವ್ಹಿ.ಸ್ನೇಹಾ ಸೇರಿ ಪೊಲೀಸ್ ಮತ್ತು ಹೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ...

Back to top button
>