- ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಟೆಕ್ ಸಿಟಿ ಆಗಿದ್ದ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಈಗ ಟ್ಯಾಂಕರ್ ಸಿಟಿ ಮಾಡಿದೆ. ಇಡೀ ನಗರ ಈಗ ಟ್ಯಾಂಕರ್ ಮಾಫಿಯಾದ ಕೈಯಲ್ಲಿ ಸಿಲುಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿ ಅಪಾಯಕಾರಿಯಾಗಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ನಮ್ಮ ಮಕ್ಕಳ ಮೇಲೆ ಹಲ್ಲೆ ನಡೆಯುತ್ತಿದೆ. ಇದು ಸಾಮಾನ್ಯ ವಿಚಾರವಲ್ಲ. ಕಾಂಗ್ರೆಸ್ ಬಗ್ಗೆ ಆದಷ್ಟು ಅಲರ್ಟ್ ಆಗಿರಿ ಎಂದು ಹೇಳಿದರು.
ಬೆಂಗಳೂರನ್ನು ಅದ್ಭುತ ನಗರವಾಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಎನ್ಡಿಎ ಅವಧಿಯಲ್ಲಿ ತೆರಿಗೆ ಪದ್ಧತಿ ಬದಲಾವಣೆಯಾಗಿದೆ. ಜಿಎಸ್ಟಿ ಜಾರಿ ನಂತರ ಪರೋಕ್ಷ ತೆರಿಗೆ ಹೊರೆ ತಪ್ಪಿದೆ. 2014, 2019ರ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಗೆಲ್ಲಿಸಿದ್ರಿ. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸಂಕಷ್ಟದಲ್ಲಿತ್ತು, ಈಗ ಬದಲಾಗಿದೆ ಎಂದರು.
2014ರಲ್ಲಿ ಬೆಂಗಳೂರಿನಲ್ಲಿ ಕೇವಲ 17 ಕಿ.ಮೀ. ಮೆಟ್ರೋ ರೈಲು ಮಾರ್ಗ ಇತ್ತು. ಈಗ ಅದು 70 ಕಿ.ಮೀ.ಗೆ ವಿಸ್ತರಿಸಿದೆ. ಹಳದಿ ಮಾರ್ಗವೂ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ. ಉಪನಗರ ರೈಲು ಯೋಜನೆಯೂ ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
21ನೇ ಶತಮಾನದಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ. ಇಡೀ ದೇಶವೇ ನನ್ನ ಪರಿವಾರವಾಗಿದೆ. INDIA ಮೈತ್ರಿಕೂಟಕ್ಕೆ ಅವರವರ ಕುಟುಂಬವೇ ಮುಖ್ಯವಾಗಿದೆ. ಇದೇ NDA ಮತ್ತು INDIA ಮೈತ್ರಿಕೂಟಕ್ಕೆ ಇರುವ ವ್ಯತ್ಯಾಸ ಎಂದರು.
ಭಾರತದಲ್ಲಿ ಹೂಡಿಕೆಗೆ ಇಂದು ಹಲವು ದೇಶಗಳು ಉತ್ಸುಕವಾಗಿವೆ. ಭಾರತದ ಗೆಳೆತನ ಮಾಡಲು ಎಲ್ಲಾ ದೇಶಗಳು ಹಾತೊರೆಯುತ್ತಿವೆ. ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತ ಯಾರನ್ನೂ ಅನುಸರಿಸುತ್ತಿಲ್ಲ. ಆದರೆ ಬೇರೆಯವರು ನಮ್ಮನ್ನು ಅನುಸರಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.