ರಾಜಕೀಯರಾಜ್ಯ

ಕರ್ನಾಟಕಕ್ಕೆ ಬರಬೇಕಾಗಿದ್ದ 62,098 ಕೋಟಿ ರೂ. ಕಳೆದುಕೊಂಡಿದ್ದೇವೆ, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ: ಸಿಎಂ

62,098 crore which was supposed to come to Karnataka. We have lost, there is injustice from center to state: CM

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ನವದೆಹಲಿ: 14ನೇ ಹಣಕಾಸು ಆಯೋಗದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ 4.71 ಶೇಕಡಾ ಬಂದಿತ್ತು. 15ನೇ ಹಣಕಾಸು ಆಯೋಗದಲ್ಲಿ ಅದು ಶೇಕಡಾ 3.64 ಕ್ಕೆ ಇಳಿಯಿತು. ಇದರಿಂದ ಕರ್ನಾಟಕಕ್ಕೆ ಶೇಕಡಾ 40ರಿಂದ 45ರಷ್ಟು ತೆರಿಗೆ ಬರುವುದು ಕಳೆದುಕೊಂಡಿದ್ದೇವೆ. 14ನೇ ಹಣಕಾಸು ಆಯೋಗದ ಮಾನದಂಡವನ್ನೇ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುಸರಿಸಿದ್ದರೆ 62 ಸಾವಿರದ 098 ಕೋಟಿ ರೂಪಾಯಿ ಹೆಚ್ಚಾಗಿ ಬರುತ್ತಿತ್ತು. ಅದನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅಂಕಿಅಂಶ ಸಮೇತ ವಿವರಿಸಿದರು.

ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ನಾಯಕರು ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಉದ್ಘೋಷದೊಂದಿಗೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಇಂದು ಇನ್ನು ಕೆಲವೇ ನಿಮಿಷಗಳಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಅದಕ್ಕೆ ಮುನ್ನ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಪುನರುಚ್ಛರಿಸಿದರು. ಅವರ ಮಾತಿಗೆ ಡಿಸಿಎಂ ಡಿ ಕೆ ಶಿವಕುಮಾರ್ ದನಿಗೂಡಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬರ ಪರಿಬಾರ ಬಂದಿಲ್ಲ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿ ಈ ವರ್ಷ ಆಗಿರುವ ಬರಗಾಲ ಬಗ್ಗೆ ಮನವಿ ಸಲ್ಲಿಸಿದ್ದೆವು. ಕೇಂದ್ರಕ್ಕೆ ಮನವಿ ಸಲ್ಲಿಸಿ, ಬರ ಅಧ್ಯಯನ ತಂಡ ಬಂದು ವರದಿ ನೀಡಿದ್ದರು. ನಂತರ ಹಲವು ಸಚಿವರು ಕೇಂದ್ರದ ಸಚಿವರುಗಳು, ಅಧಿಕಾರಿಗಳನ್ನು ಭೇಟಿ ಮಾಡಿದರು. ನಂತರ ನಾನೇ ಸ್ವತಃ ಪ್ರಧಾನ ಮಂತ್ರಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. 5ತಿಂಗಳು ಕಳೆದರೂ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ರಾಜಕೀಯ ಚಳವಳಿ ಅಲ್ಲ, ಅನ್ಯಾಯ ವಿರುದ್ಧ ಹೋರಾಟ: ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಅಷ್ಟೆ. ಇದು ರಾಜಕೀಯ ಚಳವಳಿ ಅಲ್ಲ. ನಮ್ಮ ಎಲ್ಲ ಶಾಸಕರು, ಸಚಿವರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದು ರಾಜಕೀಯ ಹೋರಾಟ ಅಲ್ಲ, ಇದು ಕನ್ನಡಿಗರ ಹಿತ ಕಾಪಾಡುವ ಚಳವಳಿ ಎಂದರು.

ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಎಸಗಿದೆ. ಈ ವಿಚಾರದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಆಗಿದೆ. ರಾಜ್ಯಕ್ಕಾದ ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿದ್ದೇವೆ. ರಾಜ್ಯದ ಸಂಸದರಿಗೂ ಪತ್ರ ಬರೆದು ಮನವಿ ಮಾಡಿದೆ. ಇದು ಐತಿಹಾಸಿಕವಾದ ಚಳವಳಿ. ಸುಮಾರು ಶೇ 40-45 ರಷ್ಟು ತೆರಿಗೆ ಪಾಲು ನಮಗೆ ಬರಬೇಕು. ನಾವು 4 ಲಕ್ಷ 30 ಸಾವಿರ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ. 100 ರೂ. ತೆರಿಗೆ ಕಟ್ಟಿದ್ದರೆ ಕೇವಲ 12 ರೂಪಾಯಿ ಅಷ್ಟೇ ನಮಗೆ ಬರುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಕಳೆದ ವರ್ಷ ಹಿಂದೆಂದೂ ಕಂಡಿರದ ಭೀಕರ ಬರಗಾಲ ಬಂದು ನಾವು 17 ಸಾವಿರದ 900 ಕೋಟಿ ರೂಪಾಯಿ ಪರಿಹಾರ ಕೇಳಿದ್ದೆವು. ನರೇಗಾದ ಅಡಿಯಲ್ಲಿ ಕೆಲಸದ ದಿನಗಳನ್ನು 150 ದಿನ ಮಾಡಿ ಎಂದು ಕೇಳಿದ್ದೆವು. ಅದನ್ನೂ ಕೂಡ ಮಾಡಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

 

ಇದನ್ನೂ ಓದಿ...

Back to top button
>