ಜೀವನಶೈಲಿರಾಜ್ಯವಿಶೇಷ

ನರಕ ಚತುರ್ದಶಿ ದಿನದ ಅಭ್ಯಂಗ ಸ್ನಾನದ ಮಹತ್ವವೇನು

What is the significance of Abhyanga bath on Naraka Chaturdashi day

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಎಲ್ಲೆಲ್ಲೂ ದೀಪಾವಳಿಯದ್ದೇ ಮಾತು. ದೀಪಾವಳಿ ಶಾಪಿಂಗ್‌, ದೀಪಾವಳಿ ಅಡುಗೆ, ದೀಪಾವಳಿ ಷೇರು ಮಾರುಕಟ್ಟೆ, ಹೀಗೆ ವಾರದ ಮೊದಲೇ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಶನಿವಾರ, ನವೆಂಬರ್‌ 11 ರಿಂದ ಧನ ತ್ರಯೋದಶಿ ಮೂಲಕ ದೀಪಾವಳಿ ಆರಂಭವಾಗುತ್ತದೆ. 5 ದಿನಗಳ ಆಚರಣೆ ಕೂಡಾ ಬಹಳ ವಿಭಿನ್ನವಾಗಿದೆ. ಧನ ತ್ರಯೋದಶಿಯಂದು ಜನರು ಮನೆಗೆ ಚಿನ್ನ, ಬೆಳ್ಳಿ ಕೊಂಡು ತರುತ್ತಾರೆ.

ಹಾಗೇ ದಕ್ಷಣದಲ್ಲಿ ಧನ ತ್ರಯೋದಶಿಯಂದು ಲಕ್ಷ್ಮೀಪೂಜೆ ಮಾಡುವುದರ ಜೊತೆಗೆ ನೀರು ತುಂಬು ಹಬ್ಬ ಆಚರಿಸುತ್ತಾರೆ. ಇದರ ಮರು ದಿನ ಅಂದರೆ, ನವೆಂಬರ್‌ 12 ರಂದು ನರಕ ಚತುರ್ದಶಿ ಆಚರಿಸಲಾಗುತ್ತದೆ. ಈ ದಿನ ಅಭ್ಯಂಗ ಸ್ನಾನಕ್ಕೆ ಬಹಳ ಮಹತ್ವ ಇದೆ. ಮುಂಜಾನೆ ಅಥವಾ ಸೂರ್ಯಾಸ್ತದ ಮೊದಲು ಅಭ್ಯಂಗ ಸ್ನಾನ ಮಾಡಿದರೆ ಉತ್ತಮ.

ಅಭ್ಯಂಗ ಸ್ನಾನದ ಮಹತ್ವವೇನು?

ಪ್ರತಿಯೊಂದು ಆಚರಣೆ ಹಿಂದೆಯೂ ಒಂದು ಕಥೆ ಇದೆ, ಅದರದ್ದೇ ಆದ ಮಹತ್ವ ಇದೆ. ಅದೇ ರೀತಿ ಅಭ್ಯಂಗ ಸ್ನಾನಕ್ಕೂ ಮಹತ್ವ ಇದೆ. ಅಭ್ಯಂಗ ಸ್ನಾನವು ಮನುಷ್ಯನು ತನ್ನಲ್ಲಿರುವ ಅಹಂಕಾರ, ಕೋಪ, ಜಗಳ , ಹೆಮ್ಮೆ ಮತ್ತು ಅಸೂಯೆಯನ್ನು ತೆಗೆದು ಹೊಸ ಭರವಸೆಯೊಂದಿಗೆ ದೇಹದ ಶುದ್ದತೆ, ಮನಸ್ಸಿನ ಆಧ್ಯಾತ್ಮಿಕ ಶುದ್ದತೆಯನ್ನು ಸೂಚಿಸುತ್ತದೆ. ಅಭ್ಯಂಗ ಸ್ನಾನದ ಕುರಿತಂತೆ ಒಂದು ಕಥೆ ಇದೆ. ಬ್ರಹ್ಮನಿಂದ ವರ ಪಡೆಯುವ ನರಕಾಸುರನು ನನಗೆ ಯಾರಿಂದಲೂ ತೊಂದರೆ ಆಗುವುದಿಲ್ಲ ಎಂದು ಅಹಂನಿಂದ ಬೀಗುತ್ತಾನೆ, ಇದೇ ಗುಂಗಿನಲ್ಲಿ ಆತ ದೇವತೆಗಳಿಗೆ ಸಮಸ್ಯೆ ತಂದೊಡ್ಡುತ್ತಾನೆ. ಆಗ ದೇವತೆಗಳು ಕೃಷ್ಣನ ಮೊರೆ ಹೋಗುತ್ತಾರೆ. ಆಗ ನರಕಾಸುರನು ಕೃಷ್ಣನನ್ನು ಕೊಲ್ಲುತ್ತಾನೆ. ಆ ಸಮಯದಲ್ಲಿ ತನ್ನ ದೇಹದ ಮೇಲೆ ಹಾರಿದ ನರಕಾಸುರನ ರಕ್ತವನ್ನು ತೊಡೆದುಹಾಕಲು ಎಣ್ಣೆ ಸ್ನಾನ ಮಾಡುತ್ತಾನೆ, ಆದ್ದರಿಂದಲೇ ಅಂದಿನಿಂದ ಇದುವರೆಗೂ ನರಕಚತುರ್ದಶಿಯಂದು ಎಣ್ಣೆ ಸ್ನಾನ ಮಾಡಬೇಕು ಎಂಬ ಪದ್ದತಿ ಇದೆ.

ಹಾಗೇ ಅದೇ ದಿನ ಧನಲಕ್ಷ್ಮಿ ಪೂಜೆ ಇರುವುದದಿಂದ ಲಕ್ಷ್ಮಿಯು ಮನೆಗೆ ಆಗಮಿಸುವ ಮುನ್ನ ಮನೆಯಲ್ಲಿ, ಮನದಲ್ಲಿ ಎಲ್ಲಾ ಕೊಳಕು, ಅಶುಭಗಳನ್ನು ತೆಗೆಯಲು ಎಣ್ಣೆ ಸ್ನಾನ ಮಾಡಲಾಗುವುದು ಎಂದು ನಂಬಲಾಗಿದೆ. ಅಷ್ಟೇ ಅಲ್ಲ ಈ ದಿನ ಎಣ್ಣೆ ಸ್ನಾನ ಮಾಡುವವರಿಗೆ ಸಕಲ, ಸಮೃದ್ಧಿ, ಸಂತೋಷ ದೊರೆಯಲಿದೆ ಎಂದು ನಂಬಲಾಗಿದೆ.

ವೈಜ್ಞಾನಿಕ ಕಾರಣ ಹೀಗಿದೆ: ಅಭ್ಯಂಗ ಸ್ನಾನ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಇದು ಚರ್ಮದ ಮೇಲ್ಮೈಯಿಂದ ಸತ್ತ ಜೀವಕೋಶಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಅಭ್ಯಂಗ ಸ್ನಾನಕ್ಕೆ ಬಳಸುವ ಎಣ್ಣೆ ಪರಿಮಳಯುಕ್ತವಾಗಿರುವುದರಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ರಿಲಾಕ್ಸ್‌ ಎನಿಸುತ್ತದೆ.

ಅಭ್ಯಂಗ ಸ್ನಾನಕ್ಕೆ ಯಾವ ಎಣ್ಣೆ ಒಳ್ಳೆಯದು?

ಕೆಲವರು ಅಭ್ಯಂಗ ಸ್ನಾನಕ್ಕೆ ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆ, ತೆಂಗಿನೆಣ್ಣೆ ಹಾಗೂ ಇತರ ಪರಿಮಳಯುಕ್ತ ಎಣ್ಣೆಯನ್ನು ಬಳಸುತ್ತಾರೆ. ಆದರೆ ಅದೆಲ್ಲಾ ಎಣ್ಣೆಗಳಿಗೆ ಹೋಲಿಸಿದರೆ ಕಪ್ಪು ಎಳ್ಳಿನ ಎಣ್ಣೆಯು (ಎಳ್ಳೆಣ್ಣೆ) ಅಭ್ಯಂಗ ಸ್ನಾನಕ್ಕೆ ಒಳ್ಳೆಯದು. ಎಳ್ಳೆಣ್ಣೆ ಕೂದಲು ಹಾಗೂ ಚರ್ಮಕ್ಕೆ ಬಹಳ ಒಳ್ಳೆಯದು. ಕೂದಲು ಮತ್ತು ನೆತ್ತಿಯ ಸೋಂಕಿನಿಂದ ಇದು ರಕ್ಷಿಸುತ್ತದೆ. ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಕಾಲಿಕ ನೆರೆಯನ್ನು ತಪ್ಪಿಸುತ್ತದೆ. ಹಾಗೇ ಚರ್ಮಕ್ಕೆ ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ ನೀಡುತ್ತದೆ.

ಎಣ್ಣೆಯನ್ನು ಹೇಗೆ ಹಚ್ಚಿಕೊಳ್ಳಬೇಕು?

ತಾಯಿ, ಅಜ್ಜಿ ಅಥವಾ ಮನೆಯ ಹಿರಿಯರು ಎಣ್ಣೆ ಹಚ್ಚುವುದು ಸಂಪ್ರದಾಯ. ಅಥವಾ ನೀವೇ ಹಚ್ಚಿಕೊಳ್ಳಬಹುದು. ಅಭ್ಯಂಗ ಸ್ನಾನಕ್ಕೆ ಎಣ್ಣೆ ಹಚ್ಚುವಾಗ ಮೊದಲು ಸ್ವಲ್ವ ನೆತ್ತಿಯ ಮೇಲೆ ಹಚ್ಚಬೇಕು ನಂತರ ಹಣೆಗೆ ಹಚ್ಚಿ ಮಸಾಜ್‌ ಮಾಡಿಕೊಳ್ಳಬೇಕು. ನಂತರ ಮೂಗಿಗೆ ಹಚ್ಚಿ ಒಮ್ಮೆ ಎಣ್ಣೆಯ ವಾಸನೆಯನ್ನು ಆಸ್ವಾದಿಸಬೇಕು. ಇದಾದ ನಂತರ ಬಾಯಿಯ ಸುತ್ತಮುತ್ತ, ಕೆನ್ನೆಗಳು, ಕಿವಿಗಳು, ಕತ್ತಿನ ಹಿಂಭಾಗ, ಎದೆ ಮತ್ತು ಹೊಟ್ಟೆಯ ಸುತ್ತ ಮುತ್ತ, ಬೆನ್ನು, ಕಾಲುಗಳು, ಕೊನೆಗೆ ಸಂಪೂರ್ಣ ತಲೆಯ ಮೇಲೆ ಎಣ್ಣೆ ಹಚ್ಚಿ ಮಸಾಜ್‌ ಮಾಡಿ. ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ.

ಸ್ನಾನಕ್ಕೆ ಬಿಸಿನೀರು ಅಥವಾ ತಣ್ಣೀರು ಯಾವುದು ಒಳ್ಳೆಯದು?

ತಲೆ, ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್‌ ಮಾಡಿದ ನಂತರ 45 ನಿಮಿಷ ಬಿಟ್ಟು ಸ್ನಾನ ಮಾಡಬಹುದು. ಕೆಲವೊಂದು ಸಮಯಗಳಲ್ಲಿ ತಣ್ಣೀರು ಮಾಡುವುದು ಒಳ್ಳೆಯದಾದರೂ ಅಭ್ಯಂಗ ಸ್ನಾನಕ್ಕೆ ಬಿಸಿ ನೀರಿನ ಸ್ನಾನವೇ ಉತ್ತಮ. ಅದರಲ್ಳೂ ಹಂಡೆ ನೀರು ಒಳ್ಳೆಯದು. ಸ್ನಾನ ಮಾಡುವಾಗ ಮನೆಯ ಹಿರಿಯರು ಮೊದಲು ನೀರು ಹಾಕಬೇಕು.

ಅಭ್ಯಂಗ ಸ್ನಾನ ಮಾಡಲು ಸಾಬೂನು, ಕಡ್ಲೆಹಿಟ್ಟು ಯಾವುದು ಬೆಸ್ಟ್?‌

ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಲು ಸೀಗೆಪುಡಿ ಬಳಸುವುದು ಸಂಪ್ರದಾಯ. ಆದರೆ ಅದರಿಂದ ಸಂಪೂರ್ಣ ಎಣ್ಣೆ ಹೋಗಲಿಲ್ಲ ಎನಿಸಿದರೆ ಕಡ್ಲೆಹಿಟ್ಟು ಅಥವಾ ನಿಮಗಿಷ್ಟವಾದ ಸಾಬೂನಿನಿಂದ ಸ್ನಾನ ಮಾಡಬಹುದು.

ಇದನ್ನೂ ಓದಿ...

Back to top button
>