ಬಿಲ್ಕಿಸ್ ಬಾನೋ ಪ್ರಕರಣ: ಎಲ್ಲಾ 11 ಅಪರಾಧಿಗಳು ಗೋಧ್ರಾ ಉಪ ಜೈಲಿನಲ್ಲಿ ಶರಣಾಗತಿ
Bilkis Bano case: All 11 convicts surrender in Godhra Sub Jail
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಗೋಧ್ರಾ: ಸುಪ್ರೀಂ ಕೋರ್ಟ್ ವಿಧಿಸಿರುವ ಗಡುವಿಗೆ ಅನುಗುಣವಾಗಿ ಬಿಲ್ಕಿಸ್ ಬಾನೋ ಪ್ರಕರಣದ ಎಲ್ಲ 11 ಅಪರಾಧಿಗಳು ಭಾನುವಾರ ತಡರಾತ್ರಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಜೈಲಿನಲ್ಲಿ ಶರಣಾಗಿದ್ದಾರೆ.
“ಎಲ್ಲಾ 11 ಅಪರಾಧಿಗಳು ಭಾನುವಾರ ತಡರಾತ್ರಿ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಶರಣಾಗತಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಜನವರಿ 21 ರ ಮಧ್ಯರಾತ್ರಿ ಗಡುವು ಮೀರುವ ಮುನ್ನ ಎಲ್ಲಾ ಅಪರಾಧಿಗಳು ಜೈಲು ತಲುಪಿದ್ದಾರೆ” ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಎನ್‌ಎಲ್ ದೇಸಾಯಿ ಅವರು ತಿಳಿಸಿದ್ದಾರೆ.
2002ರ ಗುಜರಾತ್‌ನ ಗೋದ್ರಾ ಗಲಭೆ ಸಂದರ್ಭದಲ್ಲಿ, ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಈ ಕ್ರೂರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿದ್ದ 11 ಮಂದಿಯ ಶಿಕ್ಷೆಯನ್ನು ಜೀವಾವಧಿಗೆ ಇಳಿಕೆ ಮಾಡಲಾಗಿತ್ತು. ಆದರೆ ಶಿಕ್ಷೆ ಅವಧಿ ಮುಗಿಯುವುದಕ್ಕೂ ಮುನ್ನವೇ ಗುಜರಾತ್ ಸರ್ಕಾರ, ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅವರನ್ನು ‘ಸನ್ನಡತೆ’ ಆಧಾರದಲ್ಲಿ ಬಿಡುಗಡೆ ಮಾಡಿತ್ತು. ಈ ನಿರ್ಧಾರ ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು. ಇದರ ವಿರುದ್ಧ ಬಿಲ್ಕಿಸ್ ಬಾನು ಮತ್ತೊಂದು ಸುತ್ತಿನ ಕಾನೂನು ಹೋರಾಟ ನಡೆಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರ, 11 ಅಪರಾಧಿಗಳಿಗೆ ನೀಡಿದ್ದ ವಿನಾಯತಿಯನ್ನು ರದ್ದುಗೊಳಿಸಿತ್ತು ಮತ್ತು ಜನವರಿ 21 ರೊಳಗೆ ಶರಣಾಗುವಂತೆ ಅಪರಾಧಿಗಳಿಗೆ ಆದೇಶಿಸಿತ್ತು.