ರಾಜಕೀಯರಾಜ್ಯ

ಬಿಬಿಎಂಪಿ, ಜಿಪಂ-ತಾಪಂ ಚುನಾವಣೆ ನಡೆಸಲು ಸರ್ಕಾರ ಸಿದ್ಧ : ಡಿಕೆಶಿ

Govt ready to conduct BBMP, GP-TAP elections: DK

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು:  ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‍ಗಳಿಗೆ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದ್ದು, ನ್ಯಾಯಾಲಯದ ಆದೇಶದ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾಂಗ್ರೆಸ್‍ನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರಿದಂತೆ ವಿಪಕ್ಷಗಳಿಗೆ ಅಕಾರ ಸಿಗದ ಕಾರಣಕ್ಕೆ ಹೊಟ್ಟೆ ಉರಿಯಿಂದ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಹೊಟ್ಟೆಕಿಚ್ಚಿಗೆ ಮದ್ದಿಲ್ಲ, ಅವರು ಮಾಡುವ ಎಲ್ಲಾ ಆರೋಪಗಳು, ಷಡ್ಯಂತ್ರಗಳನ್ನು ಅರಗಿಸಿಕೊಳ್ಳುವ ಶಕ್ತಿ ಜನ ನನಗೆ ಕೊಟ್ಟಿದ್ದಾರೆ ಎಂದು ಹೇಳಿದರು.

ಪಂಚಖಾತ್ರಿ ಯೋಜನೆಗಳನ್ನು ದೇಶದಲ್ಲೇ ಇನ್ನೆಲ್ಲೂ ಇಲ್ಲದಂತಹ ಮಟ್ಟಿಗೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿದೆ. 36 ಸಾವಿರ ಕೋಟಿ ರೂ.ಗಳ ಅಗತ್ಯ ಅನುದಾನವನ್ನು ಅಭಿವೃದ್ಧಿ ಯೋಜನೆಗಳನ್ನು ಟ್ರಿಮ್ ಮಾಡಿ ಹೊಂದಾಣಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಪ್ರಜಾಪ್ರತಿನಿಧಿಗಳನ್ನು ನೇಮಿಸುವ ವಿಷಯದಲ್ಲಿ ನನಗೆ ಸಮಾಧಾನ ಇಲ್ಲ. ನಾವು ಶೇ. 20 ರಷ್ಟು ಕಾರ್ಯಕರ್ತರನ್ನು ಮಾತ್ರ ಬಳಕೆ ಮಾಡಿಕೊಂಡಿದ್ದೇವೆ. ಶೇ. 80 ರಷ್ಟು ಕಾರ್ಯಕರ್ತರಿಗೆ ಅವಕಾಶ ಸಿಕ್ಕಿಲ್ಲ. ಶೇ. 90 ರಷ್ಟು ಫಲಾನುಭವಿಗಳು ಸ್ವಯಂ ಪ್ರೇರಿತವಾಗಿ ಸೇವಾ ಕೇಂದ್ರಗಳಿಗೆ ಬಂದು ನೋಂದಣಿ ಮಾಡಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಬಾಗಿಲಿಗೆ ಹೋಗಿ ಪಂಚಖಾತ್ರಿಗಳು ಸರಿಯಾಗಿ ತಲುಪಿವೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ ಜನಸಾಮಾನ್ಯರ ಜೊತೆ ಸಂಪರ್ಕದಲ್ಲಿರಬೇಕು ಎಂದು ಡಿ.ಕೆ.ಶಿವಕುಮಾರ್ ಸೂಚಿಸಿದರು.

ಇದೇ ತಿಂಗಳ ಕೊನೆಯಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಉದ್ಘಾಟಿಸಲಾಗುತ್ತಿದೆ. ಮುಖ್ಯಮಂತ್ರಿ ಬಟನ್ ಒತ್ತಿದಾಕ್ಷಣ ಫಲಾನುಭವಿಗಳ ಖಾತೆಗೆ ಹಣ ರವಾನೆಯಾಗುತ್ತದೆ. ಈ ಕಾರ್ಯಕ್ರಮವನ್ನು ಪ್ರತಿ ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಹೇಗೆ ಎಂಬುದನ್ನು ಬಿಜೆಪಿಯವರು ನಮಗೆ ಪಾಠ ಹೇಳಿಕೊಟ್ಟಿದ್ದಾರೆ. ಅದನ್ನು ಪಾಲನೆ ಮಾಡೋಣ ಎಂದರು.

ಜಿಪಂ, ತಾಪಂ, ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳ ಚುನಾವಣೆ ನಮ್ಮ ಮುಂದಿರುವ ಸವಾಲು. ಬಿಬಿಎಂಪಿಗೆ ಈ ಹಿಂದೆ 143 ವಾರ್ಡ್‍ಗಳನ್ನು ಬಿಜೆಪಿಯವರು ಮಾಡಿದ್ದರು. ಅದರಲ್ಲಿ ಬಹಳಷ್ಟು ಕಾನೂನು ಬಾಹಿರವಾಗಿದ್ದವು. ನಾವು ವಾರ್ಡ್‍ಗಳ ಸಂಖ್ಯೆಯನ್ನು 225 ಕ್ಕೇರಿಸಿದ್ದೇವೆ. ನಿನ್ನೆ ಮುಖ್ಯಮಂತ್ರಿಯವರು ಅದಕ್ಕೆ ಸಹಿ ಹಾಕಿದ್ದಾರೆ. ನಾಳೆ ಆಕ್ಷೇಪಗಳ ಆಹ್ವಾನಕ್ಕೆ ಅಧಿಸೂಚನೆ ಜಾರಿಯಾಗಲಿದೆ.

ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಅಲ್ಲಿಂದ ಆದೇಶ ಬರುತ್ತಿದ್ದಂತೆ ಸಂಸತ್ ಚುನಾವಣೆಗೆ ಕಾಯದೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆ ನಡೆದ ಮಾರ್ಗದಲ್ಲಿ ತುರುವೇಕೆರೆ ಹೊರತುಪಡಿಸಿ ಉಳಿದೆಲ್ಲಾ ಕಡೆ ಕಾಂಗ್ರೆಸ್ ಗೆದ್ದಿದೆ. ಯಾತ್ರೆಗಾಗಿ ಯಾರು, ಎಷ್ಟು ಖರ್ಚು ಮಾಡಿದ್ದಾರೆ, ಅವರ ಶ್ರಮ ಏನೆಂಬುದು ನಮಗೆ ಅರಿವಿದೆ. ಚುನಾವಣಾ ಫಲಿತಾಂಶದಿಂದಾಗಿ ವಿಪಕ್ಷಗಳಿಗೆ ತಡೆದುಕೊಳ್ಳಲಾಗುತ್ತಿಲ್ಲ.

ಈವರೆಗೂ ವಿರೋಧಪಕ್ಷದ ನಾಯಕನ ಆಯ್ಕೆ ಮಾಡಿಕೊಳ್ಳಲಾಗದ ಅವರು ಸರ್ಕಾರದ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡುತ್ತಿದ್ದಾರೆ. ಆರಂಭದಲ್ಲಿ ಪಂಚಖಾತ್ರಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿದ್ದರು. ಆದರೆ ಅದನ್ನು ಜನ ನಂಬಲಿಲ್ಲ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಬಹಳಷ್ಟು ಮಂದಿ ಸೇವಾ ಕೇಂದ್ರಗಳಿಗೆ ಹೋಗಿ ಸೌಲಭ್ಯ ಪಡೆಯುತ್ತಿದ್ದಾರೆ. ಈಗ ಕಮಿಷನ್ ಆರೋಪ ಮಾಡುತ್ತಿದ್ದಾರೆ.

ನಾನು ತಪ್ಪು ಮಾಡಿದ್ದರೆ ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿಯವರು ಬಂದು ಒಂದೂವರೆ ಗಂಟೆ ಕಾಲ ನನ್ನೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬುತ್ತಿರಲಿಲ್ಲ. ಎಲ್ಲಾ ಆರೋಪಗಳಿಗೂ ದಾಖಲೆ ಸಹಿತ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಪಕ್ಷದ ಪದಾಕಾರಿಗಳನ್ನು ಬದಲಾವಣೆ ಮಾಡಿ ಹೊಸ ತಂಡ ಕಟ್ಟಲಾಗುವುದು. ಬ್ಲಾಕ್ ಮತ್ತು ಜಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಚೇರಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಬಿ.ಎನ್.ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ...

Back to top button
>