ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಿದಂತೆ ಮಣಿಪುರಕ್ಕೂ ಹೋಗಬೇಕಿತ್ತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರಧಾನಮಂತ್ರಿಯವರು ಬೆಂಗಳೂರಿಗೆ ಬಂದಂತೆಯೇ ಮಣಿಪುರಕ್ಕೂ ಹೋಗಬೇಕಿತ್ತು. ಮಣಿಪುರಕ್ಕೆ ಹೋಗದೆ, ಬೆಂಗಳೂರಿಗೆ ಬಂದಿದ್ದಕ್ಕೆ ಟೀಕೆ ಬಂದೇ ಬರುತ್ತದೆ. ಮಣಿಪುರದಲ್ಲಿ ಗಲಭೆ ಉಂಟಾದಾಗ ಅಲ್ಲಿಗೆ ತೆರಳಿ, ಸಂಕಷ್ಟದಲ್ಲಿದ್ದವರನ್ನು ಭೇಟಿ ಆಗಬೇಕಿತ್ತು. ಆದರೆ ಅದನ್ನು ಮಾಡದೇ ಇರುವುದು ಖಂಡನೀಯ” ಎಂದಿದ್ದಾರೆ.
“ಚಂದ್ರಯಾನಕ್ಕೆ ಯಾರ್ಯಾರು ಶ್ರಮ ಪಟ್ಟಿದ್ದಾರೆ ಅಂತಹ ವಿಜ್ಞಾನಿಗಳಿಗೆ ಸಹಕಾರ ನೀಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಸ್ರೋಗೆ ಯಾರಿಗೆ ಹೋಗಲು ಅವಕಾಶ ಇದೆಯೋ ಅವರು ಹೋಗಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಯಾರಿಗೆ ಹೋಗಲು ಆಗಲಿಲ್ಲವೋ, ಅವರು ಅಲ್ಲಿಂದಲೇ ಅಭಿನಂದನೆ ಸಲ್ಲಿಸಿದ್ದಾರೆ” ಎಂದು ಹೇಳಿದರು.
ಬ್ಯಾರಿಕೇಡ್ ಬಳಿ ಬಿಟ್ಟಿರುವುದೇ ಪುಣ್ಯ.. “ರಾಜ್ಯ ಬಿಜೆಪಿಗೆ ನಾಯಕರಿಗೆ 67 ಸ್ಥಾನ ನೀಡಿದ್ದಕ್ಕೆ ಅವರನ್ನು ಬ್ಯಾರಿಕೇಡ್ನಲ್ಲಿದಾರೂ ನಿಲ್ಲಿಸಿದ್ದಾರೆ. ಮುಂದೆ ಅವರಿಗೆ ಬ್ಯಾರಿಕೇಡ್ ಬಳಿ ಬರಲು ಸಹ ಅವಕಾಶ ಸಿಗುವುದಿಲ್ಲ. ಈಗ ಅವರನ್ನು ಬ್ಯಾರಿಕೇಡ್ ಬಳಿ ಬಿಟ್ಟಿರುವುದೇ ಪುಣ್ಯ” ಎಂದು ಬಿಜೆಪಿ ನಾಯಕರನ್ನು ಟೀಕಿಸಿದರು.
ಹೊಸ ಶಿಕ್ಷಣ ನೀತಿಗೆ ವಿರೋಧ: “ಹೊಸ ಶಿಕ್ಷಣ ನೀತಿಯನ್ನು ನಾವು ವಿರೋಧ ಮಾಡುತ್ತೇವೆ. ಏಕೆಂದರೆ, ಮಕ್ಕಳಿಗೆ ಅವಶ್ಯಕತೆ ಇಲ್ಲದೇ ಇರುವುದನ್ನು ಅವರ ತಲೆಗೆ ತುಂಬುತ್ತಾರೆ. ನಮ್ಮ ದೇಶದಲ್ಲಿ ಭಾಷೆ, ಸಂಸ್ಕೃತಿ ಎಲ್ಲವೂ ಬೇರೆ ಬೇರೆ ಆಗಿದ್ದರೂ, ನಾವೆಲ್ಲಾ ಭಾರತೀಯರು. ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿದ್ದೇವೆ. ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲ್ಲವೆಂದು. ನೂತನ ಶಿಕ್ಷಣ ನೀತಿಗಿಂತ ರಾಜ್ಯ ಶಿಕ್ಷಣ ನೀತಿಯು ಚೆನ್ನಾಗಿದೆ. ನಮ್ಮಲ್ಲಿ ಶಾಲೆ, ಶಿಕ್ಷಕರ ಕೊರತೆ ಇದ್ರು ಸಹ ಮುಂದೆ ಎಲ್ಲವನ್ನು ಸರಿಪಡಿಸಲಾಗುವುದು” ಎಂದು ಹೇಳಿದರು.
ಬಳಿಕ, ‘ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯನ್ನು ಇನ್ನೂ ಯಾಕೆ ಜಾರಿ ಮಾಡಿಲ್ಲ?’ ಎಂದು ಪ್ರಶ್ನಿಸಿದರು. “ನೂತನ ಶಿಕ್ಷಣ ನೀತಿಯಿಂದ ರಾಜ್ಯಕ್ಕೆ ಅನುದಾನದ ಕೊರತೆ ಎದುರಾಗುತ್ತಿದೆ. ನಮ್ಮಂತ ದೊಡ್ಡ ರಾಜ್ಯದ ಒಬ್ಬ ಮಗುವಿಗೆ ಕೇಂದ್ರ 6 ಸಾವಿರ ರೂಪಾಯಿ ಖರ್ಚು ಮಾಡಬೇಕು. ಆದರೆ ಈಗ ಕೇವಲ 2800 ರೂಪಾಯಿಗಳನ್ನು ನೀಡುತ್ತಿದ್ದಾರೆ. ಇದು ಸರಿಯಲ್ಲ. ಮಕ್ಕಳಿಗೆ ಎರಡು ಮೊಟ್ಟೆ, ಪುಸ್ತಕ, ಬಟ್ಟೆಯನ್ನು ನಾವು ನೀಡುತ್ತಿದ್ದೇವೆ. ಅವರು ಹಣ ನೀಡದೇ ಇದ್ರು ನಾವು ಮಕ್ಕಳಿಗೆ ವಿತರಿಸುತ್ತಿದ್ದೇವೆ” ಎಂದರು.
“ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಆಸೆ ಇರುತ್ತದೆ. ಇದರಿಂದ ರಾಜ್ಯದಲ್ಲಿ ಒಳ್ಳೆಯ ಶಾಲೆಯ ಕೊರತೆ ಇದೆ. ಹಾಗಾಗಿ ಮಕ್ಕಳನ್ನು ಕೆಪಿಎಸ್ ಮಾದರಿಯ ಶಾಲೆಗಳಿಗೆ ಕಳುಹಿಸಬೇಕೆಂಬ ಆಲೋಚನೆ ಇದೆ. ಆ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳಿಗೆ ಒಂದರಂತೆ ಕೆಪಿಎಸ್ ಶಾಲೆ ತೆರೆಯುವ ಚಿಂತನೆ ಇದೆ. ಶಾಲೆಗಳಲ್ಲಿ ಮಕ್ಕಳ ಕೊರತೆ ಇದ್ದಲ್ಲಿ ಅಂತಹ ಶಾಲೆಯನ್ನು ಸೇರ್ಪಡೆ ಮಾಡುವ ಯೋಚನೆ ಇದೆ. ಶಾಲೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಕುರಿತು ಕೂಡ ಆಲೋಚನೆ ಮಾಡಿದ್ದೇವೆ” ಎಂದು ತಿಳಿಸಿದರು.