ವಿದ್ಯುತ್ ಅವಘಡದಲ್ಲಿ ಅಜ್ಜ, ಅಜ್ಜಿ ಮತ್ತು ಮೊಮ್ಮಗಳ ಸಾವು; ಸ್ಥಳಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ, ಸಾಂತ್ವನ
Death of grandfather, grandmother and granddaughter in electrical accident; Minister Lakshmi Hebbalkar visited the place and offered condolences
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಳಗಾವಿ: ವಿದ್ಯುತ್ ಅವಘಡದಿಂದ ಅಜ್ಜ-ಅಜ್ಜಿ ಹಾಗೂ ಮೊಮ್ಮಗಳು ಮೂವರು ಮೃತಪಟ್ಟಿರುವ ಘಟನೆ ಬೆಳಗಾವಿ ನಗರದ ಶಾಹೂ ನಗರದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಬೆಳಗಾವಿ ನಗರದಲ್ಲಿ ವಾಚಮನ್ ಆಗಿ ಕೆಲಸ ಮಾಡುತ್ತಿದ್ದ ಈರಪ್ಪ ಲಮಾಣಿ (50), ಶಾಂತವ್ವ ಲಮಾಣಿ (45) ಹಾಗೂ ಇವರ ಮೊಮ್ಮಗಳಾದ ಬಾಲಕಿ ಅನ್ನಪೂರ್ಣ ಲಮಾಣಿ (8) ಮೃತ ದುರ್ದೈವಿಗಳು. ಮೂಲತಃ ಜಿಲ್ಲೆಯ ರಾಮದುರ್ಗ ತಾಲೂಕಿನ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾ ನಿವಾಸಿಗಳು.
ಮೊಮ್ಮಗಳಿಗಾಗಿ ಪ್ರಾಣ ತೆತ್ತರು
ಶಾಹುನಗರದ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಈರಪ್ಪ ವಾಚಮನ್ ಆಗಿ ಕೆಲಸ ಮಾಡುತ್ತಿದ್ದ. ಕಟ್ಟಡ ಕಾಮಗಾರಿ ನಿಮಿತ್ತ ನಿಲ್ಲಿಸಲಾಗಿದ್ದ ಕಬ್ಬಿಣದ ಸರಕುಗಳ ಪಕ್ಕದಲ್ಲಿದ್ದ ವಿದ್ಯುತ್ ತಂತಿಯನ್ನು ಬಾಲಕಿ ಅನ್ನಪೂರ್ಣ ತುಳಿದಿದ್ದಾಳೆ. ಮೊಮ್ಮಗಳಿಗೆ ವಿದ್ಯುತ್ ಶಾಕ್ ತಗಲಿರುವುದನ್ನು ಗಮನಿಸಿದ ಅಜ್ಜ-ಅಜ್ಜಿ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಪ್ರಹರಿಸಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆರು ಗಂಟೆ ಸ್ಥಳದಲ್ಲೇ ಇದ್ದವು ಶವ
ವಿದ್ಯುತ್ ತಂತಿ ತಗುಲಿ ಮೂವರು ಮೃತಪಟ್ಟಿದ್ದರೂ ಯಾರೂ ಮೃತದೇಹಗಳನ್ನು ಹೊರತೆಗೆಯಲು ಮುಂದಾಗಲಿಲ್ಲ. ಪರಿಹಾರ ಸಿಗೂವವರಿಗೂ ಸ್ಥಳದಿಂದ ಶವ ಸಾಗಿಸಲು ಬೀಡುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದರು. ಅವಘಡ ಸಂಭವಿಸಿ ಆರು ಗಂಟೆ ನಂತರ ಕೊನೆಗೆ ತಾಂಡಾದ ಹಿರಿಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೆ ಶವಗಳನ್ನು ಸಾಗಿಸಿದರು.
ಅರಬೆಂಚಿ ತಾಂಡಾದಿಂದ ಕೂಲಿಗಾಗಿ ಬೆಳಗಾವಿಗೆ ಬಂದು ಜೀವನ ರೂಪಿಸಿಕೊಳ್ಳುವ ಕನಸು ಕಂಡಿದ್ದ ಕುಟುಂಬ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದೆ. ಅಜ್ಜ- ಅಜ್ಜಿ ವಾಚಮನ್ ಕೆಲಸ ಮಾಡುತ್ತ ಬಾಲಕಿಯ ಓದು ಹಾಗೂ ಜೀವನ ನೋಡಿಕೊಳ್ಳುತ್ತಿದ್ದರು. ಅರಬೆಂಚಿ ತಾಂಡಾದಲ್ಲಿ ಬಾಲಕಿಯ ತಂದೆ-ತಾಯಿ ಉಪಜೀವನ ನಡೆಸುತ್ತಿದ್ದಾರೆ.
ಕಟ್ಟಡದಲ್ಲಿನ ವಿದ್ಯುತ್ ಸ್ಥಗಿತಗೊಳಿಸಿ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಡಿಸಿಪಿ ಸ್ನೇಹಾ ಪಿ.ವಿ. ಪರಿಶೀಲಿಸಿದರು. ಬೆಳಗಾವಿ ಎಪಿಎಂಸಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಈ ವೇಳೆ ‘ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯವನ್ನು ತುಂಬುವ ಕೆಲಸ ಮಾಡಿದರು.
‘ಮುಖ್ಯಮಂತ್ರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ಈ ಘಟನೆಯ ಬಗ್ಗೆ ವಿವರಿಸಿದ್ದೇನೆ. ಪ್ರತಿ ವ್ಯಕ್ತಿಗೆ ತಲಾ 2 ಲಕ್ಷ ರೂ.ಗಳನ್ನು ಮಂಜೂರು ಮಾಡಿ ಕೊಡುವ ಸಲುವಾಗಿ ಮಾತಾನಾಡಿದ್ದೇನೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ತ್ವರಿತಗತಿಯಲ್ಲಿ ಪರಿಹಾರದ ಹಣ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದಲೂ ಆರ್ಥಿಕ ಸಹಾಯ ಮಾಡಿದ್ದೇನೆ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಹೆಸ್ಕಾಂ-ಮನೆ ಮಾಲೀಕರ ಮೇಲೂ ದೂರು
ವಿದ್ಯುತ್ ತಗುಲಿ ಮೂವರು ಸಾವಿಗೀಡಾಗಿದ್ದು, ಇದಕ್ಕೆ ಹೆಸ್ಕಾಂ ಅಧಿಕಾರಿಗಳು, ಮನೆಯ ಮಾಲೀಕರು, ನಿರ್ಮಾಣ ಗುತ್ತಿಗೆ ಪಡೆದ ಗುತ್ತಿಗೆದಾರರ ಮೇಲೆ 403ಎ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್. ಸಿದ್ದರಾಮಪ್ಪ ತಿಳಿಸಿದ್ದಾರೆ.
ವಿದ್ಯುತ್ ಸಂಪರ್ಕ ನೀಡುವಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಗುತ್ತಿಗೆದಾರ ಕೈಗೊಂಡಿಲ್ಲ. ಮೇಲಾಗಿ, ಈ ಮನೆಯ ಮಾಲೀಕರು ಬೆಂಗಳೂರಿನಲ್ಲಿ ಇದ್ದಾರೆ. ಈ ಮೂವರ ಮೇಲೆ ದೂರು ದಾಖಲಿಸಲಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.