ರಾಜಕೀಯರಾಜ್ಯ

ಬೆಂಗಳೂರಿನಲ್ಲಿ ಮೊದಲ ದಿನವೇ ಮನೆಯಿಂದ 4,459 ಮಂದಿ ಮತದಾನ

In Bangalore, 4,459 people voted from home on the first day

  • ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಮನೆಯಿಂದ ಮತದಾನ (ವಿಎಫ್‌ಹೆಚ್) ಹಂತ-2ರ ಅಡಿಯಲ್ಲಿ ಶನಿವಾರದಿಂದ ಮತದಾನ ಪ್ರಾರಂಭವಾಗಿದ್ದು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ 85 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಂಗವಿಕಲರಲ್ಲಿ 4,459 ಮಂದಿ ಮನೆಯಿಂದಲೇ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ಪ್ರಕಾರ, ಬೆಂಗಳೂರು ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರಗಳಾದ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಸೆಂಟ್ರಲ್‌ನಲ್ಲಿ 4,459 ಮಂದಿ ಮತ ಚಲಾಯಿಸಿದ್ದಾರೆ. ಬೆಂಗಳೂರು ಸೆಂಟ್ರಲ್‌ನಲ್ಲಿ 1,337 (ಶೇ 74.82), ಬೆಂಗಳೂರು ಉತ್ತರದಲ್ಲಿ 985 (ಶೇ 54.83) ಮತ್ತು ಬೆಂಗಳೂರು ದಕ್ಷಿಣದಲ್ಲಿ 1,313 (ಶೇ 59.04) ಜನರು ಮತ ಚಲಾಯಿಸಿದ್ದಾರೆ.

ಮಹದೇವಪುರ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ಯಲಹಂಕ ಒಳಗೊಂಡ ಬೆಂಗಳೂರು ನಗರದಲ್ಲಿ ಒಟ್ಟು 824 ಮಂದಿ ಮತದಾನ ಮಾಡಿದ್ದು, ಶೇ 40.31ರಷ್ಟು ಮತದಾನವಾಗಿದೆ.

ಮಾಹಿತಿ ಪ್ರಕಾರ, 16 ಮತದಾರರು ಗೈರುಹಾಜರಾಗಿದ್ದರು ಮತ್ತು ಇಬ್ಬರು ಮತ ಚಲಾಯಿಸಲು ನಿರಾಕರಿಸಿದ್ದಾರೆ. ಮನೆಯಿಂದ ಮತದಾನಕ್ಕೆ ನೋಂದಾಯಿಸಿಕೊಂಡವರಲ್ಲಿ 18 ಮಂದಿ ಸಾವಿಗೀಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಅಂಗವಾಗಿ ಮನೆಯಿಂದ ಮತದಾನ (ವಿಎಫ್‌ಹೆಚ್) ಹಂತ-2ರ ಅಡಿಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸಲು ಒಟ್ಟು ಐದು ದಿನಗಳನ್ನು ನಿಗದಿಪಡಿಸಲಾಗಿದೆ. ಚುನಾವಣಾಧಿಕಾರಿಗಳ ತಂಡ ನೋಂದಾಯಿತರ ಮನೆಗೆ ತೆರಳಿ ಅಂಚೆ ಮತದಾನಕ್ಕೆ ಅವಕಾಶ ನೀಡಲಿದೆ.

ಇದನ್ನೂ ಓದಿ...

Back to top button
>