ರಾಜಕೀಯರಾಜ್ಯ

ಇನ್ನು 15 ದಿನದೊಳಗೆ ಅರ್ಹ ಫಲಾನುಭವಿಗಳ ಖಾತೆಗೆ ‘ಗೃಹ ಲಕ್ಷ್ಮಿ’ ಹಣ ಜಮೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

'Griha Lakshmi' money will be deposited in the accounts of eligible beneficiaries within 15 days: Minister Lakshmi Hebbalkar ​Look up details

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದವರಲ್ಲಿ ಕೆಲವರಿಗೆ ಒಂದು ಬಾರಿ ಹಣ ಬಂದಿದ್ದರೆ ಇನ್ನು ಕೆಲವರಿಗೆ ಇದುವರೆಗೆ ಹಣವೇ ಬಂದಿಲ್ಲ. ಅರ್ಜಿ ಸಲ್ಲಿಸಲು ಹೋದರೆ ಹತ್ತಾರು ದಾಖಲೆ ಕೇಳುತ್ತಾರೆ, ಅದು ಸರಿ ಇಲ್ಲ, ಇದನ್ನು ಬದಲಾಯಿಸಿಕೊಂಡು ಬನ್ನಿ ಎನ್ನುತ್ತಾರೆ ಹೀಗೆ ಮಹಿಳೆಯರು ಆರೋಪಿಸುತ್ತಿದ್ದರು.

ಕಳೆದ ಮೂರು ತಿಂಗಳುಗಳಿಂದ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ರಾಜ್ಯದ 1.2 ಕೋಟಿ ಗೃಹಿಣಿಯರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ ಯೋಜನೆ ಅನುಷ್ಠಾನಗೊಂಡು ಮೂರು ತಿಂಗಳು ಕಳೆದರೂ ಕೂಡ ಶೇಕಡಾ 30ರಷ್ಟು ಕೂಡ ಅರ್ಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಮಾಸಿಕ 2,000 ರೂಪಾಯಿ ಹಣ ಜಮಾ ಆಗುತ್ತಿಲ್ಲ. ಅರ್ಹ ಮಹಿಳೆಯರಿಗೆ ಹಣ ಏಕೆ ಜಮಾ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇದೆ.

15 ದಿನಗಳಲ್ಲಿ ಬ್ಯಾಂಕ್ ಖಾತೆಗೆ ಹಣ: ಇನ್ನು 15 ದಿನದೊಳಗೆ ಅರ್ಹ ಫಲಾನುಭವಿಗಳ ಬ್ಯಾಂಕ್​​ ಖಾತೆಗೆ ಗೃಹಲಕ್ಷ್ಮೀ ಹಣ ಬರಲಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಮಹಿಳೆಯರ ಖಾತೆಗೆ ಹಣ ಹೋಗಿಲ್ಲ. ಹೀಗಾಗಿ ಇಂದು ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ‌ಯೋಜನೆ ನೋಂದಣಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ನಂತರ ಪ್ರತಿ ಜಿಲ್ಲೆಯಿಂದಲೂ ಮಾಹಿತಿ ಪಡೆದರು. ಕಲಬುರಗಿ ಜಿಲ್ಲೆಯಲ್ಲೇ 14 ಸಾವಿರ ‘ಗೃಹಲಕ್ಷ್ಮೀ’ ಅರ್ಜಿ ಬಾಕಿ ಇದೆ. ಈ ಹಿನ್ನೆಲೆ ಕಲಬುರಗಿ ಸಿಡಿಪಿಒಗೆ ತರಾಟೆ ತೆಗೆದುಕೊಂಡರು. ಆದಷ್ಟು ಬೇಗ ಅರ್ಜಿಯನ್ನು ವಿಲೇವಾರಿ ‌ಮಾಡಲು ಏನು ಸಮಸ್ಯೆ? ಏಕೆ ಇಷ್ಟು ಅರ್ಜಿ ಬಾಕಿ ಇದೆ ಎಂದು ಪ್ರಶ್ನಿಸಿದರು. ಈ ವೇಳೆ ವಾರದೊಳಗೆ ಅರ್ಜಿ ವಿಲೇವಾರಿ ಮಾಡುವುದಾಗಿ ಸಿಡಿಪಿಒ ತಿಳಿಸಿದ್ದಾರೆ.

ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಸೂಚನೆ: ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಹಣವನ್ನು ನೇರವಾಗಿ ಅಂಚೆ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ ರಾಜ್ಯದ ಮಹಿಳೆಯರು ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯ ಗೃಹಿಣಿಯರಿಗೆ ಮಾಹಿತಿ ನೀಡಿದ್ದಾರೆ. ಅಂಚೆ ಇಲಾಖೆಯಲ್ಲಿ ಖಾತೆ ತೆರೆದರೆ ಅರ್ಹ ಗೃಹಿಣಿಯರ ಖಾತೆಗೆ ಒಟ್ಟಾಗಿ 6,000 ರೂಪಾಯಿ ಜಮಾ ಆಗಲಿದೆ ಎಂದು ಆಶ್ವಾಸನೆ ನೀಡಿದರು.

ಇದನ್ನೂ ಓದಿ...

Back to top button
>