ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿಯ ನೂತನ ರಾಜ್ಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದ ಶಾಸಕರು.
ಇದರೊಂದಿಗೆ, ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಕೊನೆಗೊಂಡಿದೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಮುಂಚಿತವಾಗಿ ಆಗಿರುವ ಈ ಬದಲಾವಣೆ ಪಕ್ಷದ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ ಕರ್ನಾಟಕ ಟ್ವೀಟ್‌ನಲ್ಲಿ ಏನಿದೆ
ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನಿಯುಕ್ತಿಗೊಳಿಸಿದ್ದಾರೆ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ.
ವಿಜಯೇಂದ್ರ ಅವರಿಗೆ ಅಭಿನಂದನೆಗಳ ಸುರಿಮಳೆ
ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಯುವ ನಾಯಕ ಶ್ರೀ ಬಿ. ವೈ. ವಿಜಯೇಂದ್ರ ರವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಅಧ್ಯಕ್ಷ ಅವಧಿಯಲ್ಲಿ ಪಕ್ಷ ಮತ್ತಷ್ಟು ಸಂಘಟನಾತ್ಮಕವಾಗಿ ಬಲಗೊಂಡು ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ಇನ್ನೂ ಕಗ್ಗಂಟು
ಬಹಳ ಕಾಯುವಿಕೆಯ ಬಳಿಕ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬಿಜೆಪಿ ವರಿಷ್ಠರ ನಡೆ ಗಮನಸೆಳೆದಿದೆ. ಈ ನಡುವೆ, ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಯಾರು ಎಂಬುದು ಇನ್ನೂ ತೀರ್ಮಾನ ಆಗಿಲ್ಲ.
ವಿಧಾನ ಸಭೆ ಚುನಾವಣೆಯಲ್ಲಿ ಕೆಟ್ಟ ಸೋಲು ಅನುಭವಿಸಿದ ಬಳಿಕ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿತ್ತು. ಹೀಗಾಗಿ ವಿಪಕ್ಷ ನಾಯಕ ಯಾರಾಗಬೇಕು ಎಂಬುದು ತೀರ್ಮಾನ ಆಗಿರಲಿಲ್ಲ. ಇನ್ನು ಈ ಪ್ರಕ್ರಿಯೆ ವೇಗ ಪಡೆಯಬಹುದು ಎಂಬ ನಿರೀಕ್ಷೆ ನಾಯಕರ ನಡುವೆ ಹುಟ್ಟಿಕೊಂಡಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.