ರಾಜಕೀಯರಾಜ್ಯ

ಲೋಕಸಭೆಗೆ ಶೀಘ್ರದಲ್ಲೇ ಬಿಜೆಪಿ ಆಕಾಂಕ್ಷಿಗಳ ಪಟ್ಟಿ- ಬಿ.ಎಸ್.ಯಡಿಯೂರಪ್ಪ

List of BJP aspirants for Lok Sabha soon- BS Yeddyurappa

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಶಿವಮೊಗ್ಗ : “ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯನ್ನು ಶೀಘ್ರದಲ್ಲೇ ತಯಾರಿಸಲಾಗುವುದು” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಇಂದು ಶಿವಮೊಗ್ಗದ ವಿನೋಬ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೋಕಸಭೆ ಚುನಾವಣೆ ಆಕಾಂಕ್ಷಿಗಳ ಬಗ್ಗೆ ಚರ್ಚೆ ಶುರುವಾಗಿಲ್ಲ. ಆದಷ್ಟು ಬೇಗ ಸ್ಪರ್ಧಿಸುವ ಆಕಾಂಕ್ಷಿಗಳ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಕಳೆದ ಲೋಕಸಭೆ ಚುನಾವಣೆಯಂತೆ ಈ ಬಾರಿಯೂ 25ಕ್ಕೆ 25 ಕ್ಷೇತ್ರವನ್ನೂ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ” ಎಂದರು.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, “ಸರ್ಕಾರದ ಮೇಲೆ ಒಂದರ ಮೇಲೊಂದರಂತೆ ಭ್ರಷ್ಟಾಚಾರದ ಆರೋಪಗಳು ಬರುತ್ತಿವೆ. ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಯಾವ ಮಂತ್ರಿಯ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆಯೋ ಅವರ ವಿರುದ್ಧ ತನಿಖೆ ಮಾಡಬೇಕು. ತನಿಖೆಯಲ್ಲಿ ತಪ್ಪು ಮಾಡಿರುವುದು ಕಂಡುಬಂದರೆ ಅಂಥವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು” ಎಂದು ಒತ್ತಾಯಿಸಿದರು.

“ಕೃಷಿ ಸಚಿವ ಚಲುವರಾಯ ಸ್ವಾಮಿ ವಿರುದ್ಧ ಅಧಿಕಾರಿಗಳಿಂದಲೇ ಆರೋಪ ಬಂದಿದೆ. ರಾಜ್ಯಪಾಲರಿಗೂ ದೂರು ನೀಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ” ಎಂದು ತಿಳಿಸಿದರು.

ಸರ್ಕಾರ ಆರು ತಿಂಗಳಲ್ಲಿ ಬೀಳಲಿದೆ ಎಂಬ ಬಸವನಗೌಡ ಪಾಟೀಲ್ ಯತ್ನಾಳ್​ ಹೇಳಿಕೆ ವಿಚಾರ‌ವಾಗಿ ಪ್ರತಿಕ್ರಿಯಿಸಿ, “ನಾನು ಆ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ರಾಜ್ಯ ಸರ್ಕಾರಕ್ಕೆ ಅಸ್ಥಿರತೆ ಕಾಡಲಾರಂಭಿಸಿದೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ” ಎಂದು ಹೇಳಿದರು.

 

 

ಇದನ್ನೂ ಓದಿ...

Back to top button
>