ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕೆಇಎ ಪರೀಕ್ಷಾ ವ್ಯಾಪಕ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆಯವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಗಳವಾರ ಆಗ್ರಹಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಬಿಜೆಪಿ, ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸುವುದಕ್ಕೆ ಕುಖ್ಯಾತಿ ಪಡೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಆರ್.ಡಿ. ಪಾಟೀಲ್, ಕಾನ್‌ಸ್ಟೇಬಲ್ ಪರೀಕ್ಷೆಯಲ್ಲೂ ಅಕ್ರಮ ನಡೆಸಲು ಹೊಂಚು ಹಾಕಿ ಕೂತಿದ್ದು ಬೆಳಕಿಗೆ ಬಂದಿದೆ. ಪ್ರತಿಯೊಂದು ಪರೀಕ್ಷೆಯಲ್ಲೂ ಆರ್.ಡಿ. ಪಾಟೀಲ್ ರಾಜಾರೋಷವಾಗಿ ಅಕ್ರಮ ನಡೆಸಲು ಕಾರಣ ಆತನ ಬೆನ್ನಿಗೆ ಎಟಿಎಂ ಸರ್ಕಾರ ನಿಂತಿರುವುದರಿಂದ. ಸಿಬಿಐ ತನಿಖೆಗೆ ವಹಿಸಿ ಎಂದರೆ ಸಚಿವ ಪ್ರಿಯಾಂಕ್ ಖರ್ಗೆ ಮೂಗು ಮುರಿಯುವುದಕ್ಕೆ ಕಾರಣ ತಮ್ಮ ಬುಡಕ್ಕೆ ಪ್ರಕರಣ ಬಂದು ಬೀಳಲಿದೆ ಎನ್ನುವುದು ಅವರಿಗೆ ಖಾತರಿಯಾಗಿದೆ ಎಂದು ಹೇಳಿದೆ.
ಮಾನ್ಯ ಗೃಹ ಸಚಿವ ಪರಮೇಶ್ವರ್ ಸಾಹೇಬರೇ, ಯಾರಿಗಾಗಿ ಯಾರಿಗೋಸ್ಕರ ಕಿಂಗ್ ಪಿನ್ ಆರ್. ಡಿ. ಪಾಟೀಲ್ ಅವರನ್ನು ಬಂಧಿಸದೆ ಕಳ್ಳಾಟವಾಡುತ್ತಿದ್ದೀರಿ? ಆರ್. ಡಿ. ಪಾಟೀಲ್ ಬಂಧನವಾದರೆ ಪ್ರಿಯಾಂಕ್ ಖರ್ಗೆ ಹೆಸರು ಹೊರ ಬರಲಿದೆ ಎನ್ನುವ ಆತಂಕ ಎಟಿಎಂ ಸರ್ಕಾರಕ್ಕೆ ಇದ್ದಂತಿದೆ. ಹೀಗಾಗಿಯೇ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್‌ಪಿನ್ ಕಾಂಪೌಂಡ್ ಹಾರಿ ಹೋಗಲು ಬಿಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಳ್ಳ ಪೊಲೀಸ್ ಆಟ ಆಡುತ್ತಾ ಕಳ್ಳರನ್ನು ರಾಜಾರೋಷವಾಗಿ ಓಡಾಡಿಕೊಂಡು ಇರುವಂತೆ ಬಿಟ್ಟು, ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿ ಕಲೆಕ್ಷನ್ ಮಾಡುತ್ತಿದೆ. ವರ್ಷಪೂರ್ತಿ ಕಷ್ಟಪಟ್ಟು ಓದಿ ನೌಕರಿ ಕನಸು ಕಾಣುತ್ತಿರುವ ಬಡ ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆಯುವ ಗ್ಯಾರಂಟಿ ಕೊಟ್ಟಿದೆ ಸಿದ್ದರಾಮಯ್ಯ ಅವರ ಸರ್ಕಾರ ಎಂದು ವ್ಯಂಗ್ಯವಾಡಿದೆ.
ಹಗರಣ, ಅಕ್ರಮಗಳ ಹೂರಣದಲ್ಲಿ ಯಾವುದೇ ಮುಲಾಜಿಲ್ಲದೆ ಭಾಗಿಯಾಗಿ, ಸದಾ ಕಲೆಕ್ಷನ್, ಕಮಿಷನ್ ಎನ್ನುತ್ತಾ, ಕೆ.ಇ.ಎ ಪರೀಕ್ಷಾ ಅಕ್ರಮ ಹಾಗೂ ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾಗಿರುವ ಕಿಂಗ್ ಪಿನ್‌ಗಳನ್ನು ರಕ್ಷಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಚಿವ ಸ್ಥಾನದಲ್ಲಿ ಮುಂದುವರೆಯಲು ಒಂದು ಕ್ಷಣವೂ ಅರ್ಹರಲ್ಲ. ಸಿಎಂ ಸಿದ್ದರಾಮಯ್ಯ ಅವರೇ, ಮೊದಲು ಈ ಕಡುಭ್ರಷ್ಟ ಸಚಿವರನ್ನು ನಿಮ್ಮ ಸಂಪುಟದಿಂದ ವಜಾ ಮಾಡಿ ಎಂದು ಆಗ್ರಹಿಸಿದೆ.
ಬಿಜೆಪಿ ಶಾಸಕ ಬಿವೈ.ವಿಜಯೇಂದ್ರ ಅವರು ಮಾತನಾಡಿ, ಪರೀಕ್ಷಾ ಅಕ್ರಮ ಎಸಗಿರುವ ಆರ್. ಡಿ. ಪಾಟೀಲ್ ಬೆಂಬಲಕ್ಕೆ ಸರ್ಕಾರವೇ ನಿಂತಿದೆ. ಆರೋಪಿಯನ್ನು ಬಂಧಿಸುವ ಸುಲಭ ಅವಕಾಶವಿದ್ದರೂ ಸರ್ಕಾರವೇ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ಮಾತನಾಡಿ, ಆರ್. ಡಿ. ಪಾಟೀಲ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರಪಿ ಮಹಾರಾಷ್ಟ್ರ ರಾಜ್ಯಕ್ಕೆ ಪರಾರಿಯಾಗಿರುವ ಕುರಿತು ಮಾಹಿತಿ ಬಂದಿದೆ. ಶೀಘ್ರದಲ್ಲೇ ಆತನನ್ನು ಬಂಧನಕ್ಕೊಳಪಡಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಗತ್ಯಬಿದ್ದರೆ ಸಿಐಡಿ ತನಿಖೆಗೆ ನೀಡಲಾಗುವುದು ಎಂದು ತಿಳಿಸಿದರು.