ರಾಜ್ಯ

2ನೇ ಅತೀ ದೊಡ್ಡ ‘electoral bond’ ಖರೀದಿದಾರ ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ FIR!

CBI FIR against Megha Engineering, the 2nd biggest 'electoral bond' buyer!

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರೀಯ ತನಿಖಾ ದಳ  ದೇಶದ 2ನೇ ಅತೀ ದೊಡ್ಡ ಚುನಾವಣಾ ಬಾಂಡ್  ಖರೀದಿದಾರ ಸಂಸ್ಥೆ ಮೇಘಾ ಇಂಜಿನಿಯರಿಂಗ್  ವಿರುದ್ಧ ಎಫ್ ಐಆರ್  ದಾಖಲಿಸಿದೆ.

ಮೂಲಗಳ ಪ್ರಕಾರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಘಾ ಇಂಜಿನಿಯರಿಂಗ್ ಸಂಸ್ಥೆ  ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದ್ದು, ಜಗದಲ್‌ಪುರ ಸ್ಟೀಲ್ ಪ್ಲಾಂಟ್‌ಗೆ ಸಂಬಂಧಿಸಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ 174 ಕೋಟಿ ರೂಪಾಯಿಗಳ ಬಿಲ್‌ಗಳನ್ನು ತೆರವುಗೊಳಿಸಲು ಸುಮಾರು 78 ಲಕ್ಷ ರೂಪಾಯಿ ಲಂಚ ನೀಡಿದ ಆರೋಪದ ಮೇಲೆ ಮೇಘಾ ಇಂಜಿನಿಯರಿಂಗ್‌ ಸಂಸ್ಥೆ ಮತ್ತು ಎನ್‌ಐಎಸ್‌ಪಿ, ಎನ್‌ಎಂಡಿಸಿಯ 8 ಅಧಿಕಾರಿಗಳು ಮತ್ತು ಮೆಕಾನ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ದಾಖಲಾದ FIRನ ಪ್ರಕಾರ, ಜಗದಲ್‌ಪುರದಲ್ಲಿ ಉಕ್ಕಿನ ಸ್ಥಾವರದಲ್ಲಿನ ಇಂಟೆಕ್‌ವೆಲ್, ಪಂಪ್‌ಹೌಸ್ ಮತ್ತು ಕ್ರಾಸ್ ಕಂಟ್ರಿ ಪೈಪ್‌ಲೈನ್‌ನ ಕಾಮಗಾರಿಗಳಿಗೆ ಸಂಬಂಧಿಸಿದ 315 ಕೋಟಿ ರೂ.ಗಳ ಯೋಜನೆಯಲ್ಲಿ ಲಂಚದ ಆರೋಪದ ಬಗ್ಗೆ ಸಿಬಿಐ 2023 ರ ಆಗಸ್ಟ್ 10 ರಂದು ಪ್ರಾಥಮಿಕ ವಿಚಾರಣೆಯನ್ನು ದಾಖಲಿಸಿತ್ತು.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಮಾರ್ಚ್ 31 ರಂದು ಸಲ್ಲಿಸಲಾದ ಲಂಚದ ಆರೋಪದ ಬಗ್ಗೆ ನಿಯಮಿತ ಪ್ರಕರಣವನ್ನು ದಾಖಲಿಸಲು ಮಾರ್ಚ್ 18 ರಂದು ಶಿಫಾರಸು ಮಾಡಲಾಗಿತ್ತು.

ಎಫ್ ಐಆರ್ ನಲ್ಲಿ ಸಿಬಿಐ ಎನ್‌ಐಎಸ್‌ಪಿ ಮತ್ತು ಎನ್‌ಎಂಡಿಸಿ ಲಿಮಿಟೆಡ್‌ನ 8 ಅಧಿಕಾರಿಗಳನ್ನು ಹೆಸರಿಸಿದ್ದು, ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ದಾಶ್, ನಿರ್ದೇಶಕ (ಉತ್ಪಾದನೆ) ಡಿಕೆ ಮೊಹಾಂತಿ, ಡಿಜಿಎಂ ಪಿಕೆ ಭುಯಾನ್, ಡಿಎಂ ನರೇಶ್ ಬಾಬು, ಹಿರಿಯ ವ್ಯವಸ್ಥಾಪಕ ಸುಬ್ರೊ ಬ್ಯಾನರ್ಜಿ, ನಿವೃತ್ತ ಸಿಜಿಎಂ (ಹಣಕಾಸು) ಎಲ್ ಕೃಷ್ಣ ಮೋಹನ್, ಜಿಎಂ ( ಹಣಕಾಸು) ಕೆ ರಾಜಶೇಖರ್, ವ್ಯವಸ್ಥಾಪಕ (ಹಣಕಾಸು) ಸೋಮನಾಥ್ ಘೋಷ್ ಅವರು 73.85 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಮಾತ್ರವಲ್ಲದೇ ಎಫ್ ಐಆರ್ ನಲ್ಲಿ MECON ಲಿಮಿಟೆಡ್‌ನ ಇಬ್ಬರು ಅಧಿಕಾರಿಗಳನ್ನು ಹೆಸರಿಸಿದ್ದು, ಸಂಸ್ಥೆಯ ಗುತ್ತಿಗೆ ವಿಭಾಗದ ಮುಖ್ಯಸ್ಥ ಸಂಜೀವ್ ಸಹಾಯ್ ಮತ್ತು K ಇಳವರಸು ಅವರು NMDC ಲಿಮಿಟೆಡ್‌ನಿಂದ 174.41 ಕೋಟಿ ರೂಪಾಯಿ ಪಾವತಿಗೆ ಬದಲಾಗಿ MEIL  ಜನರಲ್ ಮ್ಯಾನೇಜರ್ ಸುಭಾಷ್ ಚಂದ್ರ ಸಂಗ್ರಾಸ್ ಮತ್ತು ಮೇಘಾ ಇಂಜಿನಿಯರಿಂಗ್ ಮತ್ತು ಅಪರಿಚಿತರರಿಂದ ಸುಮಾರು 5.01 ಲಕ್ಷ ರೂಗಳನ್ನು ಪಡೆದಿದ್ದರು ಎಂದು ಉಲ್ಲೇಖಿಸಲಾಗಿದೆ.

2ನೇ ಅತೀ ದೊಡ್ಡ ಚುನಾವಣಾ ಬಾಂಡ್ ಖರೀದಿದಾರ, ಬಿಜೆಪಿಗೆ ಸಿಂಹಪಾಲು

ಮಾರ್ಚ್ 21 ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಮೇಘಾ ಇಂಜಿನಿಯರಿಂಗ್ ಚುನಾವಣಾ ಬಾಂಡ್‌ಗಳ ಎರಡನೇ ಅತಿ ದೊಡ್ಡ ಖರೀದಿದಾರರಾಗಿದ್ದು, 966 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿ ಮಾಡಿದೆ.

ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ ಬಿಜೆಪಿಗೆ 586 ಕೋಟಿ ರೂ. ದೇಣಿಗೆ ನೀಡಿದ್ದು, ತೆಲಂಗಾಣದ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್‌ ಪಕ್ಷಕ್ಕೆ ರೂ 195 ಕೋಟಿ, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ರೂ 85 ಕೋಟಿ ಮತ್ತು ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿಗೆ ರೂ 37 ಕೋಟಿ ದೇಣಿಗೆ ನೀಡಿದೆ.

ಅಂತೆಯೇ ಅಂಧ್ರ ಪ್ರದೇಶದ ವಿಪಕ್ಷ ತೆಲುಗು ದೇಶಂ ಪಕ್ಷ (TDP) ಗೆ ಸುಮಾರು 25 ಕೋಟಿ ರೂ., ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷಕ್ಕೆ 17 ಕೋಟಿ ರೂ. ಕರ್ನಾಟಕದ ಜೆಡಿಎಸ್, ಪವನ್ ಕಲ್ಯಾಣ್ ನೇತೃತ್ವದ ಆಂಧ್ರ ಪ್ರೇದಶದ ಜನಸೇನಾ ಪಾರ್ಟಿ, ಬಿಹಾರದ ಜೆಡಿಯು ಪಕ್ಷಕ್ಕೂ 5 ರಿಂದ 10 ಕೋಟಿಯವರೆಗಿನ ಸಣ್ಣ ಮೊತ್ತವನ್ನು ದೇಣಿಗೆ ನೀಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ...

Back to top button
>