ರಾಜಕೀಯರಾಜ್ಯ

ನಾವು ಮೋದಿಯನ್ನು ಹೆದರಿಸಲು ಯತ್ನಿಸುತ್ತಿಲ್ಲ, ಅವರೇ ಐಟಿ, ಇಡಿ ಮೂಲಕ ಎಲ್ಲರಿಗೂ ಹೆದರಿಸುತ್ತಿದ್ದಾರೆ: ಖರ್ಗೆ

We are not trying to scare Modi, he is scaring everyone through IT, ED: Kharge

  • ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹಲವು ಭರವಸೆಗಳಲ್ಲಿ ಒಂದನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇಂದು ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, “ಮೋದಿಜಿ ಸಬ್ಕಾ ವಿಕಾಸ್(ಎಲ್ಲರ ಅಭಿವೃದ್ಧಿ) ಎಂಬ ಭರವಸೆ ನೀಡಿದ್ದರು. ಆದರೆ ವಾಸ್ತವವಾಗಿ ನಡೆದದ್ದು ಸಬ್ಕಾ ಸತ್ಯನಾಶ್(ಎಲ್ಲರ ವಿನಾಶ)” ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದರು.

“ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಹಾಗಾಗಿ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ಹೊರಗೆ ಬಚ್ಚಿಟ್ಟಿದ್ದ ಕಪ್ಪುಹಣವನ್ನು ವಾಪಸ್ ತರುವುದಾಗಿ ಹೇಳಿದ್ದರು. ಅಲ್ಲದೆ ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ನೀಡಿ, 2022 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಮತ್ತು ಪ್ರತಿ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಒಂದೇ ಒಂದು ಭರವಸೆಯನ್ನು ಅವರು ಈಡೇರಿಸಿಲ್ಲ ಎಂದರು.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್‌ ಎಂದು ಹೇಳಿದ ಅವರು, ಬಿಜೆಪಿ ಎಂದಿಗೂ ಸ್ವಾತಂತ್ರ್ಯ ಮತ್ತು ದೇಶದ ಅಭಿವೃದ್ಧಿಗಾಗಿ ಹೋರಾಡಲಿಲ್ಲ. ಆದರೂ ಅವರು ದೇಶಪ್ರೇಮದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ ಎಂದರು.

ಮೋದಿ ಮುಂದೆ ನೆಹರೂ, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಏನೂ ಅಲ್ಲ ಎನ್ನುವಷ್ಟು ಮಾತನಾಡುತ್ತಾರೆ. ಮೋದಿಜಿಯೇ ಸರ್ವಸ್ವ ಬಿಜೆಪಿ ಹೇಳುತ್ತಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು, ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳ ನಿವಾರಣೆಗಾಗಿ ಕಾಂಗ್ರೆಸ್ ಪ್ರಸಕ್ತ ಚುನಾವಣೆಯಲ್ಲಿ ಹೋರಾಟ ನಡೆಸುತ್ತಿದೆ ಎಂದು ಖರ್ಗೆ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖರ್ಗೆ, “ನಾವು ಮೋದಿಜಿಯನ್ನು ಹೆದರಿಸಲು ಪ್ರಯತ್ನಿಸುತ್ತಿಲ್ಲ. ಮೋದಿಜಿಯೇ ಎಲ್ಲರಿಗೂ ಹೆದರಿಸುತ್ತಿದ್ದಾರೆ. ಅವರು ಸಿಬಿಐ, ಐಟಿ, ಇಡಿ ಮೂಲಕ ಜನರನ್ನು ಹೆದರಿಸುತ್ತಿದ್ದಾರೆ. 10 ವರ್ಷಗಳಲ್ಲಿ(ಯುಪಿಎ ಇದ್ದಾಗ) ಯಾರೊಬ್ಬರ ಮಂಗಳಸೂತ್ರವನ್ನು ಕಿತ್ತುಕೊಳ್ಳುವ ಬಗ್ಗೆ ಮನಮೋಹನ್ ಸಿಂಗ್ ಅವರು ಮಾತನಾಡಿರುವುದನ್ನು ನೀವು ಕೇಳಿದ್ದೀರಾ? ಅವರು ಯಾರಿಗಾದರೂ ಕೆಟ್ಟದಾಗಿ ಮಾತನಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ...

Back to top button
>