ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ”ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದ್ದರಿಂದಲೇ ಬಿಜೆಪಿಗೆ ಇಂದು ರಾಜ್ಯದಲ್ಲಿ ಈ ಸ್ಥಿತಿ ಬಂದಿದೆ” ಎಂದು ರಾಜಗುರು ದ್ವಾರಕಾನಾಥ್ ಹೇಳಿದ್ದಾರೆ.
ದಿಗ್ವಿಜಯ ನ್ಯೂಸ್ 24/7 ವಾಹಿನಿಗೆ ವಿಶೇಷ ಸಂದರ್ಶನ ನೀಡಿರುವ ಅವರು, ”ಯಡಿಯೂರಪ್ಪ ಅವರನ್ನು ಕಿತ್ತು ಹಾಕಿ ಬಿಜೆಪಿ ಏನಾಯ್ತು?
ಅವರನ್ನು ಮುಟ್ಟದಿದ್ದರೆ ಬಿಜೆಪಿ ಚೆನ್ನಾಗಿರುತ್ತಿತ್ತು. ಅಲ್ಲಿಂದಲೇ ಆ ಪಕ್ಷಕ್ಕೆ ಕಷ್ಟಗಳು ಶುರುವಾದವು. ಇಷ್ಟು ದಿವಸ ಬಿಜೆಪಿ ಸಮೃದ್ಧವಾಗಿ ಬೆಳೆದು ಏನು ಮಾಡಿತು? ಈಗಲೂ ಬಿಜೆಪಿ ಏಕಾಂಗಿಯಾಗಿ ಸ್ವಂತ ಬಲದಿಂದ ಗೆದ್ದು ಬಂದು ಅಧಿಕಾರದಲ್ಲಿ ನಿಂತುಕೊಳ್ಳುವುದು ಕಷ್ಟ ಸಾಧ್ಯ. ಏಕೆಂದರೆ ವ್ಯಾಪಾರಸ್ಥರು ನೆಮ್ಮದಿಯಾಗಿಲ್ಲ, ಹೊಸ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಅಗಾಧವಾದ ಸಾಲದ ಹೊರೆಯನ್ನು ಬಿಟ್ಟಿದ್ದಾರೆ, ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ” ಎಂದು ವಿಶ್ಲೇಷಿಸಿದರು.
‘ಹತ್ತು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ ಅಧಿಕಾರಕ್ಕೆ ಬರುತ್ತಿದ್ದರು. ಆದರೆ ಅವರ ಜನಪ್ರಿಯತೆ ಈಗ ಕುಗ್ಗಿದೆ. ಕುಗ್ಗುವಿಕೆಗೆ ಕಾರಣಗಳಿವೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಿತ್ತು’ ಎಂದರು.
ಮೈಸೂರ್‌ಪಾಕ್ ಇನ್ನೂ ರೆಡಿಯಾಗಿಲ್ಲ
‘ಸಿದ್ದರಾಮಯ್ಯ ಅಧಿಕಾರ ನಡೆಸಲು ಈಗಷ್ಟೇ ಆರಂಭಿಸಿದ್ದಾರೆ. ಎಲ್ಲರಿಗೂ ಸಹನೆ ಬೇಕು. ವಿಪರೀತ ಅಪೇಕ್ಷೆ ಮಾಡುವುದು ತಪ್ಪು. ಕಾಂಗ್ರೆಸ್ ಸರ್ಕಾರ ಈಗಷ್ಟೇ ಟೇಕಾಫ್ ಆಗುತ್ತಿದೆ. ಅವರ ಸಾಧನೆ ಏನಾದರೂ ಜನರಿಗೆ ಗೊತ್ತಾಗುವುದಾದರೆ ಡಿಸೆಂಬರ್ ನಂತರವೇ. ಲೋಕಸಭೆ ಚುನಾವಣೆ ಬರುವಷ್ಟರೊಳಗೆ ಸಾಧನೆ ಮಾಡಿರುತ್ತಾರೆ. ಇನ್ನೂ ಜನಗಳಿಗೆ ಎಲ್ಲ ಗ್ಯಾರಂಟಿಗಳ ಪ್ರಯೋಜನ ತಲುಪಿಲ್ಲ. ಮೈಸೂರ್ ಪಾಕ್ ಇನ್ನೂ ರೆಡಿಯಾಗಿಲ್ಲ, ಅದು ಕಡಲೆ ಹಿಟ್ಟಿನ ರೂಪದಲ್ಲಿದೆ’ ಎಂದು ದ್ವಾರಕಾನಾಥ್ ಹೇಳಿದರು.
ಅದೃಷ್ಟ ಇದ್ರೆ ಒದ್ದುಕೊಂಡು ಬರುತ್ತೆ
‘ಡಿ.ಕೆ.ಶಿವಕುಮಾರ್ ಅವರಿಗೆ ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಯಾಗುವ ಯೋಗ ಇದೆಯಾ ಎಂಬ ಪ್ರಶ್ನೆಗೆ, ಶಿವಕುಮಾರ್ ಇಂದಲ್ಲ ನಾಳೆ ಮುಖ್ಯಮಂತ್ರಿ ಆಗುತ್ತಾರೆ. ಚುನಾವಣೆ ನಡೆದಾಗ ಕಾಲ ಪಕ್ವವಾಗಿರಲಿಲ್ಲ. ಅವರಿಗೆ ರಾಜಯೋಗ ಇರಲಿಲ್ಲ. ಯೋಗ ಬರುತ್ತದೆ, ಕಾಯಬೇಕು. ದೇವರು ಕೊಡಬೇಕು ಅಂದ್ರೆ ಕೊಟ್ಟೇ ಕೊಡುತ್ತಾನೆ, ಅದೃಷ್ಟ ಇದ್ರೆ ಒದ್ದುಕೊಂಡು ಬರುತ್ತದೆ. ದೇವರಾಜ ಅರಸು ತಾವು ಮುಖ್ಯಮಂತ್ರಿ ಆಗುತ್ತೇವೆಂದು ಕನಸು ಕಂಡಿದ್ದರೇ..? ಆದರೆ ಅವರಿಗೆ ದೈವ ಒಲಿದು ಬಂದಿತ್ತು, ಸಿಎಂ ಆಗಿಬಿಟ್ಟರು” ಎಂದು ಹೇಳಿದರು.
ನನ್ನ ಮತ್ತು ಡಿ.ಕೆ. ಶಿವಕುಮಾರ್ ಅವರ ಬಾಂಧವ್ಯ ತಂದೆ-ಮಗನ ತರಹ. ನಾನು ಯಾವತ್ತೂ ಅವರ ಮನೆಗೆ ಹೋಗಿಲ್ಲ, ಇದುವರೆಗೂ ಯಾವೊಬ್ಬ ರಾಜಕಾರಣಿಯ ಮನೆಗೂ ಹೋಗಿಲ್ಲ. ಶಿವಕುಮಾರ್ ಏನು ಸಂಪಾದನೆ ಮಾಡಿದ್ದಾರೋ ಅದು ಅವರಿಗೇ ಗೊತ್ತಿದೆ. ಅವರಿಂದ ನಾನು ಯಾವುದಕ್ಕೂ ಆಸೆ ಪಟ್ಟಿಲ್ಲ ಎಂದರು.
ಇದು ಅವರಿಗೆ ಒಳ್ಳೆಯ ಟೈಂ
‘ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಟೈಂ ಸದ್ಯ ಬಹಳ ಚೆನ್ನಾಗಿದೆ. ಆದ್ದರಿಂದ ಕುಮಾರಸ್ವಾಮಿ ಮಾತನಾಡುವುದನ್ನು ನಿಲ್ಲಿಸಿ ಮಹತ್ತರವಾದ ಸಾಧನೆ ಮಾಡಬಹುದು. ಅವರನ್ನು ನಂಬಿದವರು, ಅವರ ಜನಾಂಗದವರು ಇದ್ದಾರೆ. ಅವರ ಮಾತನ್ನು ಕೇಳಿಸಿಕೊಂಡು ಪಕ್ಷ ಕಟ್ಟುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಗೆದ್ದಿರುವವರ ಬಗ್ಗೆ ಮಾತನಾಡಬಾರದು. ಗೆದ್ದಿರುವವರಿಗೆ ಕಿವಿ ಕೇಳಿಸುವುದಿಲ್ಲ. ಹೇಗೆ ಮಹಾರಾಜರಿಗೆ ತಕ್ಷಣಕ್ಕೆ ಕಿವಿ ಕೇಳಿಸುವುದಿಲ್ಲವೋ, ಕಣ್ಣು ಕಾಣಿಸುವುದಿಲ್ಲವೋ ಹಾಗೆಯೇ. ಯಾರು ಹೇಳಿದ ಮಾತೂ ಕೇಳುವುದಿಲ್ಲ… ಆದ್ದರಿಂದ ಕಾಂಗ್ರೆಸ್ಗೂ ಹೇಳಬೇಡಿ, ಬಿಜೆಪಿಗೂ ಹೇಳಬೇಡಿ, ಸುಮ್ಮನೆ ನಿಮ್ಮ ಪಕ್ಷವನ್ನು ಕಟ್ಟಿ. 11ನೇ ಮನೆಯಲ್ಲಿ ಗುರು ಇದ್ದಾನೆ, ಶನಿ ಇದ್ದಾನೆ. ಇದು ಕುಮಾರಸ್ವಾಮಿ ಅವರಿಗೆ ಒಳ್ಳೆಯ ಟೈಂ. ದೇವೇಗೌಡರು ಕಷ್ಟಪಟ್ಟು ಕಟ್ಟಿದ ಪಕ್ಷವನ್ನು ಹಾಳು ಮಾಡದೆ ಉಳಿಸಿಕೊಂಡು, ಮೌನವಾಗಿ ಸಾಧನೆ ಮಾಡಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದೋರು, ಅವರ ಬಗ್ಗೆ ಗೌರವವಿದೆ. ಏನು ಉಪದೇಶ ಹೇಳಬೇಕೋ ಅಷ್ಟು ಮಾತ್ರ ಹೇಳಬಲ್ಲೆ’ ಎಂದರು.
ರಾಹುಲ್ ಗಾಂಧಿ ಮುಂದೆ ಜನಾನುರಾಗಿ ಆಗ್ತಾರೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡಿದ್ದರು. ಜನರೊಂದಿಗೆ ಬೆರೆಯುವಂತಹ ಕೆಲಸ ಮಾಡುತ್ತಿದ್ದಾರೆ. ಕೆಲವರು ಅವರನ್ನು ಬಫೂನ್ ಎನ್ನುವ ರೀತಿಯಲ್ಲಿ ನೋಡಿದ್ದರು, ಈಗ ರಾಹುಲ್ ಗಾಂಧಿ ಯೋಗ ಹೇಗಿದೆ ಎಂಬ ಪ್ರಶ್ನೆಗೆ, ”ಮೋದಿಯವರಿಗೆ ಏನು ಅನುಭವವಿತ್ತು. ಪೆದ್ದ ಕೂಡ ಆ ಕುರ್ಚಿಯಲ್ಲಿ ಕುಳಿತಿದ್ದರೂ ಧರ್ಮದೇವತೆಗಳು ಬಂದು ಕಾಪಾಡಿ ಬುದ್ಧಿ ಕೊಡುತ್ತವೆ. ಪೆದ್ದರು ಅಂತ ಹೇಳುವುದಕ್ಕೆ ನಮಗೇನು ಅಧಿಕಾರವಿದೆ? ರಾಹುಲ್ ಗಾಂಧಿಗೆ ನಾಯಕತ್ವ ಗುಣ ಇರುವುದರಿಂದಲೇ ಭಾರತ್ ಜೋಡೋ ಸಾಧ್ಯವಾಯಿತು. ಮುಂದೆ ಅವರು ಜನಾನುರಾಗಿ ಆಗುತ್ತಾರೆ” ಎಂದು ದ್ವಾರಕಾನಾಥ್ ತಿಳಿಸಿದರು.
ಮುಂಬರುವ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಏನಾದರೂ ದೊಡ್ಡ ಬದಲಾವಣೆ ಆಗುತ್ತದೆಯೇ ಅಥವಾ ಮೋದಿಯವರು ಹೇಳಿದ ಹಾಗೆ ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿ, ಆರ್ಥಿಕವಾಗಿ ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿರುತ್ತದೆಯೇ ಎಂಬ ಪ್ರಶ್ನೆಗೆ, ‘ಇದು ಬೆಳೆಯುವ ರಾಷ್ಟ್ರ. ಭಾರತದ ಮುಂದೆ ಎಲ್ಲ ರಾಷ್ಟ್ರಗಳೂ ಕುಂಠಿತವಾಗುತ್ತವೆ. ಚೀನಾ ಎಲ್ಲ ರಾಷ್ಟ್ರಗಳನ್ನು ಎತ್ತಿ ಕಟ್ಟಿ, ಚೀನಾ ಎಂದರೆ ಭಯ ಬೀಳುವ ಹಾಗೆ ಮಾಡಿದೆ. ಆದರೆ ಅವರ ದೇಶವನ್ನು ಅವರು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಮುಂದೆ ಬರುತ್ತದೆ’ ಎಂದರು.
ದೇವರು ಬದಲಾವಣೆ ತಂದ್ರೆ ಎಲ್ಲವೂ ಸಾಧ್ಯ
ಶೇ. 70ರಷ್ಟು ಜನರ ಕೈಯಲ್ಲಿ ಸಂಪತ್ತು ಇದೆ. ಉಳಿದ ಜನರ ಕೈಯಲ್ಲಿ ಹಣ ಇಲ್ಲ. ಇಂತಹ ಕಷ್ಟದಲ್ಲಿರುವ ಜನರಿಗೆ ಏನು ಹೇಳಲು ಇಷ್ಟಪಡುತ್ತೀರಿ ಎಂದಾಗ ‘ಯಾರೇ ಅಧಿಕಾರಕ್ಕೆ ಬರಲಿ 5 ವರ್ಷ ಎಂಎಲ್‌ಎ ಆಗ್ತಾರೆ. ಎಲ್ಲರೂ ಕೂಡ ಬುದ್ಧಿ ಬಲದಿಂದ ಎಂಎಲ್‌ಎ ಆಗಿಲ್ಲ, ಧನ ಬಲದಿಂದ ಆದವರೇ ಹೆಚ್ಚಿದ್ದಾರೆ. ದೇವರು ಬದಲಾವಣೆ ತಂದ್ರೆ ಎಲ್ಲವೂ ಸಾಧ್ಯ’ ಎಂದರು.
ಸಮೀಪಿಸುತ್ತಿದೆ ಸತ್ಯಯುಗ: ‘ಸತ್ಯಯುಗ ಸಮೀಪಿಸುತ್ತಿದೆ. ಸತ್ಯಯುಗದಲ್ಲಿ ದೇಶ ಬದಲಾವಣೆ ಆಗುತ್ತದೆ. ಭಾರತ ದೇಶ ಇಡೀ ಜಗತ್ತಿನಲ್ಲಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ತುಂಬಾ ಅನುಭವಿಗಳು ಹೀಗೆ ಬರೆದಿದ್ದಾರೆ. ಆ ಗ್ರಂಥಗಳ ಅವಲೋಕನ ಮಾಡಿದರೆ ಇದು ನಮಗೆ ತಿಳಿಯುತ್ತದೆ’ ಎಂದರು.