ರಾಜಕೀಯರಾಜ್ಯ

ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್ ಸೋರೆನ್ ತನಿಖೆಗೆ ಸಹಕರಿಸುತ್ತಿಲ್ಲ: ಇಡಿ

Former Jharkhand CM Hemant Soren not cooperating with probe: ED

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ರಾಂಚಿ: ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತನಿಖೆಗೆ “ತೀವ್ರ ಅಸಹಕಾರ” ತೋರಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ಆರೋಪಿಸಿದೆ.

ಸೋರೆನ್ ಅವರು ಸ್ವಾಧೀನಪಡಿಸಿಕೊಂಡಿದ್ದಾರೆ ಎನ್ನಲಾದ ಜಮೀನುಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು “ಇಷ್ಟಪಡುತ್ತಿಲ್ಲ” ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿದೆ.

ಕೇಂದ್ರ ತನಿಖಾ ಸಂಸ್ಥೆ 48 ವರ್ಷದ ಜೆಎಂಎಂ ನಾಯಕನನ್ನು ಇಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಜೀವ್ ರಂಜನ್ ಅವರ ಮುಂದೆ ಹಾಜರುಪಡಿಸಿತು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ಇನ್ನೂ ಮೂರು ದಿನ ಇಡಿ ವಶಕ್ಕೆ ನೀಡಿದೆ.

ಸೋರೆನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜನವರಿ 31 ರಂದು ಜಾರಿ ನಿರ್ದೇಶನಾಲಯ(ಇಡಿ) ಅವರನ್ನು ಬಂಧಿಸಿತ್ತು.

ಸೋರೆನ್ ಮತ್ತು ಅವರ ಆಪ್ತ ಸಹಚರ ಬಿನೋದ್ ಸಿಂಗ್ ನಡುವಿನ ವಾಟ್ಸಾಪ್ ಚಾಟ್ ರಾಂಚಿಯ ಬರಗೈ ಪ್ರದೇಶದಲ್ಲಿ 8.5 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಬ್ಯಾಂಕ್ವೆಟ್ ಹಾಲ್‌ನ ವಿವರಗಳನ್ನು ತೋರಿಸಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

“ಆರೋಪಿ ಹೇಮಂತ್ ಸೋರೆನ್ ತೀವ್ರ ಅಸಹಕಾರವನ್ನು ತೋರಿಸುತ್ತಿದ್ದಾರೆ ಮತ್ತು ಅವರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ ಇತರ ವ್ಯಕ್ತಿಗಳು ಸಂಪಾದಿಸಿದ ಆಸ್ತಿಗಳ ಬಗ್ಗೆ ನಿಜವಾದ ಸಂಗತಿಗಳನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದ್ದಾರೆ” ಎಂದು ಇಡಿ ಹೇಳಿದೆ.

“ಆರೋಪಿ(ಸೋರೆನ್) ಆಸ್ತಿಗಳ ಬಗ್ಗೆ ಮಾಹಿತಿಯನ್ನು ಮರೆಮಾಚುವ ಉದ್ದೇಶದಿಂದ ವಾಟ್ಸಾಪ್ ಚಾಟ್‌ಗಳಿಗೆ ಸಹಿ ಮಾಡಲು ಮತ್ತು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ” ಎಂದು ಇಡಿ ಆರೋಪಿಸಿದೆ.

ಇದನ್ನೂ ಓದಿ...

Back to top button
>