ಗ್ರಾಮ ಪಂಚಾಯತ್ನಲ್ಲಿ ಗಮನ ಸೆಳೆಯುತ್ತಿದೆ ಬೀಕನ್ ಗ್ರಂಥಾಲಯ
Beacon library is attracting attention in Gram Panchayat
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಪುತ್ತೂರು(ದಕ್ಷಿಣ ಕನ್ನಡ) : ಆಧುನಿಕ ತಂತ್ರಜ್ಞಾನ, ಮೊಬೈಲ್ ಬಳಕೆ ಅತಿಯಾದ ಇಂದಿನ ಕಾಲಘಟ್ಟದಲ್ಲಿ ಓದುಗರನ್ನು ಗ್ರಂಥಾಲಯಗಳ ಕಡೆಗೆ ಸೆಳೆಯಬೇಕಾದರೆ ಅದರಲ್ಲೂ ಮುಖ್ಯವಾಗಿ ಓದುವ ಮಕ್ಕಳನ್ನು ಹಿಡಿದಿಟ್ಟುಕೊಳ್ಳಬೇಕಾದರೆ ಅಲ್ಲೇನಾದರೂ ಆಕರ್ಷಣೆಗಳಿರಲೇ ಬೇಕು.
ಈ ನಿಟ್ಟಿನಲ್ಲಿ ಹೊಸ ಚಿಂತನೆಯೊಂದಿಗೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿಯಲ್ಲಿ ವಿಶೇಷತೆಗಳಿಂದ ಕೂಡಿದ ಡಿಜಿಟಲ್ ಬೀಕನ್ ಗ್ರಂಥಾಲಯಲವೊಂದು ನಿರ್ಮಾಣಗೊಂಡಿದ್ದು, ಓದುಗರ ಗಮನ ಸೆಳೆಯುತ್ತಿದೆ.
ಬಹಳಷ್ಟು ಅಚ್ಚುಕಟ್ಟಿನ ವ್ಯವಸ್ಥೆಗಳೊಂದಿಗೆ ಆಕರ್ಷಣೀಯ ರೀತಿಯಲ್ಲಿ ನಿರ್ಮಾಣಗೊಂಡಿರುವ ಪುತ್ತೂರಿನ ಆರ್ಯಾಪು ಗ್ರಾಮ ಪಂಚಾಯಿತಿಯ ನೂತನ ಗ್ರಂಥಾಲಯ ಡಿಜಿಟಲ್ ಇನ್ಫಾರ್ಮೇಶನ್ ಡಿಸ್ಪ್ಲೇ ಹೊಂದಿರುವ ಜಿಲ್ಲೆಯಲ್ಲೇ ಪ್ರಪ್ರಥಮವಾದ ಗ್ರಂಥಾಲಯವಾಗಿ ಗುರುತಿಸಿಕೊಂಡಿದೆ. ಹೌದು, ಅಂಗವಿಕಲತೆ ಹೊಂದಿರುವವರಿಗೆ ವಿಶೇಷವಾಗಿ ಅಂಧರಿಗೆ ಗ್ರಂಥಾಲಯದಲ್ಲಿ ಸ್ವಚ್ಛಂದವಾಗಿ ಓದುವ ಅವಕಾಶ ಕಲ್ಪಿಸಿರುವ ತಾಲೂಕಿನ ಮೊದಲ ಬೀಕನ್ ಗ್ರಂಥಾಲಯವೂ ಇದಾಗಿದೆ.
ಆರ್ಯಾಪು ಗ್ರಾಮ ಪಂಚಾಯಿತಿಯ ಹಳೆ ಸಭಾಂಗಣ ಕಟ್ಟಡದಲ್ಲಿ 2021-22ನೇ ಸಾಲಿನ ಅಮೃತ ಗ್ರಾಮ ಪಂಚಾಯಿತಿ ಯೋಜನೆಯ 4.50 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು ಸುಸಜ್ಜಿತವಾದ ಡಿಜಿಟಲ್ ಬೀಕನ್ ಗ್ರಂಥಾಲಯ ನಿರ್ಮಿಸಲಾಗಿದೆ. ಗ್ರಂಥಾಲಯಕ್ಕೆ ಬರುವವರನ್ನು ಓದುವುದಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. 1.20 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್ ಇನ್ಫಾರ್ಮೇಶನ್ ಡಿಸ್ಪ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಮಿ ಅಶ್ರಫ್ ಕಮ್ಮಾಡಿ ಅವರು ಕೊಡುಗೆಯಾಗಿ ಈ ವ್ಯವಸ್ಥೆಯನ್ನು ನೀಡಿ ಪಂಚಾಯಿತಿಯ ಹೊಸ ಚಿಂತನೆಗೆ ಸಾಥ್ ನೀಡಿದ್ದಾರೆ. ಶಿಕ್ಷಣ ಪೌಂಡೇಶನ್ ಸಂಸ್ಥೆಯವರು ಕೂಡ ಮಾನಿಟರ್, ಕ್ರೋನ್‌ಬುಕ್, ಎರಡು ಮೊಬೈಲ್ ಸೆಟ್‌ಗಳನ್ನು ಕೊಡುಗೆಯಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.
ಇಲ್ಲಿದೆ ಹಲವು ವಿಶಿಷ್ಟ ವ್ಯವಸ್ಥೆ : ಗ್ರಂಥಾಲಯದಲ್ಲಿ 9 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಗ್ರಂಥಾಲಯದ ಒಳಾಂಗಣದಲ್ಲಿ ವಿಶಿಷ್ಟ ಶೈಲಿಯ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಆಕರ್ಷಿಸುವ ಹಾಗೂ ಓದುವ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಮೇಜು-ಕುರ್ಚಿಗಳ ಜತೆಗೆ ಬೀನ್ ಬ್ಯಾಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ಓದಿಗೆ ಅನುಕೂಲತೆ ಕಲ್ಪಿಸುವ ದೃಷ್ಟಿಯಿಂದ ಹಳೆಯ ಮನೆಗಳಲ್ಲಿ ಇರುವ ಜಗಲಿ ರೂಪದ ಓದುವ ವ್ಯವಸ್ಥೆ, ವಿಕಲಚೇತನರು ಗ್ರಂಥಾಲಯ ಪ್ರವೇಶಿಸಿ ನೇರವಾಗಿ ಸಾಗಲು ಅನುಕೂಲವಾಗುವಂತೆ ವೀಲ್ಹ್ ಚೇರ್ನೊಂದಿಗೆ ಬೀಕನ್ ರ‍್ಯಾಂಪ್ ವ್ಯವಸ್ಥೆ, ಹೆಡ್ಫೋನ್ ವ್ಯವಸ್ಥೆ, ಕಿವಿಕೇಳದವರಿಗೆ ಶ್ರವಣ ಉಪಕರಣ, ಕಣ್ಣು ಕಾಣದವರಿಗೆ ಬ್ರೈಲ್ ಲಿಪಿ ವ್ಯವಸ್ಥೆ, ಹೆಚ್ಚು ಮಂದಿ ಓದುಗರನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಎರಡು ಕಂಪ್ಯೂಟರ್, ಒಂದು ಲ್ಯಾಪ್‌ಟಾಪ್ ಮತ್ತು ಎರಡು ಮೊಬೈಲ್ ಫೋನ್ ವ್ಯವಸ್ಥೆಗಳನ್ನು ಕಲ್ಪಿಸಿ, ಡಿಜಿಟಲ್ ಗ್ರಂಥಾಲಯಕ್ಕೆ ಆಕರ್ಷಣೀಯ ಸ್ಪರ್ಶ ನೀಡಲಾಗಿದೆ.
ಮಕ್ಕಳು ಓದಿನಿಂದ ವಿಮುಖವಾಗಬಾರದು ಎಂಬ ಉದ್ದೇಶದಿಂದ ಓದು ಮತ್ತು ಆಟ ಜತೆಯಾಗಿ ಸಾಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮಕ್ಕಳಿಗೆ ಆಡವಾಡಲು ಕ್ಯಾರಮ್, ಚೆಸ್ ವ್ಯವಸ್ಥೆಯಿದೆ. ಈ ಭಾಗದ ನಾಡಿನ ಕಲೆಯಾದ ಚೆನ್ನೆಮಣೆ ಆಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚೆನ್ನೆಮಣೆಯ ವ್ಯವಸ್ಥೆ ಕೂಡ ಮಾಡಲಾಗಿದೆ.
ಯೋಜನೆ, ಸವಲತ್ತುಗಳ ಬಗ್ಗೆ ಮಾಹಿತಿ : ಗ್ರಂಥಾಲಯದ ಡಿಜಿಟಲ್ ಇನ್ಫಾರ್ಮೇಶನ್ ಪರದೆಯಲ್ಲಿ ಸರ್ಕಾರಿ ಯೋಜನೆಗಳು, ಸೌಲಭ್ಯಗಳ ಮಾಹಿತಿ ಜತೆಗೆ ಆರ್ಯಾಪು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ತೆರಿಗೆ ಸೇರಿದಂತೆ ವಿವಿಧ ಅರ್ಜಿಗಳ ಮಾಹಿತಿಯನ್ನು ಒನ್ ಟಚ್ ಸಿಸ್ಟಂನಡಿ ಸುಲಭವಾಗಿ ಪಡೆದುಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ. ಡಿಜಿಟಲ್ ಇನ್ಫಾರ್ಮೇಶನ್ ಪರದೆಯಲ್ಲಿ ಸರ್ಕಾರದ ಮತ್ತು ಗ್ರಾಮ ಪಂಚಾಯಿತಿಯ ಯೋಜನೆಗಳ ವಿಡಿಯೋ ಸಹಿತ ಚಿತ್ರ ಪ್ರಸಾರವಾಗುತ್ತಿರುತ್ತದೆ. ಗ್ರಾಮ ಪಂಚಾಯಿತಿ ಸೇವೆಗಳಿಗೆ ಸಂಬಂಧಿಸಿದ ಮೊಬೈಲ್ ನಂಬರ್ ಹಾಕಿದ ಕೂಡಲೇ ಒಟಿಪಿ ಬರುತ್ತದೆ. ಒಟಿಪಿ ಹಾಕಿ ಮನೆ ತೆರಿಗೆ ಪರಿಶೀಲನೆ ಮಾಡಿಕೊಳ್ಳುವ ಅವಕಾಶವೂ ಇಲ್ಲಿನ ವ್ಯವಸ್ಥೆಯಲ್ಲಿದೆ.
ಶಾಲೆಯ ಪುಸ್ತಕಗಳಲ್ಲಿ ಇರುವ ವಿಷಯಗಳನ್ನೇ ಡಿಜಿಟಲ್ ಇನ್ಫಾರ್ಮೇಶನ್ ಸಿಸ್ಟಮ್‌ನಡಿ ತಿಳಿದುಕೊಳ್ಳುವ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ. ಎಲ್ಲಾ ತರಗತಿಗೆ ಸಂಬಂಧಪಟ್ಟ ಪಠ್ಯಗಳನ್ನು ಈ ಸಿಸ್ಟಮ್‌ನಲ್ಲಿ ಫೀಡ್ ಮಾಡಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವುದನ್ನು ಬಿಡುವಿನ ಸಮಯದಲ್ಲಿ ಗ್ರಂಥಾಲಯದಲ್ಲೇ ಕಲಿಯಲು ಅವಕಾಶ ಕಲ್ಪಿಸಲಾಗಿದೆ.