ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆ (ಮಾರ್ಚ್ 25) ಬಿಡುಗಡೆ ಮಾಡಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಅಳೆದು ತೂಗಿ ಅಖೈರುಗೊಳಿಸಿರುವ ಈ ಲಿಸ್ಟ್ ನಲ್ಲಿ 8 ಮಂದಿ ಮುಸ್ಲಿಂರು, 6 ಮಂದಿ ಮಹಿಳೆಯರಿಗೆ ಟಿಕೆಟ್ ಘೋಷಿಸಲಾಗಿದೆ. ಅಪ್ಪ-ಮಗ, ಅಪ್ಪ-ಮಗಳಿಗೂ ಮಣೆ ಹಾಕಲಾಗಿದೆ. ಇದರಲ್ಲಿ ಪಕ್ಷಾಂತರಿಗಳೂ ಇದ್ದಾರೆ.
ರಾಮನಗರದಿಂದ ಡಿಕೆ ಸುರೇಶ್ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿ ಇಕ್ಬಾಲ್ ಹುಸೇನ್ಗೆ ಮತ್ತೊಮ್ಮೆ ಟಿಕೆಟ್ ಘೋಷಣೆ ಮಾಡಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. ಎಐಸಿಸಿ ಇಲ್ಲಿ ಡಿಕೆಸು ಸ್ಪರ್ಧೆಗೆ ಅವಕಾಶ ನೀಡಿಲ್ಲ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದಿನಂತೆ ಕನಕಪುರದಿಂದ ಸ್ಪರ್ಧಿಸಿದರೆ, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣಾದಲ್ಲಿ ನಿಲ್ಲುತ್ತಿದ್ದಾರೆ. ಅವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಇಲ್ಲಿ ಟಿಕೆಟ್ ನೀಡಿಲ್ಲ.
ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಬಾದಾಮಿಯನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದರು, ಆದರೆ ಪಕ್ಷದ ನಾಯಕತ್ವವು ಇದು ರಿಸ್ಕಿ ಕ್ಷೇತ್ರ ಎಂದು ಎಚ್ಚರಿಕೆ ನೀಡಿದ ನಂತರ ಹಿಂದೆ ಸರಿದಿದ್ದರು.
ವರುಣಾದಿಂದ ತಮ್ಮ ಉಮೇದುವಾರಿಕೆಯನ್ನು ಖಚಿತಪಡಿಸಿರುವ ಮಾಜಿ ಸಿಎಂ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಶುಕ್ರವಾರ ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ ಕೋಲಾರದ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಹೀಗಾಗಿ ಕುತೂಹಲ ಹೆಚ್ಚಿದೆ.
ತಂದೆ-ಮಗ, ತಂದೆ-ಮಗಳಿಗೆ ಟಿಕೆಟ್
ಏಳು ಬಾರಿ ಸಂಸದರಾಗಿದ್ದ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕೆ ಎಚ್ ಮುನಿಯಪ್ಪ ಅವರು ರಾಜ್ಯ ರಾಜಕೀಯಕ್ಕೆ ಮರಳಿದ್ದಾರೆ. ದೇವನಹಳ್ಳಿಯಿಂದ ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಹಾಗೂ ಕೆಜಿಎಫ್ನಿಂದ ಅವರ ಪುತ್ರಿ ರೂಪಾ ಶಶಿಧರ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯಾರೆಡ್ಡಿಗೆ ಬಿಟಿಎಂ ಲೇಔಟ್ ಹಾಗೂ ಜಯನಗರದಿಂದ ಟಿಕೆಟ್ ಘೋಷಣೆಯಾಗಿದೆ. ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಎಸ್ಎಸ್ ಮಲ್ಲಿಕಾರ್ಜುನ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅವರ ತಂದೆ 91 ವರ್ಷದ ಶಾಮನೂರು ಶಿವಶಂಕರಪ್ಪ, ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಂ ಕೃಷ್ಣಪ್ಪ ಟಿಕೆಟ್ ಪಡೆದರೆ, ಪಕ್ಕದ ಗೋವಿಂದರಾಜ್ ನಗರ ಕ್ಷೇತ್ರದಿಂದ ಕಳೆದ ಸಾರಿ ಸೋಲನುಭವಿಸಿದ್ದ ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣಗೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ಪಡೆದಿರುವ ಪಕ್ಷದ ಹಿರಿಯ ನಾಯಕರಲ್ಲಿ ಜಿ.ಪರಮೇಶ್ವರ-ಕೊರಟಗೆರೆ, ಆರ್.ವಿ.ದೇಶಪಾಂಡೆ- ಹಳಿಯಾಳ, ಎಚ್.ಕೆ.ಪಾಟೀಲ್-ಗದಗ, ಎಂ.ಬಿ.ಪಾಟೀಲ್ (ಪ್ರಚಾರ ಸಮಿತಿ ಮುಖ್ಯಸ್ಥ)- ಬಬಲೇಶ್ವರ, ಪ್ರಿಯಾಂಕ್ ಖರ್ಗೆ (ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ)- ಚಿತಾಪುರ, ಕೆ.ಆರ್.ರಮೇಶಕುಮಾರ್ ( ಮಾಜಿ ಸ್ಪೀಕರ್) – ಶ್ರೀನಿವಾಸಪುರ, ಈಶ್ವರ ಖಂಡ್ರೆ (ಕಾರ್ಯಾಧ್ಯಕ್ಷ) – ಭಾಲ್ಕಿ, ಸತೀಶ್ ಜಾರಕಿಹೊಳಿ (ಕಾರ್ಯಾಧ್ಯಕ್ಷ) – ಯೆಮಕನಮರಡಿ, ಕೆಜೆ ಜಾರ್ಜ್ – ಸರ್ವಜ್ಞನಗರ, ದಿನೇಶ್ ಗುಂಡೂರಾವ್ – ಗಾಂಧಿ ನಗರ.
ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ 70 ಹಾಲಿ ಶಾಸಕರ ಪೈಕಿ 61 ಮಂದಿಗೆ ಮಾತ್ರ ಟಿಕೆಟ್ ಘೋಷಿಸಲಾಗಿದೆ. 6 ಮಂದಿ ಮಹಿಳೆಯರು, 8 ಮಂದಿ ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಜಮೀರ್ ಅಹಮದ್, ಖತೀಜಾ ಫಾತಿಮಾ ರಹೀಮ್ ಖಾನ್, ರಿಜ್ವಾನ್ ಅರ್ಷದ್, ತನ್ವೀರ್ ಸೇಠ್, ಯುಟಿ ಖಾದರ್, ಎನ್ ಎ ಹ್ಯಾರಿಸ್ ಹಾಗೂ ಇಕ್ಬಾಲ್ ಹುಸೈನ್ಗೆ ಟಿಕೆಟ್ ನೀಡಲಾಗಿದೆ.