ಶಿವನ ದೇವಸ್ಥಾನ ಕುಸಿತ, 30 ಜನರು ಸಾವನ್ನಪ್ಪಿರುವ ಶಂಕೆ, ಮೂವರ ಶವ ಪತ್ತೆ
Shiva temple collapse, 30 people suspected to have died, three bodies found
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಳೆಯ ನಂತರ ಹಲವೆಡೆ ಭೂಕುಸಿತ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಅಷ್ಟೇ ಅಲ್ಲ ಶಿವನ ದೇವಾಸ್ಥಾನವೊಂದು ಕುಸಿತಗೊಂಡ ಪರಿಣಾಮ 30 ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜ್ಯದ ವಿವಿಧೆಡೆ ಭೂಕುಸಿತ ಮತ್ತು ಭಾರೀ ಹಾನಿ ಆಗಿರುವುದರ ಬಗ್ಗೆ ವರದಿಯಾಗಿದೆ. ರಾಜಧಾನಿ ಶಿಮ್ಲಾದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಶಿವನ ದೇವಾಲಯವೂ ಭೂ ಕುಸಿತದ ಹಿಡಿತಕ್ಕೆ ಒಳಗಾಗಿದೆ. ಪರಿಣಾಮ ಸುಮಾರು 30ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಭಯವಿದೆ. ಸ್ಥಳೀಯ ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ ಮೂವರ ಮೃತದೇಹಗಳನ್ನು ಹೊರತೆಗೆದಿದೆ.
ಸುಮಾರು 30 ಜನರು ಸಾವು ಶಂಕೆ: ಸೋಮವಾರ ಬೆಳಗ್ಗೆ ಶಿವನ ದೇವಸ್ಥಾನವೊಂದು ಭೂಕುಸಿತಕ್ಕೆ ಒಳಗಾಗಿರುವ ಘಟನೆ ಶಿಮ್ಲಾದ ಸಮ್ಮರ್‌ಹಿಲ್ ಪ್ರದೇಶದಲ್ಲಿ ಕಂಡು ಬಂದಿದೆ. ದೇವಾಲಯ ಕುಸಿತಗೊಂಡ ಪರಿಣಾಮ, ಅವಶೇಷಗಳಡಿ ಸುಮಾರು 30 ಮಂದಿ ಸಿಲುಕಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಸೋಮವಾರ ಆಗಿದ್ದ ಕಾರಣ ದೇವಸ್ಥಾನದಲ್ಲಿ ಶಿವನ ಭಕ್ತರ ದಂಡೇ ಇತ್ತು ಎಂದು ಹೇಳಲಾಗುತ್ತಿದೆ.
ಭರದಿಂದ ಸಾಗಿದ ರಕ್ಷಣಾ ಕಾರ್ಯ: ಭೂಕುಸಿತಗೊಂಡ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡಿದ್ದರು. ಬಳಿಕ ಈ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ರವಾನಿಸಲಾಗಿತ್ತು. ಸುದ್ದಿ ತಿಳಿದ ಸ್ಥಳೀಯ ಆಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿಯವರೆಗೆ 15 ಜನರನ್ನು ರಕ್ಷಿಸಲಾಗಿದೆ ಮತ್ತು ಎಲ್ಲರನ್ನೂ ಚಿಕಿತ್ಸೆಗಾಗಿ ಐಜಿಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಎಸ್ಪಿ ಸುನೀಲ್ ನೇಗಿ ತಿಳಿಸಿದ್ದಾರೆ.
ರಕ್ಷಿಸಿದ ಜನರಿಗೆ ಐಜಿಎಂಸಿಯಲ್ಲಿ ಚಿಕಿತ್ಸೆ: ಶಿವನ ದೇವಸ್ಥಾನದ ಅವಶೇಷಗಳಲ್ಲಿ ಹೂತುಹೋದ ಜನರನ್ನು ರಕ್ಷಿಸಲಾಗುತ್ತಿದೆ. ಇದುವರೆಗೆ 3 ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಲನ್ನಲ್ಲಿ ಮೇಘಸ್ಫೋಟ: ಇದಕ್ಕೂ ಮುನ್ನಸೋಲನ್‌ನ ಜಾಡೋನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದ ಬಗ್ಗೆ ವರದಿಯಾಗಿತ್ತು. ಘಟನೆಯಲ್ಲಿ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿ, ಮೂವರು ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲ ಮತ್ತು ಐವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆ ಶಿಮ್ಲಾ-ಚಂಡೀಗಢ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸೋಲನ್‌ನ ಕಂದಘಾಟ್ ಉಪವಿಭಾಗದ ಜಾಡೋನ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಪ್ರಾಕೃತಿಕ ವಿಕೋಪದಲ್ಲಿ ಎರಡು ಮನೆಗಳು ಮತ್ತು ಒಂದು ಗೋಶಾಲೆ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.