ರಾಜಕೀಯರಾಜ್ಯ

ರಾಜ್ಯದಲ್ಲಿ ಬರಗಾಲ ನಿರ್ವಹಣೆ ಕುರಿತು ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ, ಕೇಂದ್ರಕ್ಕೆ ಪರಿಹಾರಕ್ಕೆ ಮನವಿ: ಸಿಎಂ ಸಿದ್ದರಾಮಯ್ಯ

Cabinet sub-committee meeting on drought management in the state discussed and concluded, appeal to center for relief: CM Siddaramaiah

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಮೈಸೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ. ಜೂನ್-ಜುಲೈ ಕೆಲವು ದಿನಗಳವರೆಗೆ ಮಳೆ ಬಂದಿದ್ದು ಬಿಟ್ಟರೆ ಕಳೆದ ಒಂದು ತಿಂಗಳಿನಿಂದ ರಾಜ್ಯದ ಯಾವ ಭಾಗಗಳಲ್ಲಿಯೂ ಉತ್ತಮ ಮಳೆಯಾಗಿಲ್ಲ. ರೈತರು, ಕೃಷಿಕರು ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿದೆ.

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಮೈಸೂರಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯನವರನ್ನು ರಾಜ್ಯದಲ್ಲಿ ಬರ ನಿರ್ವಹಣೆಗೆ ಸರ್ಕಾರದ ಯೋಜನೆಗಳೇನಾದರೂ ಇದೆಯೇ ಎಂದು ಕೇಳಿದಾಗ, ಅದಕ್ಕೆ ಸಂಪುಟ ಉಪ ಸಮಿತಿಯಿದೆ. ಅಲ್ಲಿ ಒಂದು ಸಭೆ ನಡೆದಿದೆ. ಇಂದು ಅಥವಾ ನಾಳೆ ಮತ್ತೊಂದು ಸಭೆ ನಡೆಸುತ್ತಾರೆ. ಆ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಅದನ್ನು ಸಚಿವ ಸಂಪುಟ ಸಭೆಯ ಮುಂದಿಡಲಾಗುತ್ತದೆ. ಅಲ್ಲಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬರ ನಿರ್ವಹಣೆಗೆ ಏನು ಕ್ರಮ ಕೈಗೊಳ್ಳಬೇಕೆಂದು ಅಂತಿಮವಾಗಿ ನಿರ್ಧರಿಸಲಾಗುವುದು ಎಂದರು.

ಮೋಡ ಬಿತ್ತನೆ ಯಶಸ್ವಿಯಾಗಿಲ್ಲ: ಮಳೆ ಕೈಕೊಟ್ಟಿದ್ದರಿಂದ ಮೋಡ ಬಿತ್ತನೆ ಮಾಡುವ ಯೋಜನೆ ಸರ್ಕಾರದ ಮುಂದಿದೆಯೇ ಎಂದು ಕೇಳಿದಾಗ, ಈ ಹಿಂದೆ ಮೋಡ ಬಿತ್ತನೆ ಯಶಸ್ವಿಯಾಗಿಲ್ಲ. ಮೋಡ ಬಿತ್ತನೆಯಿಂದ ಮಳೆಯಾಗಿದ್ದು ಕೇಳಿದ್ದೀರಾ, ಮೋಡ ಬಿತ್ತನೆ ಬಗ್ಗೆ ನಿಮಗೆ ಅನುಭವವಿದೆಯೇ ಎಂದು ಸುದ್ದಿಗಾರರನ್ನು ಸಿಎಂ ಮರು ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರಕ್ಕೆ ಮನವಿ: ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ ಬರಗಾಲ ಉಂಟಾಗಿದೆ ಎಂದು ಘೋಷಿಸಿದ ನಂತರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ತಂಡ ಬಂದು ಪರೀಕ್ಷಿಸಿದ ನಂತರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(NDRF)ಯಿಂದ ಪರಿಹಾರ ನೀಡುವ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಬರಪೀಡಿತ ಪ್ರದೇಶ ಎಂದು ತಾಲ್ಲೂಕುಗಳನ್ನು ಘೋಷಿಸಿದ ನಂತರ ಬರಪರಿಹಾರ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಅಲ್ಲಿನ ಜನರಿಗೆ ಕೆಲಸ, ಉದ್ಯೋಗ ನೀಡುವ ಕಾರ್ಯಕ್ರಮಗಳನ್ನು ಸರ್ಕಾರ ಪ್ರಾರಂಭಿಸುತ್ತದೆ ಎಂದರು.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಕ್ಷಣ ಪರಿಹಾರ: ಇನ್ನು ಇಂದು ಮೈಸೂರಿನ ಜಿಲ್ಲಾ ಪಂಚಾಯತ್​​ ಸಭಾಂಗಣದಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಸಂಸದ ಮತ್ತು ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಿದರು. ಸಭೆಯಲ್ಲಿ ಯಾವ ರೈತರು ಕೂಡ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಏನೋ ಕಷ್ಟದಲ್ಲಿ ಆತುರದ ನಿರ್ಧಾರಕ್ಕೆ ಬಂದಿರುತ್ತಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಕ್ಷಣ ಪರಿಹಾರ ಕೊಡಿ. ರೈತರ ಆತ್ಮಹತ್ಯೆ ಪ್ರಕರಣದಲ್ಲಿ ತಡಮಾಡಬೇಡಿ. ದುಡ್ಡು ಕೊಡುವುದು ಸರ್ಕಾರ ಅಲ್ಲ ನಾವು. ದಸರಾ ಇದೆ ಅಂತ ನೆಪ ಹೇಳಿಕೊಂಡು ರೈತರ ಕೆಲಸ ಮರೆಯಬೇಡಿ. ಪರಿಹಾರ ಕೊಟ್ಟು ಸುಮ್ಮನಾಗಬೇಡಿ, ಆತ್ಮಹತ್ಯೆಗೆ ಕಾರಣ ತಿಳಿದುಕೊಳ್ಳಿ. ರೈತರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಇದನ್ನೂ ಓದಿ...

Back to top button
>