ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಮುಂಬೈ: ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಆ ದೇಶದ ಮೊದಲ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಪಾತ್ರರಾದರು.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಪುರುಷರ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಇಬ್ರಾಹಿಂ ಚೊಚ್ಚಲ ಶತಕ ಬಾರಿಸಿದರು. ವಿಶ್ವಕಪ್ ನಲ್ಲಿ ಅವರು ಮೂರನೇ ಬಾರಿಗೆ ತಮ್ಮ ದೇಶಕ್ಕಾಗಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು.
21 ವರ್ಷ ವಯಸ್ಸಿನ ಇಬ್ರಾಹಿಂ, 131 ಎಸೆತಗಳಲ್ಲಿ ಏಳು ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು. 2015ರ ವಿಶ್ವಕಪ್ ನಲ್ಲಿ ದುನೇಡಿನ್ ನಲ್ಲಿ ಸ್ಕಾಟ್ ಲೆಂಡ್ ವಿರುದ್ಧ ಅಪ್ಘಾನ್ ಆಟಗಾರ ಸಮಿವುಲ್ಲಾ ಶಿನ್ವಾರಿ 96 ರನ್ ಗಳಿಸಿದ್ದರು.
ಈ ಹಿಂದೆ ಚೆನ್ನೈನಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಜದ್ರಾನ್ 87 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ಆರಂಭಿಕರಾಗಿ ಕ್ರೀಸ್ ಗೆ ಇಳಿದ ಅವರ ಅಜೇಯ 129 ರನ್ ಗಳಿಸುವ ಮೂಲಕ ಅಪ್ಘಾನಿಸ್ತಾನ ಆಸೀಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಜದ್ರಾನ್ ಅವರ ಸಾಧನೆಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಪಾನ್ ಪಠಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.