ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಮೈಸೂರು, ಫೆಬ್ರವರಿ 04: ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರ ದಟ್ಟಣೆ ತಪ್ಪಿಸಲು ವಿಶೇಷ ವಂದೇ ಭಾರತ್ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸುತ್ತಿದೆ.
ಮೈಸೂರು-ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ರೈಲು ಸಂಚಾರವನ್ನು ವಿಸ್ತರಣೆ ಮಾಡಿ ದಕ್ಷಿಣ ರೈಲ್ವೆ ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರಕಾರ ರೈಲು ಮಾರ್ಚ್ 27, 2024ರ ತನಕ ಸಂಚಾರ ನಡೆಸಲಿದೆ.
ವಂದೇ ಭಾರತ್ ವಿಶೇಷ ರೈಲು ಸೇವೆಯನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಟಿಕೆಟ್ ದರ, ಬೋಗಿಗಳ ಸಂಯೋಜನೆ, ನಿಲುಗಡೆಗಳು, ವೇಳಾಪಟ್ಟಿ ಮತ್ತು ವೇಳಾಪಟ್ಟಿಯೊಂದಿಗೆ ಮಾರ್ಚ್ 27ರ ವರೆಗೆ ವಿಸ್ತರಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರೈಲು ಸಂಚಾರದ ಮಾಹಿತಿ * ರೈಲು ಸಂಖ್ಯೆ 06037 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಮೈಸೂರು ನಡುವಿನ ವಂದೇ ಭಾರತ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 7 ರಿಂದ ಮಾರ್ಚ್ 27, 2024ರ ತನಕ ಪ್ರತಿ ಬುಧವಾರ (8 ಟ್ರಿಪ್) ಸಂಚರಿಸಲಿದೆ. ಈ ಮೊದಲು ಜನವರಿ 31, 2024ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. * ರೈಲು ಸಂಖ್ಯೆ 06038 ಮೈಸೂರು-ಡಾಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 7ರಿಂದ ಮಾರ್ಚ್ 27, 2024ರ ತನಕ ಪ್ರತಿ ಬುಧವಾರ (8 ಟ್ರಿಪ್) ಸಂಚರಿಸಲಿದೆ. ಈ ಮೊದಲು ಜನವರಿ 31, 2024ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.
ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಪ್ರತಿದಿನ ಸಹ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತದೆ. ಈ ರೈಲಿಗೆ ನವೆಂಬರ್ 11, 2022ರಂದು ಪ್ರಧಾನಿ ನರೇಂದ್ರ ಮೋದಿ ಕೆ. ಎಸ್. ಆರ್. ಬೆಂಗಳೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದ್ದರು. ಇದರ ಹೊರತಾಗಿಯೂ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಪ್ರತಿ ಬುಧವಾರ ವಿಶೇಷ ವಂದೇ ಭಾರತ್ ರೈಲು ಓಡಿಸಲಾಗುತ್ತಿದೆ.