ಸಿನಿಮಾಸಿನಿಮಾ ಸುದ್ದಿ

ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು

A photographer must adapt to technology

ಬೆಂಗಳೂರು: ಚಲನಚಿತ್ರ ಛಾಯಾಗ್ರಹಣ ‘ಸೆಲ್ಯುಲಾಯ್ಡ್‌’ನಿಂದ ‘ಡಾಲ್ಬಿ ವಿಷನ್ಸ್‌ಗೆ’ಬಂದು ನಿಂತಿದೆ. ಕ್ಯಾಮೆರಾ ಕೆಲಸವಿಂದು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಛಾಯಾಗ್ರಾಹಕ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ‘ಆರ್‌ಆರ್‌ಆರ್‌’ ಚಿತ್ರದ ಛಾಯಾಗ್ರಾಹಕ ಕೆ.ಕೆ.ಸೆಂಥಿಲ್‌ ಕುಮಾರ್‌ ಹೇಳಿದರು.
14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಡಾಲ್ಬಿ ವಿಷನ್ಸ್‌ ಎಂದರೆ ಲಂಡನ್‌ನ ಡಾಲ್ಬಿ ಸಂಸ್ಥೆ ಅಭಿವೃದ್ಧಿಗೊಳಿಸಿದ ವಿಡಿಯೊ ತಂತ್ರಜ್ಞಾನ. ಇದರಲ್ಲಿ ಸಿನಿಮಾದ ದೃಶ್ಯಗಳು ಈಗಿನ 4ಕೆ, 6ಕೆ ತಂತ್ರಜ್ಞಾನಗಳಿಗಿಂತ ಭಿನ್ನ ಅನುಭವ ನೀಡುತ್ತವೆ. ಆಸ್ಕರ್‌ ಪ್ರಶಸ್ತಿ ವಿಜೇತ ‘ಆರ್‌ಆರ್‌ಆರ್’ ಈ ತಂತ್ರಜ್ಞಾನದಲ್ಲಿ ಚಿತ್ರೀಕರಣಗೊಂಡ ಭಾರತದ ಮೊದಲ ಚಿತ್ರ’ ಎಂದರು.

ಅದ್ದೂರಿ ಸಿನಿಮಾದ ಚಿತ್ರೀಕರಣದ ವೇಳೆ ಒಬ್ಬ ಛಾಯಾಗ್ರಾಹಕ ಎದುರಿಸುವ ಸವಾಲು, ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತು ಅವರು ಮಾತನಾಡಿದರು.

‘ಆರ್‌ಆರ್‌ಆರ್’ ಚಿತ್ರದ ದೃಶ್ಯಗಳನ್ನು ಅನೇಕ ವಿದೇಶಿ ಛಾಯಾಗ್ರಾಹಕರು ಮೆಚ್ಚಿಕೊಂಡಿರುವುದನ್ನು ಉಲ್ಲೇಖಿಸಿದ ಅವರು, ‘ಒಂದು ಕಾಲಕ್ಕೆ ಹಾಲಿವುಡ್‌ನ ಲೈಟಿಂಗ್‌, ಕ್ಯಾಮೆರಾಗಳು ನಮಗೆ ಮಾದರಿಯಾಗಿತ್ತು. ನಮ್ಮಲ್ಲಿಯೂ ಈಗ ಅಲ್ಲಿನ ಎಲ್ಲ ತಂತ್ರಜ್ಞಾನಗಳು ಲಭ್ಯವಿದ್ದು, ಅಲ್ಲಿನವರು ನಮ್ಮನ್ನು ಗಮನಿಸುವ ರೀತಿಯ ಕೆಲಸ ಮಾಡಬೇಕು. ‘ಆರ್‌ಆರ್‌ಆರ್‌’ಗೆ ಆಸ್ಕರ್‌ ಬಂದಿರುವುದು ಅವರೆಲ್ಲರೂ ಭಾರತೀಯ ಚಿತ್ರರಂಗದತ್ತ ತಿರುಗಿನೋಡುವಂತಾಗಿದೆ’ ಎಂದರು.

‘ಆರ್‌ಆರ್‌ಆರ್‌’ ಚಿತ್ರದ ಒಂದು ಫೈಟಿಂಗ್‌ ದೃಶ್ಯವನ್ನು ಸುಮಾರು 60 ದಿನಗಳ ಕಾಲ ಚಿತ್ರೀಕರಿಸಿದ್ದೆವು. ಇದಕ್ಕಾಗಿ ಸಾಕಷ್ಟು ದಿನ ಸಿದ್ಧತೆ ಮಾಡಿಕೊಂಡಿದ್ದೆವು. ನಿರ್ದೇಶಕನ ದೃಷ್ಟಿಕೋನಕ್ಕೆ ಹೊಂದಿಕೊಂಡು ದೃಶ್ಯಗಳನ್ನು ಸೆರೆ ಹಿಡಿಯುವುದು ಛಾಯಾಗ್ರಾಹಕನ ಎದುರಿಗಿರುವ ಸವಾಲು. ವಿಎಫ್‌ಎಕ್ಸ್‌, ಕಲರ್‌ ಗ್ರೇಡಿಂಗ್‌ನಂತಹ ತಂತ್ರಜ್ಞಾನಗಳು ಇಂದು ಚಿತ್ರೀಕರಣದ ಪ್ರಕ್ರಿಯೆಯನ್ನು ಮೊದಲಿಗಿಂತ ಸುಲಭವಾಗಿಸಿವೆ. ಮೊದಲಿನಂತೆ ರೀಲುಗಳನ್ನು ಹಿಡಿದುಕೊಂಡು ಸ್ಟುಡಿಯೊಗಳಿಗೆ ಸುತ್ತಾಡಬೇಕಿಲ್ಲ’ ಎಂದರು.

ಬಾಲಿವುಡ್‌ ಛಾಯಾಗ್ರಾಹಕ ರವಿ ಕೆ.ಚಂದರ್‌ ಅವರು, 20 ವರ್ಷಗಳ ಹಿಂದಿನ ಕ್ಯಾಮೆರಾ ತಂತ್ರಜ್ಞಾನಕ್ಕೂ, ಇಂದಿನ ತಂತ್ರಜ್ಞಾನಕ್ಕೂ ಇರುವ ವ್ಯತ್ಯಾಸ, ದೃಶ್ಯಗಳ ಬೆಳಕಿನ ಸಂಯೋಜನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಕುರಿತು ವಿವರಿಸಿದರು. ಕಲರ್‌ ಗ್ರೇಡಿಂಗ್‌ ಎಂಬುದು ಹೇಗೆ ದೃಶ್ಯಗಳ ನೋಟ ಮತ್ತು ಅನುಭವವನ್ನು ಬದಲಿಸಬಹುದು ಎಂಬ ಮಾಹಿತಿ ನೀಡಿದರು. 20 ವರ್ಷಗಳ ಹಿಂದೆ ರೀಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಇದ್ದ ಆತಂಕದ ದಿನಗಳನ್ನು ಮೆಲುಕು ಹಾಕಿದರು. ಸಂಜಯ್‌ ಲೀಲಾ ಬನ್ಸಾಲಿಯಂತಹ ಬಣ್ಣಗಳೊಂದಿಗೆ ಆಟ ಆಡುವ, ತೆರೆಯ ಮೇಲೆ ದೃಶ್ಯ ವೈಭವ ಕಟ್ಟಿಕೊಡುವ ನಿರ್ದೇಶಕನ ಜೊತೆಗೆ ಕೆಲಸ ಮಾಡುವಾಗ ಇರುವ ಸವಾಲುಗಳು, ಸಿದ್ಧತೆ ಕುರಿತು ವಿವರಿಸಿದರು.

ಹಲವು ಹೆಂಡತಿ ಜೊತೆಗಿನ ಸಂಸಾರ!

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್‌ ಮಾತನಾಡಿ, ‘ಛಾಯಾಗ್ರಾಹಕ ಹಲವು ಹೆಂಡತಿಯರ ಜತೆ ಸಂಸಾರ ನಡೆಸುತ್ತಾನೆ. ಪ್ರತಿ ಸಿನಿಮಾದ ಪ್ರತಿ ನಿರ್ದೇಶಕನೂ ಛಾಯಾಗ್ರಾಹಕನ ಪಾಲಿಗೆ ಹೊಸ ಹೆಂಡತಿ ಇದ್ದಂತೆ. ಆತನ ದೃಷ್ಟಿಕೋನ ಅರ್ಥಮಾಡಿಕೊಂಡು ದೃಶ್ಯಗಳನ್ನು ಸೆರೆ ಹಿಡಿಯಬೇಕು’ ಎಂದು ಲಘು ದಾಟಿಯಲ್ಲಿ ನುಡಿದರು.

ಇದನ್ನೂ ಓದಿ...

Back to top button
>