India Cricket Schedule: ಐಪಿಎಲ್16ನೇ ಸೀಸನ್ ಮುಗಿದ ಬಳಿಕ ಟೀಮ್ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದೆ. ಇದರ ಬಳಿಕವೂ ಟೀಮ್ ಇಂಡಿಯಾ ಸಖತ್ ಬ್ಯುಸಿಯಾಗಲಿದೆ. ಬ್ಯಾಕ್ ಟು ಬ್ಯಾಕ್ ಸರಣಿಗಳನ್ನು ಆಡುವ ಮೂಲಕ ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸಲಿದೆ.
ಮಾರ್ಚ್ 31 ರಿಂದ ಮೇ 28ರವರೆಗೆ ಕ್ರಿಕೆಟ್ ಪ್ರೇಮಿಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮನರಂಜನೆಯ ಹಬ್ಬದೂಟ ಉಣಬಡಿಸಲಿದೆ. ರನ್ ಸಂಗ್ರಾಮದಲ್ಲಿ ಕ್ರಿಕೆಟ್ ಪ್ರಿಯರು ಮಿಂದೇಳಲಿದ್ದಾರೆ. 58 ದಿನಗಳ ಕಾಲ ನಡೆಯಲಿರುವ ರಂಗು ರಂಗಿನ ಆಟದಲ್ಲಿ ಕ್ರಿಕೆಟಿಗರು ತಮ್ಮ ಅಬ್ಬರದ ಪ್ರದರ್ಶನ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಆದರೆ ಐಪಿಎಲ್ ನಂತರ ಈ ಮನರಂಜನೆ ದೂರವಾಗಲಿದೆ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅದಕ್ಕಾಗಿ ಟೀಮ್ ಇಂಡಿಯಾ ನಾನ್ಸ್ಟಾಪ್ ಎಂಟರ್ಟೈನ್ಮೆಂಟ್ ನೀಡಲು ಸಜ್ಜಾಗಿದೆ.
ಎರಡು ತಿಂಗಳ ನಂತರ ಟೀಮ್ ಇಂಡಿಯಾ ಬಿಡುವಿಲ್ಲದೆ ಸರಣಿಗಳನ್ನು ಆಡಲು ತಯಾರಿ ನಡೆಸಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿ ನಂತರ, ಭಾರತೀಯ ಆಟಗಾರರು ಪ್ರಸ್ತುತ ಐಪಿಎಲ್ಗಾಗಿ ತಯಾರಿ ನಡೆಸುತ್ತಿದ್ದಾರೆ. T20 ಲೀಗ್‌ನ 16ನೇ ಸೀಸನ್ ಮುಗಿದ ಬಳಿಕವೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದ್ದಾರೆ. ಈಗಾಗಲೇ ಸಿದ್ಧವಾದ ವೇಳಾಪಟ್ಟಿಗೆ ಇನ್ನೂ ಕೆಲವು ಪಂದ್ಯಗಳು ಸೇರ್ಪಡೆಗೊಂಡಿದ್ದು, ಟೀಮ್ ಇಂಡಿಯಾ ಮತ್ತಷ್ಟು ಬ್ಯುಸಿಯಾಗಲಿದೆ.
ಜೂನ್ 7ರಿಂದ WTC ಫೈನಲ್
ಐಪಿಎಲ್ ಮೇ 28ಕ್ಕೆ ಕೊನೆಗೊಳ್ಳಲಿದೆ. ನಂತರ ಭಾರತ ತಂಡದ ಸಂಪೂರ್ಣ ಗಮನ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮೇಲಿರಲಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಡಬ್ಲ್ಯುಟಿಸಿಯ ಅಂತಿಮ ಪಂದ್ಯ, ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವಲ್‌ನಲ್ಲಿ ನಡೆಯಲಿದೆ. ಈ ಫೈನಲ್ ಮುಗಿದ ತಕ್ಷಣ ಯಾವುದೇ ವಿಶ್ರಾಂತಿ ಪಡೆಯದೇ, ಭಾರತ ಇತರೆ ಪಂದ್ಯಗಳಲ್ಲಿ ಬ್ಯುಸಿಯಾಗಲಿದೆ.
WTC ಫೈನಲ್ ನಂತರ ODI ಸರಣಿ
ಕ್ರಿಕ್‌ಬಜ್ ವರದಿಯ ಪ್ರಕಾರ, ಈ ಫೈನಲ್ ನಂತರ ಜೂನ್ನಲ್ಲಿ 3 ಪಂದ್ಯಗಳ ODI ಸರಣಿ ನಡೆಸಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಸಿದ್ಧತೆಯ ಭಾಗವಾಗಿ ಈ ಸರಣಿಯನ್ನು ಆಯೋಜಿಸಲು ಬಿಸಿಸಿಐ ಉದ್ದೇಶಿಸಿದೆ. ಇದಕ್ಕಾಗಿ ಶ್ರೀಲಂಕಾ, ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ಗಳ ಜೊತೆ ಚರ್ಚೆ ನಡೆಸುತ್ತಿದೆ. ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಹೆಚ್ಚುವರಿ ಪಂದ್ಯಗಳು
ಏಕದಿನ ಸರಣಿ ಬಳಿಕ ಜುಲೈ-ಆಗಸ್ಟ್‌ನಲ್ಲಿ ಭಾರತ, ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಏಕದಿನ, ಟಿ20 ಸರಣಿಯಲ್ಲಿ ತಲಾ 3 ಪಂದ್ಯಗಳು, 2 ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು. ಇದೀಗ T20 ಸರಣಿಯಲ್ಲಿ ಇನ್ನೆರಡು ಪಂದ್ಯಗಳನ್ನು ಸೇರ್ಪಡೆಗೊಳಿಸಲಾಗಿದೆ. ಬಿಸಿಸಿಐ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ ನಡುವೆ ಒಪ್ಪಂದ ನಡೆದಿದೆ. ಆದರೆ, ಅಧಿಕೃತವಾಗಿ ಇನ್ನೂ ಘೋಷಣೆಯಾಗಿಲ್ಲ. ಹಾಗಾಗಿ 3 ಟಿ20 ಪಂದ್ಯಗಳು 5 ಚುಟುಕು ಪಂದ್ಯಗಳಾಗಿದೆ. ಈ ಪ್ರವಾಸದಲ್ಲಿ ಭಾರತ 10 ಪಂದ್ಯಗಳಲ್ಲಿ ವಿಂಡೀಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಐರ್ಲೆಂಡ್ ವಿರುದ್ಧ ಚುಟುಕು ಸರಣಿ!
ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯವಾದ ತಕ್ಷಣವೇ ಐರ್ಲೆಂಡ್ ಎದುರು ಚುಟುಕು ಸರಣಿಗೆ ಸಜ್ಜಾಗಲಿದೆ. ಐರ್ಲೆಂಡ್ ಎದುರು ಟೀಮ್ ಇಂಡಿಯಾ 3 ಟಿ20 ಪಂದ್ಯಗಳನ್ನು ಆಡಲಿದೆ.
ನಂತರ ಏಷ್ಯಾಕಪ್
ಏಕದಿನ ವಿಶ್ವಕಪ್‌ಗೆ ಪೂರ್ವಭಾವಿ ಸಿದ್ಧತೆಯಾಗಿ ಟೀಮ್ ಇಂಡಿಯಾ, ಏಷ್ಯಾಕಪ್ ಟೂರ್ನಿಯಲ್ಲಿ ಭಾಗಿಯಾಗಲಿದೆ. ಏಷ್ಯಾದ 6 ತಂಡಗಳ ನಡುವೆ ನಡೆಯುವ ಈ ಕದನದಲ್ಲಿ ಟೀಮ್ ಇಂಡಿಯಾ ಕೂಡ ಪಾಲ್ಗೊಳ್ಳಲಿದೆ. ಈ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದು, ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
ಆಸಿಸ್ ವಿರುದ್ಧ ಮತ್ತೆ ಸರಣಿ
ವಿಶ್ವಕಪ್ಗೂ ಮುಂಚಿತವಾಗಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಒಡಿಐ ಸಿರೀಸ್ನಲ್ಲಿ ಆಸಿಸ್ ವಿರುದ್ಧ ಸೋಲು ಕಂಡಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಕಾಂಗರೂಗಳ ಎದುರು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.
ತವರಿನಲ್ಲಿ ಏಕದಿನ ವಿಶ್ವಕಪ್
ವರದಿಗಳ ಪ್ರಕಾರ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಈ ಮೆಗಾ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಿದೆ. 2011ರ ಬಳಿಕ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗುತ್ತಿರುವ ಟೀಮ್ ಇಂಡಿಯಾ ಈ ಬಾರಿ ಮತ್ತೆ ತವರಿನಲ್ಲೇ ಟ್ರೋಫಿಗೆ ಮುತ್ತಿಕ್ಕಲು ಸಿದ್ಧತೆ ನಡೆಸಲಿದೆ. ಒಟ್ನಲ್ಲಿ ಐಪಿಎಲ್ ಬಳಿಕ ನವೆಂಬರ್ವರೆಗೂ ಟೀಮ್ ಇಂಡಿಯಾ ನಾನ್ಸ್ಟಾಪ್ ಎಂಟರ್ಟೈನ್ಮೆಂಟ್ ನೀಡುವುದು ಪಕ್ಕಾ.