ರಾಜಕೀಯರಾಜ್ಯ

ಚುನಾವಣೆ; ಕಾಯಿನ್‌ಗಳಲ್ಲೇ 25 ಸಾವಿರ ರೂ. ಠೇವಣಿ ಇಟ್ಟ ಅಭ್ಯರ್ಥಿ, ಎಣಿಸೋದೇ ತಲೆನೋವು!

election; 25 thousand in coins. A candidate who has deposited a headache without counting!

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಭೋಪಾಲ್:‌ ಪ್ರತಿ ಬಾರಿ ಚುನಾವಣೆ ನಡೆದಾಗಲೂ, ಕೆಲ ಅಚ್ಚರಿಯ ಅಭ್ಯರ್ಥಿಗಳು ಸುದ್ದಿಯಾಗುತ್ತಾರೆ. ಸೋಲುತ್ತೇನೆ ಎಂಬುದು ಗೊತ್ತಿದ್ದರೂ ಪ್ರತಿ ಚುನಾವಣೆಯಲ್ಲಿ ಸ್ಪರ್ಧಿಸುವವರು, ಜನ ಬೆಂಬಲ ಇಲ್ಲದಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವವರು ಕಾಣಸಿಗುತ್ತಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ (Lok Sabha Election) ಇಂತಹ ಅಭ್ಯರ್ಥಿಗಳು ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ (Madhya Pradesh) ಸ್ವತಂತ್ರ ಅಭರ್ಥಿಯೊಬ್ಬರು ನಾಮಪತ್ರ ಸಲ್ಲಿಸಿದ ಬಳಿಕ 25 ಸಾವಿರ ರೂ. ಮೌಲ್ಯದ ಕಾಯಿನ್‌ಗಳನ್ನೇ ಭದ್ರತಾ ಠೇವಣಿಯನ್ನಾಗಿ (Security Deposit) ಇರಿಸಿದ್ದಾರೆ. ಈ ಸುದ್ದಿ ಈಗ ವೈರಲ್‌ ಆಗಿದೆ.

ಹೌದು, ಮಧ್ಯಪ್ರದೇಶದ ಜಬಲ್ಪುರ ಲೋಕಸಭಾ ಕ್ಷೇತ್ರದ ವಿನಯ್‌ ಚಕ್ರವರ್ತಿ ಅವರು ಕಾಯಿನ್‌ಗಳ ರಾಶಿಯನ್ನೇ ಭದ್ರತಾ ಠೇವಣಿಯನ್ನಾಗಿ ಇರಿಸಿ ಸುದ್ದಿಯಾಗಿದ್ದಾರೆ. ಇವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದು, ಇದಾದ ಬಳಿಕ 25 ಸಾವಿರ ರೂ. ಭದ್ರತಾ ಠೇವಣಿ ಇರಿಸಿದ್ದಾರೆ. ಆದರೆ, ಅಷ್ಟೂ ಮೊತ್ತವನ್ನು 10 ರೂ., 5 ರೂ. ಹಾಗೂ 2 ರೂ. ಕಾಯಿನ್‌ಗಳಲ್ಲಿಯೇ ಠೇವಣಿ ಇರಿಸಿದ್ದಾರೆ. ಈಗ ಅಧಿಕಾರಿಗಳಿಗೆ ಇವರು ಕೊಟ್ಟ ಕಾಯಿನ್‌ಗಳನ್ನು ಲೆಕ್ಕ ಹಾಕುವುದೇ ಕೆಲಸವಾಗಿದೆ ಎಂದು ತಿಳಿದುಬಂದಿದೆ.

ಹೀಗೆ ಮಾಡಿದ್ದೇಕೆ?

ನಾಮಪತ್ರ ಸಲ್ಲಿಕೆ ಬಳಿಕ ವಿನಯ್‌ ಚಕ್ರವರ್ತಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕಾಯಿನ್‌ಗಳನ್ನೇ ನೀಡಿರುವ ಕುರಿತು ವಿವರಿಸಿದ್ದಾರೆ. “ನಾನು ಜಬಲ್ಪುರ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾಗ, ಅಲ್ಲಿ ಆನ್‌ಲೈನ್‌ ಮೂಲಕ ಪೇಮೆಂಟ್‌ ಮಾಡುವ ವ್ಯವಸ್ಥೆ ಇರಲಿಲ್ಲ. ಹಾಗಾಗಿ, ಕಾಯಿನ್‌ಗಳನ್ನೇ ಭದ್ರತಾ ಠೇವಣಿಯಾಗಿ ಇರಿಸಿದೆ” ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಯೂ ಇವರು ಕಾಯಿನ್‌ಗಳ ರಾಶಿಯನ್ನು ನೀಡಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ನಾಲ್ಕು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನವು ಏಪ್ರಿಲ್‌ 19ರಂದು ನಡೆಯಲಿದ್ದು, ಬುಧವಾರದಿಂದ (ಮಾರ್ಚ್‌ 20) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮಾರ್ಚ್‌ 27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ...

Back to top button
>