ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಧನ್ಬಾದ್: ತಮ್ಮ ಪಕ್ಷ ‘ಜಲ್-ಜಂಗಲ್-ಜಮಿನ್’ (ನೀರು, ಅರಣ್ಯ ಮತ್ತು ಭೂಮಿ) ಮೇಲಿನ ಆದಿವಾಸಿಗಳ ಹಕ್ಕುಗಳ ಪರವಾಗಿ ನಿಲ್ಲುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ತಮ್ಮ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಬುಡಕಟ್ಟು ಜನರ ಜಲ, ಅರಣ್ಯ ಮತ್ತು ಭೂಮಿಯ ಪರವಾಗಿ ನಿಂತಿದೆ ಮತ್ತು ಯುವಜನರ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಶ್ರಮಿಸುತ್ತಿದೆ ಎಂದರು.
ಸಾರ್ವಜನಿಕ ವಲಯದ ಘಟಕಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ತಡೆಯುವುದು ಮತ್ತು ದೇಶದ ನಿರುದ್ಯೋಗಿ ಯುವಕರು ಹಾಗೂ ಬುಡಕಟ್ಟು ಜನಾಂಗದವರಿಗೆ ನ್ಯಾಯ ಒದಗಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಳಿದರು.
ಆರ್ಥಿಕ ಅಸಮತೋಲನ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ನಿರುದ್ಯೋಗವು ದೇಶದ ಯುವಕರ ಭವಿಷ್ಯವನ್ನು ಹಾಳುಮಾಡಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿದರು.
ಶನಿವಾರ ರಾತ್ರಿ ಜಿಲ್ಲೆಯ ಟುಂಡಿ ಬ್ಲಾಕ್ ನಲ್ಲಿ ತಂಗಿದ್ದ ಯಾತ್ರೆಯು ರವಿವಾರ ಬೆಳಿಗ್ಗೆ ಧನಬಾದ್ ನಗರದ ಗೋವಿಂದಪುರದಿಂದ ಆರಂಭಗೊಂಡಿತು. ರವಿವಾರ ಜಾರ್ಖಂಡ್ ನಲ್ಲಿ ಯಾತ್ರೆಯ ಮೂರನೇ ದಿನವಾಗಿತ್ತು.
ಯಾತ್ರೆಯು ಜಾರ್ಖಂಡ್ ನಲ್ಲಿ ಎರಡು ಹಂತಗಳಲ್ಲಿ ಎಂಟು ದಿನಗಳ ಅವಧಿಯಲ್ಲಿ ರಾಜ್ಯದ 13 ಜಿಲ್ಲೆಗಳ ಮೂಲಕ 804 ಕಿ.ಮೀ.ದೂರವನ್ನು ಕ್ರಮಿಸಲಿದೆ.