ರಾಜಕೀಯರಾಜ್ಯ

ಸಿದ್ದರಾಮಯ್ಯ ಸರ್ಕಾರದಲ್ಲಿ ಮತಾಂಧ ಶಕ್ತಿ ಹೆಚ್ಚಾಗಿದೆ, ಕನ್ನಡಿಗರ ಬದುಕಿಗೆ ಗ್ಯಾರಂಟಿ ಇಲ್ಲದಾಗಿದೆ: ಬಿ ಎಸ್ ಯಡಿಯೂರಪ್ಪ

Fanatical power has increased in Siddaramaiah government, life of Kannadigas is not guaranteed: BS Yeddyurappa

  • ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಲೋಕಸಭೆ ಚುನಾವಣೆ 2024ಕ್ಕೆ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಇನ್ನು ಐದು ದಿನಗಳು ಬಾಕಿಯಷ್ಟೆ. ಈ ಸಂದರ್ಭದಲ್ಲಿ ಇಂದು ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರ ಬದುಕಿಗೆ ಗ್ಯಾರಂಟಿ ಇಲ್ಲ. ರಾಜ್ಯದಲ್ಲಿ ಕೊಲೆ, ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದೊಂದು ಕ್ರೂರ ಸರ್ಕಾರ ಎಂದು ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ನಡೆದಿದೆ. ಸಿದ್ದರಾಮಯ್ಯ ಅವರು ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ನ್ಯಾಯ ಕೊಡಿಸಿಲ್ಲ ಎಂದು ವಾಗ್ದಾಳಿ ಮಾಡಿದರು.

ಭಾರತದ ಭವಿಷ್ಯಕ್ಕೆ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಕಾರು ಹಾಯಿಸಿದ್ದಾರೆ. ಕಲಾವಿದರಾದ ಹರ್ಷಿಕಾ ಪೂಣಚ್ಚ ಮೇಲೆ ಹಲ್ಲೆ ಮಾಡಿದ್ದಾರೆ. ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿ ಅಮಾನುಷವಾಗಿ ನಡೆದುಕೊಂಡರೂ ಕ್ರಮ ಕೈಗೊಂಡಿಲ್ಲ. ಕೋಲಾರ ಮತ್ತು ಶಿವಮೊಗ್ಗದಲ್ಲಿ ಔರಂಗಜೇಬ್ ಕಟೌಟ್​​ ಹಾಕಿದ್ದರು. ಮಂಡ್ಯದಲ್ಲಿ ಪೊಲೀಸ್​ ಅಧಿಕಾರಿಗಳ ಮೂಲಕ ಹನುಮ ಧ್ವಜ ಇಳಿಸಿದ್ದಾರೆ. ಇದೊಂದು ಕ್ರೂರ ಸರ್ಕಾರ. ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಳೆದೊಂದು ವರ್ಷದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ನಂತರ ಆಗಿರುವ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿದರು.

ಗ್ಯಾರಂಟಿ ಬಗ್ಗೆ ಗ್ಯಾರಂಟಿಯಿಲ್ಲ: ರಾಜ್ಯದ ಜನತೆ ಸರ್ಕಾರದ ಗ್ಯಾರಂಟಿ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಜನರಿಗೆ ನೀರು, ವಿದ್ಯುತ್ ಗ್ಯಾರಂಟಿ ಇಲ್ಲ. ತೆರಿಗೆ ಹೆಚ್ಚಳವಾಗಿದೆ. ಸಿದ್ದರಾಮಯ್ಯ ಸರ್ಕಾರ ಮತಾಂಧ ಶಕ್ತಿಯನ್ನು ತಮ್ಮ ಆಡಳಿತದ ಭಾಗವಾಗಿ ಮಾಡಿಕೊಂಡಿದೆ. ಸರ್ಕಾರ ಬಂದು ಒಂದೇ ವರ್ಷದಲ್ಲಿ ಮತಾಂಧರು ರಾಜ್ಯವನ್ನು ಯುದ್ಧಭೂಮಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ನೀಡುತ್ತಿದ್ದ ಹಣ ನಿಲ್ಲಿಸಿದ್ದಾರೆ. ಇದೊಂದು ಕಲ್ಲು ಬಂಡೆ ಸರ್ಕಾರ. ಸರ್ಕಾರ ದಿವಾಳಿಯಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ನೀರಾವರಿ ವ್ಯವಸ್ಥೆ ನೆಲ ಕಚ್ಚಿದೆ. ಕನಿಷ್ಠ ಒಂದು ಕಿಮೀನಷ್ಟೂ ರಸ್ತೆ ಮಾಡಿಲ್ಲ ಎಂದು ಹೇಳಿದರು.

ಕಾಂಗ್ರೆಸ್​ ನಾಯಕರ ಕಾರ್ಯಕ್ರಮಗಳಲ್ಲಿ ಜನ ಸೇರುತ್ತಿಲ್ಲ. ಅದಕ್ಕೆ ಜಾಹೀರಾತು ನೀಡುತ್ತಿದ್ದಾರೆ. ಪೊಳ್ಳು ಭರವಸೆ ನೀಡುವ ಜಾಹೀರಾತು ಯಾರು ನಂಬಲ್ಲ. ಚುನಾವಣೆ ಬಳಿಕ ನಾವೆಲ್ಲ ಸೇರೋಣ. ಆಗ ವಾತಾವರಣ ಸ್ಪಷ್ಟವಾಗಿ ತಿಳಿಯುತ್ತೆ. ಜನ ಮೋದಿ ಮೋದಿ ಅಂತಿದ್ದಾರೆ. ಕಾಂಗ್ರೆಸ್​ನವರು ಹತಾಶರಾಗಿದ್ದಾರೆ. ಕಾಂಗ್ರೆಸ್​ನವರು ಗೆಲ್ಲುವ ನಾಲ್ಕೈದು ಕ್ಷೇತ್ರ ಯಾವುದು ಅಂತ ತಿಳಿಸಲಿ ಎಂದರು.

ಇಡೀ ದೇಶದಲ್ಲಿ ಮೋದಿ ವಾತಾವರಣವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​ ಒಂದೂ ಕ್ಷೇತ್ರ ಕೂಡ ಗೆಲ್ಲಲ್ಲ. ಇಂದಿನಿಂದ ನಾನು ಮತ್ತೆ ಪ್ರವಾಸ ಮಾಡುತ್ತಿದ್ದೇನೆ. ನಮ್ಮ ಕಾರ್ಯಕ್ರಮಗಳಲ್ಲಿ ಜನರು ನಿರೀಕ್ಷೆಗೆ ಮೀರಿ‌ ಸೇರುತ್ತಿದ್ದಾರೆ. ಜನರು ನಮ್ಮ ಪರವಾಗಿ ಇದ್ದಾರೆ ಎಂದರು.

ಇದನ್ನೂ ಓದಿ...

Back to top button
>