ರಾಜಕೀಯರಾಜ್ಯ

ನಮ್ಗೆ ಗಂಡಸ್ರ ಮೇಲೆ ನಂಬಿಕೆ ಇಲ್ಲ, ಹಾಗಾಗಿ 2000 ರೂ. ಹೆಣ್ಮಕ್ಕಳಿಗೆ ಕೊಡ್ತಿದ್ದೇವೆ ಎಂದ ಡಿಕೆಶಿ

We don't trust men, so 2000 Rs. Dkeshi said that we have given it to girls

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ನಮಗೆ ಮಹಿಳೆಯರ ಮೇಲೆ ತುಂಬಾ ನಂಬಿಕೆ (We Believe Women) ಇದೆ. ಅದೇ ಕಾರಣಕ್ಕೆ ಮಹಿಳೆಯರ ಖಾತೆಗೆ ಎರಡು ಸಾವಿರ ಹಣವನ್ನು ನೇರವಾಗಿ ಹಾಕುತ್ತಿದ್ದೇವೆ (Grihalakshmi Scheme). ಗಂಡಸರಿಗೆ ಹಣ ಹಾಕಿದ್ರೆ ನೀವು ವೈನ್ ಶಾಪ್‌ಗೆ ಹೋಗ್ತೀರಿ. ಅದಕ್ಕೇ ಮಹಿಳೆಯರಿಗೆ ಕೊಡೋದು: ಹೀಗೆಂದು ಮಹಿಳೆಯರಿಗೆ ಕೊಟ್ಟಿರುವ ಗ್ಯಾರಂಟಿಗೆ (Congress Guarantee) ಕಾರಣ ಕೊಟ್ಟಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್‌

ಶನಿವಾರ ಬೆಂಗಳೂರಿನಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಯಭಾರಿಗಳು ನೀವು ಎಂದು ಹೇಳಿದರು.

ʻʻನಾವು ಜನರಿಗೆ ‌ ಗ್ಯಾರಂಟಿ ಯೋಜನೆಗಳ ಮೂಲಕ ಶಕ್ತಿ ಕೊಟ್ಟಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಈಗ ನೀವೆಲ್ಲಾ ಏನು ಮಾಡಬೇಕು ಹೇಳಿʼʼ ಎಂದು ಹೇಳುತ್ತಾ ಡಿ.ಕೆ.‌ ಶಿವಕುಮಾರ್‌ ಎಲ್ಲರ ಗಮನ ಸೆಳೆದರು. ಆಗ ಎಲ್ಲರೂ ಒಟ್ಟಾಗಿ ವೋಟ್‌ ಮಾಡಬೇಕು ಎಂದರು.

ಆಗ ಡಿ.ಕೆ.ಶಿವಕುಮಾರ್‌ ಸಿಟ್ಟಾಗಿ, ಓ ವೋಟ್‌ ಗೀಟ್‌ ಏನೂ ಅಲ್ಲ.. ನೀವು ಎಲ್ಲ ಕೈಯಿಂದ ವೋಟು ಹಾಕಿಸಬೇಕು ಎಂದರು. ʻʻಮೊದಲು ನೀವೆಲ್ಲಾ ತಂಡಗಳನ್ನಾಗಿ ಮಾಡಿಕೊಳ್ಳಬೇಕು. ಪ್ರತಿ ಮನೆ ಮನೆಗೆ ಹೋಗಬೇಕು. ಸ್ವಾಭಿಮಾನ ಬಿಟ್ಟು ಜನರ ಮನೆ ಬಳಿಗೆ ಹೋಗಬೇಕು. ನಾವು ಮೊದಲು ಕಾರ್ಯಕರ್ತರು. ನಮ್ಮ ಪಕ್ಷದ ಬಾವುಟವನ್ನು ನಾವಲ್ಲದೆ, ಬಿಜೆಪಿ, ಜೆಡಿಎಸ್ ನವರು ಹಾಕಲು ಸಾಧ್ಯವಾ? ಎಲ್ಲರೂ ಎರಡೆರಡು ಬೂತ್ ಜವಾಬ್ದಾರಿ ಹೊತ್ತು‌ ಕೆಲಸ ಮಾಡಿ. ಪಂಚ ಗ್ಯಾರಂಟಿಯೊಂದಿಗೆ ಮನಗಳಿಗೆ ತೆರಳಿ ಎಂದು ಹೇಳಿದರು.

ಇಲ್ಲಿ ಯಾವುದೂ ಇಲ್ಲ, ಜನ ಪರ ಸೇವೆ ಮಾತ್ರ ನಿಲ್ಲುತ್ತದೆ

ʻʻಇಲ್ಲಿ ಯಾವುದೂ ದೇವಸ್ಥಾನ, ಮೋದಿ, ರಾಮಮಂದಿರ ಇಲ್ಲ. ಕರ್ನಾಟಕದಲ್ಲಿ ಮೋದಿ ಹವಾ ಇಲ್ಲʼʼ ಎಂದು ಹೇಳಿದ ಅವರು, ಹಿಂದೂ ಧಾರ್ಮಿಕ ದರ್ಮಾದಾಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಬಿಜೆಪಿ, ಜೆಡಿಎಸ್ ನವರು ವಿರೋಧಿಸಿದ್ದಾರೆ. ರಾಜ್ಯಪಾಲರು ಅದನ್ನ ವಾಪಸ್ ಕಳಿಸಿದ್ದಾರೆ. ಸಿ ದರ್ಜೆಯ ದೇವಾಲಯಗಳಿಗೆ ಸಹಾಯ ಧನ ನೀಡುವ ವಿಧೇಯಕವನ್ನು ವಿರೋಧಿಸಿದ್ದಾರೆ, ಜೂನ್‌ನಲ್ಲಿ ನಮ್ಮದೇ ಪಕ್ಷಕ್ಕೆ ಬಹುಮತ ಬರಲಿದೆ. ಆಗ ಇದನ್ನ ಅಂಗೀಕರಿಸುತ್ತೇವೆʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ʻʻಸಿದ್ದರಾಮಯ್ಯ ಹೆಸರಲ್ಲಿ ರಾಮ ಇಲ್ವಾ?, ನನ್ನ ಹೆಸರು ಶಿವ ಇಲ್ವಾ? ನಾವೇನು ಹಿಂದುಗಳು ಅಲ್ಲವಾ ? ಬಿಜೆಪಿಯವರು ಮಾತ್ರ ಹಿಂದೂಗಳಾ ? ಇಲ್ಲಿ ಯಾವುದೇ ಮೋದಿ ಅಲೆ ಇಲ್ಲಾ, ನಾವು 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆʼʼ ಎಂದು ಹೇಳಿದರು ಶಿವಕುಮಾರ್‌.

ಗ್ಯಾರಂಟಿ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಆಡಿದ ಮಾತಿನ ಪ್ರಮುಖ ಆಂಶಗಳು

ನಾನು ಹಾಗೂ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿ ಅಲ್ಲಿ ನಾವು ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಘೋಷಣೆ ಮಾಡಿದೆವು. ಈ ಯೋಜನೆಯಿಂದ 1.50 ಕೋಟಿ ಮನೆಗಳಿಗೆ ಪ್ರಯೋಜನವಾಗುತ್ತಿದೆ.

ಇನ್ನು ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುವ ಘೋಷಣೆ ಮಾಡಿದೆವು. ನಾವು ಅಕ್ಕಿ ಖರೀದಿ ಮಾಡಲು ಕೇಂದ್ರಕ್ಕೆ ಮನವಿ ಮಾಡಿದರೆ, ಕೇಂದ್ರ ಸರ್ಕಾರ ನಿರಾಕರಿಸಿತು. ಹೀಗಾಗಿ ನಮ್ಮ ಸರ್ಕಾರ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ.

ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಬೆಲೆ 70ರಿಂದ 110ಕ್ಕೆ ಏರಿತು. ಅಡುಗೆ ಅನಿಲ 410ರಿಂದ 1100 ರೂಪಾಯಿ ಆಯಿತು. ಅಡುಗೆ ಎಣ್ಣೆ 200ರ ಗಡಿ ದಾಟಿತು. ಹೀಗಾಗಿ ನಾವು ಬೆಲೆ ಏರಿಕೆ ಸಮಯದಲ್ಲಿ ಮಹಿಳೆಯರಿಗೆ ನೆರವಾಗಬೇಕು ಎಂದು ಚರ್ಚೆ ಮಾಡಿ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದೆವು. ಇಂದು 1.33 ಕೋಟಿ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ನೀಡಲಾಗುತ್ತಿದೆ.

ಈ ಯೋಜನೆ ಘೋಷಣೆ ವೇಳೆ ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ನಮ್ಮ ಗ್ಯಾರಂಟಿ ಚೆಕ್ ಗೆ ನಾನು ಹಾಗೂ ಸಿದ್ದರಾಮಯ್ಯ ಅವರು ಸಹಿ ಹಾಕಿದೆವು. ನಮ್ಮ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಮಂಗಳೂರಿನಲ್ಲಿ ರಾಹುಲ್ ಗಾಂಧಿ ಅವರು ಶಕ್ತಿ ಯೋಜನೆ ಘೋಷಣೆ ಮಾಡಿದರು. ಆಮೂಲಕ ರಾಜ್ಯದ ಎಲ್ಲೆಡೆ ಮಹಿಳೆಯರಿಗೆ ಸರ್ಕಾರಿ ಬಸ್ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಯಿತು.

ನಂತರ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲು ಯುವನಿಧಿ ಯೋಜನೆ ಘೋಷಣೆ ಮಾಡಿ ಶಿವಮೊಗ್ಗದಲ್ಲಿ ಜಾರಿ ಮಾಡಿದೆವು. ಈ ಕಾರ್ಯಕ್ರಮಕ್ಕೆ 1 ಲಕ್ಷ ಯುವಕರು ಭಾಗವಹಿಸಿದ್ದರು. ಅಲ್ಲಿನ ಜನರನ್ನು ನೋಡಿದರೆ ಯಡಿಯೂರಪ್ಪನವರ ಮಗ ಗೆಲ್ಲುವುದು ಅಸಾಧ್ಯ ಎಂಬುದು ಖಚಿತವಾಗುತ್ತದೆ.

ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಬಡ ಕುಟುಂಬಗಳಿಗೆ ಮಾಸಿಕ 5-6 ಸಾವಿರ ಉಳಿತಾಯವಾಗುತ್ತದೆ. ಆಮೂಲಕ ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡಲಾಗಿದೆ. ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ.

ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ಕಾಂಗ್ರೆಸ್ ಪಕ್ಷ ನಿಮ್ಮನ್ನು ನಂಬಿದೆ. ನೀವು ಈ ನಂಬಿಕೆ ಉಳಿಸಿಕೊಳ್ಳಬೇಕು. ನಾವು ದೊಡ್ಡ ಹುದ್ದೆ ಕೊಟ್ಟಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ಸಾಧ್ಯವಾದಷ್ಟು ಗೌರವ ಹಾಗೂ ಅಧಿಕಾರ ನೀಡುತ್ತಿದ್ದೇವೆ.

ಗ್ಯಾರಂಟಿ ಯೋಜನೆಗಳ ಜಾರಿಗೆ ಕರ್ನಾಟಕ ರಾಜ್ಯದ 3.71 ಲಕ್ಷ ಕೋಟಿ ಮೊತ್ತದ ಬಜೆಟ್ ನಲ್ಲಿ 56 ಸಾವಿರ ಕೋಟಿ ಮೀಸಲಿಡಲಾಗಿದೆ. ಅಭಿವೃದ್ಧಿಗೆ 1.20 ಲಕ್ಷ ಕೋಟಿ ಮೀಸಲು ಇಟ್ಟಿದ್ದೇವೆ.

ನಮ್ಮ ಯೋಜನೆಗಳಿಂದ ದೇವಾಲಯಗಳಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿ ಹುಂಡಿ ತುಂಬುತ್ತಿದೆ. ಮಹಿಳೆಯರು ನಿಮ್ಮ ಹೆಸರಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.

ಎಐಸಿಸಿ ನಾಯಕರು ಕೂಡ ಐದು ನ್ಯಾಯ ಯೋಜನೆಗಳನ್ನು ಘೋಷಿಸಿದ್ದು, ಈ ನ್ಯಾಯ ಯೋಜನೆಗಳಲ್ಲಿ ತಲಾ ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮಹಿಳಾ ನ್ಯಾಯ ಯೋಜನೆಯಲ್ಲಿ ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮನೆಯೊಡತಿಯರಿಗೆ ವರ್ಷಕ್ಕೆ 1 ಲಕ್ಷ, ಕೇಂದ್ರದ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮೀಸಲುಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ವೇತನದಲ್ಲಿ ಕೇಂದ್ರದ ಪಾಲು ದುಪ್ಪಟ್ಟು ಮಾಡಲಾಗುವುದು.

ರೈತ ನ್ಯಾಯದಲ್ಲಿ ಕಾನೂನು ಬದ್ಧ ಕನಿಷ್ಠ ಬೆಂಬಲ ಬೆಲೆ, ಕೃಷಿ ಕ್ಷೇತ್ರ ಜಿಎಸ್ಟಿ ಮುಕ್ತ. ಕೃಷಿ ಸಾಲ ಮನ್ನಾ ಆಯೋಗ ಸ್ಥಾಪನೆ.

ಶ್ರಮಿಕ ನ್ಯಾಯದಲ್ಲಿ ಕಾರ್ಮಿಕರಿಗೆ ಆರೋಗ್ಯದ ಹಕ್ಕು, ಕಾರ್ಮಿಕ ವಿರೋಧಿ ಕಾನೂನು ರದ್ದು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ನಗರ ಉದ್ಯೋಗ ಖಾತ್ರಿ. ಹೀಗೆ ಐದು ನ್ಯಾಯ ಯೋಜನೆಯಲ್ಲಿ 25 ಗ್ಯಾರಂಟಿ ಗಳನ್ನ ಘೋಷಣೆ ಮಾಡಲಾಗಿದೆ.

ಈಗ ಈ ಯೋಜನೆಗಳನ್ನು ಜಾರಿಗೊಳಿಸಲು ಈ ಅನುಷ್ಠಾನ ಸಮಿತಿ ಮಾಡಲಾಗಿದೆ. ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಸಮಿತಿ ಮಾಡಿ ಅವರಿಗೆ ಕಚೇರಿ ಹಾಗೂ ಗೌರವಧನ ನೀಡಲಾಗುವುದು. ಇದರ ಜತೆಗೆ ಆರಾಧನ, ಶಿಕ್ಷಣ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುತ್ತಿದೆ.

ನಾವು ನುಡಿದಂತೆ ನಡೆದು ನಿಮಗೆ ಶಕ್ತಿ ನೀಡಿದ್ದೇವೆ. ಈಗ ನೀವು ಪಂಚಾಯ್ತಿ ಮಟ್ಟದಲ್ಲಿ ತಂಡಗಳನ್ನು ರಚಿಸಿ ಮನೆ ಮನೆಗೆ ಹೋಗಿ ಜನರಿಗೆ ಈ ಯೋಜನೆ ತಲುಪಿಸಬೇಕು. ಆಮೂಲಕ ನಮಗೆ ನೀವು ಶಕ್ತಿ ನೀಡಬೇಕು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ.

ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು, ತೆನೆ ಹೊತ್ತ ಮಹಿಳೆ ತೆನೆ ಬಿಸಾಡಿದಳು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಕರ್ನಾಟಕ ಪ್ರಬುದ್ಧವಾಯಿತು, ಕರ್ನಾಟಕ ಸಮೃದ್ಧವಾಯಿತು.

ನಾವು ಎಷ್ಟೇ ದೊಡ್ಡವರಾದರೂ ಕಾರ್ಯಕರ್ತರು. ನಮ್ಮ ಪಕ್ಷದ ಶಾಲು ತ್ರಿವರ್ಣ ಹೊಂದಿದೆ. ಈ ಶಾಲು ಹಾಕಿಕೊಳ್ಳುವ ಅವಕಾಶ ಕಾಂಗ್ರೆಸಿಗರಿಗೆ ಬಿಟ್ಟು ಬೇರೆಯವರಿಗೆ ಇಲ್ಲ. ನೀವು ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲಿಲ್ಲವಾದರೆ ನೀವು ನಾಯಕರಲ್ಲ, ನೀವು ಕೆಲಸ ಮಾಡಿಲ್ಲ ಎಂದರ್ಥ. ಹೀಗಾಗಿ ನೀವು ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತನ್ನಿ, ಪಕ್ಷ ಬಲಪಡಿಸಿ.

 

ಇದನ್ನೂ ಓದಿ...

Back to top button
>