Uncategorizedರಾಜ್ಯ

ಈ ಉದ್ಯೋಗ ಕಡಿತದ ಕಾಲದಲ್ಲಿ ಸ್ಟಾರ್ಟಪ್‌ ಉದ್ಯೋಗಕ್ಕೆ ಸೇರುವುದು ಸುರಕ್ಷಿತವೇ?

Is it safe to join a startup job in this time of job cuts?

ದೇಶದಲ್ಲೀಗ ಸಾಕಷ್ಟು ನವೋದ್ಯಮಗಳು ಯಶಸ್ಸು ಪಡೆದಿವೆ. ಹಲವು ಹೊಸ ನವೋದ್ಯಮಗಳು ಹೊಸ ಕನಸಿನೊಂದಿಗೆ ಆರಂಭವಾಗುತ್ತಿವೆ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ನವೋದ್ಯಮಗಳಿಗೆ ಸಾಕಷ್ಟು ಸವಾಲುಗಳೂ ಇವೆ. ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ಪಡೆಯುವ ಹೊಸ ಉದ್ಯೋಗಿಗಳು ಯಶಸ್ಸು ಪಡೆಯುವುದು ಹೇಗೆ? ವಿವಿಧ ತಜ್ಞರು ಈ ಕುರಿತು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.

ಕಂಪನಿ ಸ್ಥಿರವಾಗಿರುವುದೇ ನೋಡಿ
“ಸ್ಟಾರ್ಟಪ್‌ ನೀಡಿರುವ ಜಾಬ್‌ ಆಫರ್‌ಗೆ ಓಕೆ ಎಂದು ಹೇಳುವ ಮುನ್ನ ಆ ಕಂಪನಿಯ ಕುರಿತು ಸಾಕಷ್ಟು ರಿಸರ್ಚ್‌ ಮಾಡಿ. ಅದರ ವೆಬ್‌ಸೈಟ್‌ ಪರಿಶೀಲಿಸಿ. ಆ ಕಂಪನಿಯ ಕುರಿತು ಗೂಗಲ್‌ನಲ್ಲಿ ಸುದ್ದಿ ಮತ್ತು ಲೇಖನಗಳನ್ನು ಓದಿ. ಕಂಪನಿಯ ಸಂಸ್ಕೃತಿಯನ್ನು ಮತ್ತು ಉದ್ಯೋಗಿಗಳ ಒಟ್ಟಾರೆ ತೃಪ್ತಿ ಅರ್ಥ ಮಾಡಿಕೊಳ್ಳಲು ಗ್ಲಾಸ್‌ಡೋರ್‌ನಂತಹ ವೆಬ್‌ಸೈಟ್‌ಗಳಲ್ಲಿ ವಿಮರ್ಶೆಗಳನ್ನು ಓದಿ. ಕಂಪನಿಯು ಸ್ಥಿರವಾಗಿದೆಯೇ, ಉದ್ಯೋಗಿಗಳು ತೃಪ್ತಿಯಾಗಿ ಕೆಲಸ ಮಾಡಿದ್ದಾರೆಯೇ? ಇತ್ಯಾದಿ ತಿಳಿದುಕೊಳ್ಳಲು ಇದು ನಿಮಗೆ ನೆರವಾಗುತ್ತದೆ. ಉದ್ಯೋಗ ಸಂದರ್ಶನದ ಸಮಯದಲ್ಲಿಯೂ ಕಂಪನಿಯ ಸ್ಥಿರತೆ, ಭವಿಷ್ಯದ ಯೋಜನೆಗಳ ಕುರಿತು ಪ್ರಶ್ನಿಸಲು ಹಿಂಜರಿಯಬೇಡಿ” ಎಂದು ದಿ ಫ್ರಾಗ್ರನ್ಸ್ ಪೀಪಲ್‌ನ ಸಂಸ್ಥಾಪಕ ಡಾ. ದೀಪಕ್ ಜೈನ್ ಸಲಹೆ ನೀಡಿದ್ದಾರೆ.

ಕಲಿಕೆಗೆ ಗಮನ ನೀಡಿ
“ನಿಮಗೆ ಸ್ಟಾರ್ಟಪ್‌ನಲ್ಲಿ ಉದ್ಯೋಗ ದೊರಕಿದಾಗ ಆ ಕಂಪನಿ ಮತ್ತು ಅದರ ಕಾರ್ಯಾಚರಣೆಗಳ ಕುರಿತು ಕಲಿಯಿರಿ. ಕಂಪನಿಗೆ ಮೌಲ್ಯಯುತ ಉದ್ಯೋಗಿಯಾಗಲು, ನಿಮ್ಮ ಉದ್ಯೋಗ ಭದ್ರತೆ ಹೆಚ್ಚಿಸಲು ಇದು ನೆರವಾಗುತ್ತದೆ. ಕಂಪನಿಯ ಯಶಸ್ಸಿಗೆ ನೆರವಾಗುವ ಕೊಡುಗೆ ನೀಡಿ. ಇದರಿಂದ ನೀವು ಆ ತಂಡದ ಮೌಲ್ಯಯುತ ಸದಸ್ಯರಾಗುವಿರಿ. ನಿಮ್ಮ ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರ ಜತೆ ಉತ್ತಮ ಬಾಂಧವ್ಯ ಇರಲಿ” ಎಂದು ಸ್ಪೇಸ್‌ಮಂತ್ರದ ಸಂಸ್ಥಾಪಕಿ ನಿಧಿ ಅಗರ್‌ವಾಲ್ ಸಲಹೆ ನೀಡಿದ್ದಾರೆ.

ಸವಾಲಿನ ಅನುಭವ ಪಾಠ
“ಸ್ಟಾರ್ಟಪ್‌ಗಳ ಕುರಿತು ಸ್ಪಷ್ಟವಾದ ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟ. ಕಂಪನಿಯ ಕಾರ್ಯತಂತ್ರ, ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಿದ್ಧರಾಗಿರಿ. ಕಂಪನಿಯ ಸಂಸ್ಕೃತಿ, ಕೆಲಸ ಮತ್ತು ಜೀವನದ ಸಮತೋಲನ, ಉದ್ಯೋಗದ ರೀತಿ ತಿಳಿದುಕೊಳ್ಳಲು ಫ್ರೆಶರ್‌ಗಳು ಆ ಕಂಪನಿಯಲ್ಲಿ ಹಿಂದೆ ಕೆಲಸ ಮಾಡಿದ ಉದ್ಯೋಗಿಗಳ ಮೂಲಕ ತಿಳಿದುಕೊಳ್ಳಬಹುದು. ಲಿಂಕ್ಡ್‌ಇನ್‌ ಇತ್ಯಾದಿಗಳಲ್ಲಿ ಹಳೆ ಉದ್ಯೋಗಿಗಳನ್ನು ಕನೆಕ್ಟ್‌ ಆಗಬಹುದು. ಕಂಪನಿಯ ಜಾಬ್‌ ಕಟ್‌ ಇತಿಹಾಸ, ಸಂಸ್ಥೆಯು ಉದ್ಯೋಗಿಗಳ ಜತೆ ವರ್ತನೆ ಇತ್ಯಾದಿಗಳನ್ನು ತಿಳಿದುಕೊಳ್ಳಿ. ಉದ್ಯೋಗ ಕಡಿತದ ಸಮಯದಲ್ಲಿ ಸ್ಟಾರ್ಟಪ್‌ ಉದ್ಯೋಗ ಪಡೆಯುವುದು ಆರಂಭದಲ್ಲಿ ಸವಾಲು ಎನಿಸಬಹುದು. ಆದರೆ, ಸಾಕಷ್ಟು ಕಲಿಕೆಗೆ ಇದು ನೆರವಾಗಬಹುದು. ಕೆಲಸದ ಅನುಭವ ಹೆಚ್ಚಬಹುದು” ಎಂದು ಫ್ಯಾಟ್ ಟೈಗರ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಸಾಹಿಲ್ ಆರ್ಯ ಹೇಳಿದ್ದಾರೆ.

ಪ್ರಶ್ನೆ ಕೇಳಲು ಹಿಂಜರಿಯಬೇಡಿ
“ಉದ್ಯೋಗಕ್ಕೆ ಸೇರುವ ಮೊದಲು ಕಂಪನಿಯ ಆರ್ಥಿಕ ಸ್ಥಿತಿ, ಹಣಕಾಸಿನ ಇತಿಹಾಸ, ಉದ್ಯಮದ ಸ್ಥಿತಿಯನ್ನು ರಿಸರ್ಚ್‌ ಮಾಡುವುದು ಅಗತ್ಯ. ಸ್ಟಾರ್ಟಪ್‌ ಕೆಲಸಕ್ಕೆ ಸೇರಿದಾಗ ಸರಿಯಾದ ಆನ್‌ಬೋರ್ಡಿಂಗ್‌ ಪ್ರಕ್ರಿಯೆ ಇಲ್ಲದೆ ಇರಬಹುದು. ಹೀಗಾಗಿ ಕೆಲಸಕ್ಕೆ ಸೇರುವಾಗಲೇ ನಿಮ್ಮೆಲ್ಲ ಸಂದೇಹಗಳನ್ನು ಕೇಳಿ ಬಗೆಹರಿಸಿಕೊಳ್ಳಿ. ಉದ್ಯೋಗದಲ್ಲಿ ಸಕಾರಾತ್ಮಕ ಮನೋಭಾವ ಅಗತ್ಯ ಇದರಿಂದ ನೀವು ಕೆಲಸದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ನಿಮ್ಮ ಉತ್ಪಾದಕತೆಯೂ ಹೆಚ್ಚುತ್ತದೆ” ಎಂದು ಸರಾಫ್ ಫರ್ನಿಚರ್‌ನ ಸಂಸ್ಥಾಪಕ ಮತ್ತು ಸಿಇಒ ರಘುನಂದನ್ ಸರಾಫ್ ಸಲಹೆ ನೀಡಿದ್ದಾರೆ.

ಜಾಬ್‌ಕಟ್‌ ಇತಿಹಾಸ ತಿಳಿದುಕೊಳ್ಳಿ
“ಸ್ಟಾರ್ಟ್‌ಅಪ್‌ಗೆ ಸೇರುವ ಮೊದಲು, ಕಂಪನಿಯ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಕಂಪನಿಯ ಆರ್ಥಿಕ ಸ್ಥಿತಿಯನ್ನು ಸಂಶೋಧಿಸಿ. ಇತ್ತೀಚಿಗೆ ಮಾಡಿರುವ ಜಾಬ್‌ ಕಟ್‌ ಬಗ್ಗೆ ತಿಳಿದುಕೊಳ್ಳಿ. ಇದರಿಂದ ಆ ಕಂಪನಿಯಲ್ಲಿ ನೀವು ಏನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಉತ್ತರ ದೊರಕುತ್ತದೆ. ಉದ್ಯೋಗಕ್ಕೆ ಸೇರಿದ ಮೇಲೆ ಅಲ್ಲಿ ನಿಮ್ಮ ಹುದ್ದೆ ಮತ್ತು ಹೊಸ ಜವಾಬ್ದಾರಿಗಳನ್ನು ಪಡೆದುಕೊಳ್ಳಲು ತಯಾರಾಗಿ. ಅಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಪಡೆದುಕೊಂಡು ಕೆಲಸದ ಮೇಲೆ ಉತ್ಸುಕರಾಗಿದ್ದೀರಿ ಎಂದು ತೋರಿಸಿ. ವೃತ್ತಿಜೀವನದಲ್ಲಿ ನಿಮ್ಮ ಗುರಿ ಸಾಧನೆಗೆ ಸ್ಟಾರ್ಟಪ್‌ ಕೆಲಸದ ಅನುಭವ ನಿಮಗೆ ಹೊಸ ಮೆಟ್ಟಿಲಾಗಬಹುದು” ಎಂದು ಫೈಂಡ್‌ಇಂಕ್ ಸಂಸ್ಥಾಪಕ ಹರಿಯೋಮ್ ಸೇಥ್ ಸಲಹೆ ನೀಡಿದ್ದಾರೆ.

ಜಾಬ್‌ ಕಟ್‌ಗೆ ಹೆದರಬೇಡಿ
“ಉದ್ಯೋಗ ಕಡಿತದ ಈ ಕಾಲದಲ್ಲಿ ಸ್ಟಾರ್ಟಪ್‌ ಉದ್ಯೋಗಕ್ಕೆ ಪ್ರವೇಶಿಸುವುದು ಸವಾಲಿನ ಅನುಭವ ನೀಡಬಹುದು. ಇಲ್ಲಿ ಯಶಸ್ಸು ಪಡೆಯಲು ಹಲವು ಸಲಹೆಗಳನ್ನು ನೀಡಬಹುದು. ಮೊದಲನೆಯದಾಗಿ ಕಂಪನಿಯೊಂದಕ್ಕೆ ಸೇರುವ ಮೊದಲು ಆ ಕಂಪನಿಯ ಕುರಿತು ಸರಿಯಾಗಿ ರಿಸರ್ಚ್‌ ಮಾಡಿ. ಕಂಪನಿಯ ಆರ್ಥಿಕತೆ, ಉದ್ಯೋಗ ಕಡಿತ ಇತ್ಯಾದಿಗಳನ್ನು ತಿಳಿದುಕೊಳ್ಳಿ. ಇದರಿಂದ ಕಂಪನಿಯ ಈಗಿನ ಸ್ಥಿತಿಯೇನು ಎಂದು ತಿಳಿದುಕೊಳ್ಳಬಹುದು. ಉದ್ಯೋಗಕ್ಕೆ ಸೇರಿದ ಮೇಲೆ ನಿಮ್ಮ ಹುದ್ದೆಯನ್ನು ಯಾವ ರೀತಿ ನಿಭಾಯಿಸುವಿರಿ ಎನ್ನುವುದು ಮುಖ್ಯವಾಗುತ್ತದೆ. ಕಂಪನಿಯ ಯಶಸ್ಸಿನಲ್ಲಿ ನಿಮ್ಮ ಪಾತ್ರವಿರಬೇಕು. ಸಹೋದ್ಯೋಗಿಗಳು ಮತ್ತು ಕಂಪನಿಯ ಸ್ಥಾಪಕರ ಜತೆ ಉತ್ತಮ ಸಂಬಂಧವಿರಲಿ. ಅನಿರೀಕ್ಷಿತ ಸಂದರ್ಭದಲ್ಲಿ ಜಾಬ್‌ ಕಟ್‌ ಆಗಬಹುದು ಎಂದು ಅರ್ಥಮಾಡಿಕೊಂಡು ಸವಾಲಿಗೆ ಸಿದ್ಧರಾಗಿ ಕೆಲಸ ಮಾಡಿ” ಎಂದು ನೆಟ್‌ಸೆಟ್‌ಗೋ ಮೀಡಿಐಆದ ಸಂಸ್ಥಾಪಕರಾದ ಸಂದೀಪ್ ರಾಣಾ ಸಲಹೆ ನೀಡಿದ್ದಾರೆ.

ಇದನ್ನೂ ಓದಿ...

Back to top button
>