
ಭಟಿಂಡಾ: ನಿನ್ನೆ ಪಂಜಾಬ್‌ನ ಭಟಿಂಡಾದಲ್ಲಿರುವ ಭಾರತೀಯ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ, ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈ ಪೈಕಿ ಇಬ್ಬರು ಯೋಧರು ಕರ್ನಾಟಕದವರಾಗಿದ್ದು, ಗುಂಡಿನ ದಾಳಿ ನಡೆಸಿದ ಶಂಕೆಯ ಮೇಲೆ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫಿರಂಗಿ ಘಟಕದ ಅಧಿಕಾರಿಗಳ ಮೆಸ್ ಬಳಿಯ ಬ್ಯಾರಕ್‌ನಲ್ಲಿ ಮುಂಜಾನೆ 4:30 ರ ಸುಮಾರಿಗೆ ಗುಂಡಿನ ದಾಳಿ ನಡೆದಾಗ, ಅಲವಲಿ ಮಲಗಿದ್ದ ನಾಲ್ವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಬಿಳಿ ಕುರ್ತಾ-ಪೈಜಾಮಾದಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು, ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಭಟಿಂಡಾ ಪೊಲೀಸರು ತಿಳಿಸಿದ್ದಾರೆ.
‘‘ನಾವು ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಇದೊಂದು ಭಯೋತ್ಪಾದಕ ಕೃತ್ಯವಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ದಾಳಿಯನ್ನು ಮಿಲಿಟರಿ ಸ್ಟೇಷನ್‌ನಲ್ಲಿ ಇದ್ದ ಸೇನಾ ಸಿಬ್ಬಂದಿಯೇ ನಡೆಸಿದ್ದಾರೆಯೇ ಎಂಬುದು ಕೂಡ ಇನ್ನೂ ಸ್ಪಷ್ಟವಾಗಿಲ್ಲ..’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಘಟನೆಯ ಮಾಹಿತಿ ನೀಡಿದ್ದಾರೆ. ಅಲ್ಲದೇ ಭಟಿಂಡಾ ಪೊಲೀಸರೂ ಕೂಡ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದವರೆಸಿದ್ದು, ಸೇನಾ ಠಾಣೆಯಲ್ಲಿನ ಭದ್ರತಾ ಲೋಪ ಇದೀಗ ಚರ್ಚೆಗೆ ಕಾರಣವಾಗಿದೆ.
ಎರಡು ದಿನಗಳ ಹಿಂದೆ ಈ ಸೇನಾ ಠಾಣೆಯಿಂದ 28 ಸುತ್ತು ಮದ್ದುಗುಂಡು ಮತ್ತು ಐಎನ್‌ಎಸ್‌ಎಎಸ್ ರೈಫಲ್ ನಾಪತ್ತೆಯಾಗಿತ್ತು. ದಾಳಿಗೆ ಇದೇ ರೈಫಲ್ ಮತ್ತು ಮದ್ದುಗುಂಡು ಬಳಸಿರುವುದು ಸ್ಪಷ್ವವಾಗಿದ್ದು, ಇದೇ ಠಾಣೆಯ ಸಿಬ್ಬಂದಿಯೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಸಾಗರ್ ಬನ್ನೆ (25) ಮತ್ತು ಯೋಗೇಶ್ ಕುಮಾರ್ ಜೆ (24) ಸಂತೋಷ್ ಎಂ ನಾಗರಾಳ್ (25) ಮತ್ತು ಕಮಲೇಶ್ ಆರ್ (24) ಈ ದಾಳಿಯಲ್ಲಿ ಹುತಾತ್ಮರಾಗಿದ್ದು, ಹುತಾತ್ಮರಾದ ಯೋಧರಲ್ಲಿ ಇಬ್ಬರು ಕರ್ನಾಟಕದವರು ಮತ್ತು ಇನ್ನಿಬ್ಬರು ತಮಿಳುನಾಡಿನವರಾಗಿದ್ದಾರೆ. ಭಟಿಂಡಾ ಮಿಲಿಟರಿ ನಿಲ್ದಾಣವು ದೇಶದ ಅತಿದೊಡ್ಡ ಸೇನಾ ನೆಲೆಗಳಲ್ಲಿ ಒಂದಾಗಿದೆ ಮತ್ತು ಇದು ಪಡೆಗಳ ಗಮನಾರ್ಹ ಸಂಖ್ಯೆಯ ಕಾರ್ಯಾಚರಣೆಯ ಘಟಕಗಳನ್ನು ಒಳಗೊಂಡಿದೆ.
ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯನ್ನು ಇನ್ನೂ ಬಂಧಿಸಲಾಗಿಲ್ಲ. ಪೊಲೀಸ್ ತನಿಖೆಯ ನೇತೃತ್ವ ವಹಿಸಿದ್ದ ಭಟಿಂಡಾ ಪೊಲೀಸ್ ಅಧೀಕ್ಷಕ ಅಜಯ್ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಿ, ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾದ INSAS ರೈಫಲ್ ಮತ್ತು 19 ಖಾಲಿ ಶೆಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.