ಸೂರತ್: ರಾಹುಲ್ ಗಾಂಧಿ ವಿರುದ್ಧ 2019ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣ ಕುರಿತು ಗುರುವಾರ ತೀರ್ಪು ನೀಡಿದ ಗುಜರಾತ್ ಹೈಕೋರ್ಟ್ ರಾಹುಲ್ ಅವರು ತಪ್ಪಿತಸ್ಥರು ಎಂದಿದೆ. ಈ ಸಂಬಂಧ 2 ವರ್ಷ ಜೈಲು ಅಥವಾ ದಂಡ ಪಾವತಿಯ ಶಿಕ್ಷೆ ವಿಧಿಸಿದೆ.
‘ಮೋದಿ‘ ಎಂಬ ಉಪನಾಮದ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ವರಿಷ್ಠರೊಬ್ಬರು ರಾಹುಲ್ ಗಾಂಧಿ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
2019ರ ಲೋಕಸಭೆ ಚುನಾವಣೆಗಾಗಿ ಕೋಲಾರದಲ್ಲಿ ಮಾಡಿದ ಪ್ರಚಾರ ಭಾಷಣದಲ್ಲಿ ರಾಹುಲ್ ಅವರು, ‘ಅದು ಹೇಗೆ ಕಳ್ಳರ ಹೆಸರಿನಲ್ಲಿ ಸಾಮಾನ್ಯವಾಗಿ ‘ಮೋದಿ‘ ಎಂಬ ಉಪನಾಮ ಕಂಡುಬರುತ್ತದೆ‘ ಎಂದಿದ್ದರು. ಈ ಹೇಳಿಕೆಗೆ ಸಂಬಂಧಿಸಿ ಅಂದು ಗುಜರಾತ್‌ನ ಸಚಿವರಾಗಿದ್ದ ಪೂರ್ಣೇಶ್ ಮೋದಿ ಎಂಬವರು ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ಅಂತಿಮ ವಿಚಾರಣೆ ನಡೆಸಿ ಎರಡೂ ಕಡೆಯ ವಾದಗಳನ್ನೂ ಆಲಿಸಿದ್ದ ನ್ಯಾಯಾಲಯ ಮಾರ್ಚ್ 23ರಂದು ತೀರ್ಪು ಕಾಯ್ದಿರಿಸಿತ್ತು.
ರಾಹುಲ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.