‘ಕರಾವಳಿ’ಯಲ್ಲಿ ಪ್ರಜ್ವಲ್’ಗೆ ಜೋಡಿಯಾದ ನಟಿ ಸಂಪದ
Actress Sampada paired with Prajwal in 'Karavali'
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಪ್ರಜ್ವಲ್ ದೇವರಾಜ್ ಮತ್ತು ಗುರುದತ್ತ ಗಾಣಿಗ ಅವರ ಬಹು ನಿರೀಕ್ಷಿತ ಕರಾವಳಿ ಚಿತ್ರದ ಮೂಲಕ ನಟಿ ಅಮೂಲ್ಯ ಅವರು ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದಾಗಿ ಚಿತ್ರತಂಡ ಇದೀಗ ನಟಿ ಸಂಪದ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ.
ಕಿರುತೆರೆಯಲ್ಲಿ ಧಾರಾವಾಹಿ (ಮಿಥುನ ರಾಶಿ)ಯಲ್ಲಿ ನಟಿಸಿ, ಹೆಸರು ಗಳಿಸಿದ್ದ ನಟಿ ಸಂಪದ ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಪ್ರಜ್ವಲ್ ಅಭಿನಯದ ಕರಾವಳಿ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕಿ ನಟಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕರಾವಳಿ ಪ್ರಜ್ವಲ್ ಅವರ 40ನೇ ಚಿತ್ರವಾಗಿದ್ದು, ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ ಒಳಗೊಂಡಿದೆ. ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಸಿದ್ಧಗೊಂಡಿದ್ದು, ಚಿತ್ರದ ಚಿತ್ರೀಕರಣ ಮಂಗಳೂರು ಸುತ್ತಮುತ್ತರು ನಡೆಯಲಿದೆ. ಚಿತ್ರದ ಮುಹೂರ್ತ ಫೆ.19ರಂದು ನಡೆಯಲಿದೆ.
ಅಂಬಿ ನಿಂಗ್ ವಯಸ್ಸಾಯ್ತೋ ನಂತರ ನಿರ್ದೇಶಕ ಗುರುದತ್ತ ಗಾಣಿಗ ಎರಡನೇ ಸಿನಿಮಾ ಕರಾವಳಿ. ವಿಕೆ ಫಿಲ್ಮ್ಸ್ ಸಹಯೋಗದೊಂದಿಗೆ ಗುರುದತ್ತ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಹಣ ಮತ್ತು ಸಚಿನ್ ಬಸ್ರೂರ್ ಸಂಗೀತವಿದೆ.