ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ನಾಣ್ಣುಡಿ ಇದೆ ಅಂತ ಹೇಳಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದು ನಿಲ್ಲಿಸಬೇಕು. ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ನಟ ಉಪೇಂದ್ರ ಹಾಗೂ ಸಚಿವ ಮಲ್ಲಿಕಾರ್ಜುನ್ ವಿರುದ್ಧ ಕೇಳಿ ಬಂದಿರುವ ಜಾತಿ ನಿಂದನೆ ಆರೋಪ ಸಂಬಂಧ ಪರಮೇಶ್ವರ್ ಅವರು ಇಂದು ಪ್ರತಿಕ್ರಿಯೆ ನೀಡಿದರು.
ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದು ನಿಲ್ಲಿಸಬೇಕು. ನಾಣ್ಣುಡಿ ಇದೆ ಅಂತ ಹೇಳಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಇದನ್ನು ನಿಲ್ಲಿಸಿದರೆ ಒಳ್ಳೆಯದು, ಚುಚ್ಚು ಮಾತುಗಳನ್ನಾಡುವಾಗ ವಿವೇಚನೆ ಇರಬೇಕು. ಇಂತಹ ಹೇಳಿಕೆಗಳನ್ನು ನಾನು ಸಹಿಸಲ್ಲ. ಹೀಗೆ ಮಾತಾಡುವುದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ಲವೇ? ಸಚಿವರೇ ಆಗಲಿ, ಯಾರೇ ಆಗಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಉಪೇಂದ್ರ, ಮಲ್ಲಿಕಾರ್ಜುನ್ ಪ್ರಕರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ತಮ್ಮ ಹೇಳಿಕೆಯು ಒಂದು ಸಮುದಾಯವನ್ನು ಅವಮಾನಿಸುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲವೇ? ಯಾವುದೇ ವ್ಯಕ್ತಿ, ಸಮುದಾಯದವರಿಗೆ ನೋವುಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು ಎಂದು ತಿಳಿಸಿದರು.
ಸಚಿವ ಮಲ್ಲಿಕಾರ್ಜುನ್ ಅವರು ಏನು ಮಾಡಿದ್ದಾರೆಂಬುದು ಗೊತ್ತಿಲ್ಲ. ವೀಡಿಯೊ ನೋಡಿಲ್ಲ. ಅವರ ವಿರುದ್ಧ ದೂರು ದಾಖಲಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಇದ್ದು ಕೀಳಾಗಿ ಮಾತಾಡುವುದು ಸರಿಯಲ್ಲ. ಎರಡೂ ಪ್ರಕರಣಗಳ ಬಗ್ಗೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದರು.
ನಟ ಉಪೇಂದ್ರ ಅವರು ತಮ್ಮ ಪ್ರಜಾಕೀಯ ಪಕ್ಷದ ಆರನೇ ವರ್ಷದ ವಾರ್ಷಿಕೋತ್ಸವದ ಸಂದರ್ಭ ಇನ್ಸ್ಟಾಗ್ರಾಂ, ಫೇಸ್ಬುಕ್ನ ಲೈವ್ ವಿಡಿಯೋದಲ್ಲಿ ಮಾತನಾಡುತ್ತಾ ಆಕ್ಷೇಪಾರ್ಹ ಶಬ್ದವನ್ನು ಬಳಕೆ ಮಾಡಿದ್ದರು, ಇದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಉಪೇಂದ್ರ ವಿರುದ್ಧ ಬೆಂಗಳೂರಿನ ಎರಡು ಪ್ರತ್ಯೇಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಉಪೇಂದ್ರ ಅವರು ಬೇಷರತ್ ಕ್ಷಮೆಯಾಚಿಸಿದ್ದರು. ಸಮಾಜದ ಯಾವುದೇ ವರ್ಗದ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ನನ್ನದಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಬಳಿಕ ಉಪೇಂದ್ರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಈ ವಿವಾದ ಬೆನ್ನಲ್ಲೇ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಸಚಿವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಸಂದರ್ಶನದಲ್ಲಿ ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ನಗರದ ಅಶೋಕ್ ಥಿಯೇಟರ್ ಬಳಿ ನಿರ್ಮಾಣಗೊಂಡಿರುವ ಅಂಡರ್ ಪಾಸ್ ಬಗ್ಗೆ ಅಭಿಪ್ರಾಯ ಕೇಳಲಾಗಿದ್ದು, ಈ ವೇಳೆ ಸಚಿವರು, ಇದನ್ನು ನೀವು ಆ ಸೀದ್ದೇಶ್ವರ್ (ಸಂಸದರು) ಅವರಲ್ಲಿ ಕೇಳಬೇಕು. ಅದು ಅಸಮರ್ಪಕವಾಗಿದೆ. ಈ ಬಗ್ಗೆ ಹಲವು ಬಾರಿ ನಾನು ಪ್ರಶ್ನೆ ಮಾಡಿದ್ದೆ, ಸಂಬಂಧಪಟ್ಟ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ʼʼಊರನ್ನು ಹೊಲೆಗೇರಿ ಮಾಡಬೇಡಿʼʼ ಅಂತ ಹೇಳಿದ್ದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.